ಮನೋರಂಜನೆ

ಬಾಹುಬಲಿ ಚಂದಮಾಮ ಕತೆಗೆ ಗ್ರಾಫಿಕ್‌ ಲೇಪ

Pinterest LinkedIn Tumblr

bahubali_leadಇದು ಸಿನಿಮಾದ ಆರಂಭನಾ ಅಥವಾ ಅಂತ್ಯನಾ? – ಹೀಗೊಂದು ಸಣ್ಣ ಗೊಂದಲದೊಂದಿಗೆ ಪ್ರೇಕ್ಷಕ “ಬಾಹುಬಲಿ’ಯಿಂದ ಎದ್ದು ಬರುತ್ತಾನೆ. ಆದರೆ, ನಿರ್ದೇಶಕ ರಾಜ್‌ಮೌಳಿ ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ.”ದಿ ಕನ್‌ಕ್ಲೂಶನ್‌ 2016′ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲವನ್ನು ಕಾಯ್ದಿರಿಸಿದ್ದಾರೆ. ಇಡೀ ಭಾರತೀಯ ಚಿತ್ರರಂಗ ಎದುರು ನೋಡಿದ ಸಿನಿಮಾ “ಬಾಹುಬಲಿ’. ಸಿನಿಮಾದ ಒಂದೊಂದೇ ಗೆಟಪ್‌ಗ್ಳನ್ನು, ಮೇಕಿಂಗ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕೂಡಾ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಲೇ ಬಂತು. ಆ ಕುತೂಹಲ ಒಂದು ಮಟ್ಟಕ್ಕಷ್ಟೇ ಈಗ ತಣಿದಿದೆ. ಜೊತೆಗೆ ಮುಂದಿನ ವರ್ಷಕ್ಕೂ ಮುಂದುವರಿದಿದೆ.

“ಬಾಹುಬಲಿ’ಯನ್ನು ಐತಿಹಾಸಿಕ ಅಥವಾ ಪೌರಾಣಿಕ ಎಂದು ಹೇಳುವಂತಿಲ್ಲ. ಏಕೆಂದರೆ ಇದೊಂದು ಚರಿತ್ರೆಯಿಂದ ಪ್ರೇರಿತವಾದ ಒಂದು ರಾಜಮನೆತನದ ಕಾಲ್ಪನಿಕ ಕಥೆ. ಆದರೆ, ರಾಜ್‌ಮೌಳಿ ಅವರ ಉದ್ದೇಶ, ಗುರಿ ಸ್ಪಷ್ಟವಾಗಿದೆ. ಏನು ಹೇಳಬೇಕು ಮತ್ತು ಹೇಗೆ ಹೇಳಬೇಕೆಂಬುದನ್ನು ಅವರಿಗೆ ಚೆನ್ನಾಗಿ ಗೊತ್ತಿದ್ದರಿಂದ ಇಡೀ ಸಿನಿಮಾ ಒಂದು ಸುಂದರ ಕಲಾಕೃತಿಯಂತೆ ಮೂಡಿಬಂದಿದೆ. ಮಾಹಿಷ್ಮತಿ ಎಂಬ ಸಾಮ್ರಾಜ್ಯ, ಅಮರೇಂದ್ರ ಬಾಹುಬಲಿ ಹಾಗೂ ಬಲ್ಲಾಳದೇವ ಎಂಬ ಎರಡು ಪಾತ್ರ, ಅವರ ನಡುವಿನ ಸಿಂಹಾಸದ ಜಿದ್ದಾಜಿದ್ದಿ ಹಾಗೂ ನಡುವೆ ಒಂದಷ್ಟು ಇತರ ಘಟನೆಗಳೇ “ಬಾಹುಬಲಿ’ಯ ಜೀವಾಳ. ರಾಜಮನೆತನದ ಕಥೆಗಳಲ್ಲಿ ಸೇಡು, ಜಿದ್ದು, ಹೋರಾಟ, ಹಿನ್ನೆಲೆ ಹೊಸದಲ್ಲ. ಹಾಗಾಗಿ, “ಬಾಹುಬಲಿ’ಯ ಒನ್‌ಲೈನ್‌ ನಿಮಗೆ ತೀರಾ ಹೊಸದು ಎನಿಸದೇ ಹೋದರೂ ಅದನ್ನು ಕಟ್ಟಿಕೊಟ್ಟ ರೀತಿ ಹಾಗೂ ಅದಕ್ಕಾಗಿ ನಿರ್ಮಿಸಿದ ಸುತ್ತಲಿನ ಪರಿಸರ ಮಾತ್ರ ನಿಜಕ್ಕೂ ತುಂಬಾ ಭಿನ್ನವಾಗಿದೆ. ಇಂತಹ ಸಿನಿಮಾಗಳು ತೆರೆದುಕೊಳ್ಳುವ ಮುನ್ನ ಅದಕ್ಕೊಂದು ವೇದಿಕೆ ಬೇಕು.ಅದಿಲ್ಲೂ ಇದೆ. ನೀರಿನಲ್ಲಿ ತೇಲಿ ಹೋಗುತ್ತಿರುವ ಮಗುವೊಂದನ್ನು ರಕ್ಷಿಸುವ ಹಾಗೂ ಬೆಳೆಯುತ್ತಾ ಆ ಮಗುವಿನ ಹಿನ್ನೆಲೆ ತೆರೆದುಕೊಳ್ಳುವ ಮೂಲಕ “ಬಾಹುಬಲಿ’ಯ ಕಥೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಮುಖ್ಯವಾಗಿ ಮೂರು ಪಾತ್ರಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ರಾಜಮನೆತನದ ಕಥೆ ತೆರೆದುಕೊಳ್ಳುವ ಮುನ್ನ ಗ್ಯಾಪಲ್ಲೇ ಒಂದು ಲವ್‌ಟ್ರ್ಯಾಕ್‌ ಅನ್ನು ಹೇಳಿ ಮುಗಿಸಿದ್ದಾರೆ ರಾಜ್‌ಮೌಳಿ. ಇಲ್ಲಿ ಬರುವ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹಾಗೆ ನೋಡಿದರೆ “ಬಾಹುಬಲಿ’ ಒಂದು ಪಾತ್ರ ಪರಿಚಯ ಹಾಗೂ ಮೊದಲರ್ಧ ಕಥೆಯ ಅನಾವರಣ ಎಂದಷ್ಟೇ ಹೇಳಬೇಕು. ಮುಂದಿನ ಭಾಗದಲ್ಲಿ ಏನೆಲ್ಲಾ ನಡೆಯಬಹುದು, ಯಾವ್ಯಾವ ಪಾತ್ರಗಳು ಹೇಗೆ ಬೆಳೆಯಬಹುದು ಎಂಬೆಲ್ಲಾ ಅಂಶಗಳನ್ನು ಮೊದಲರ್ಧದಲ್ಲಿ ಲಿಂಕ್‌ಕೊಟ್ಟು ಬಿಟ್ಟಿದ್ದಾರೆ. ಅದು ಮುಂದುವರಿದ ಭಾಗದಲ್ಲಿ ದೃಶ್ಯರೂಪ ಪಡೆದುಕೊಳ್ಳಲಿದೆ.

ಚಿತ್ರದ ಇಂಟರ್‌ವಲ್‌ವರೆಗೆ ಕಥೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಅದ್ಭುತವಾದ ದೃಶ್ಯ ವೈಭವಗಳನ್ನು ಕಣ್ತುಂಬಿಕೊಳ್ಳಲಡ್ಡಿಯಿಲ್ಲ. ಒಂದು ಹೊಸ ಲೋಕವೇ ನಿಮ್ಮ ಮುಂದೆ ಬರುತ್ತದೆ. ಆ ಮಟ್ಟಿಗೆ “ಬಾಹುಬಲಿ’ ಒಂದು ಸುಂದರ ದೃಶ್ಯ ಕಾವ್ಯ ಎನ್ನಬಹುದು. ಅದ್ಭುತವಾದ ದೃಶ್ಯಗಳು, ಲೊಕೇಶನ್‌ಗಳ ಮೂಲಕ ಒಂದು ಹಂತದಲ್ಲಿ “ಬಾಹುಬಲಿ’ ಕಥೆಯ ಹಂಗನ್ನೇ ಮರೆಸುತ್ತದೆ. ಚಿತ್ರದ ದ್ವಿತೀಯಾರ್ಧದಲ್ಲಿ ಕಥೆ ತೆರೆದುಕೊಳ್ಳುತ್ತದೆ. ಅದು “ಬಾಹುಬಲಿ’ ಪಾತ್ರದ ಎಂಟ್ರಿಯೊಂದಿಗೆ.ಇಡೀ ಸಿನಿಮಾವನ್ನು ಕಟ್ಟಿಕೊಡಲು ಚಿತ್ರತಂಡ ಪಟ್ಟ ಶ್ರಮ ತೆರೆಮೇಲೆ ಅಷ್ಟೇ ಚೆನ್ನಾಗಿ ರಾರಾಜಿಸಿದೆ. ಸಹಜವಾಗಿ ಈ ರೀತಿಯ ಸಿನಿಮಾಗಳನ್ನು ಮಾಡುವಾಗ ತಂತ್ರಜ್ಞಾನವನ್ನು ಹೆಚ್ಚೇ ಬಳಸಿಕೊಳ್ಳಬೇಕಾಗುತ್ತದೆ. ರಾಜ್‌ಮೌಳಿ ಈ ಬಾರಿಯೂ ತಾಂತ್ರಿಕವಾಗಿ “ಬಾಹುಬಲಿ’ಯನ್ನು ಶ್ರೀಮಂತಗೊಳಿಸಿದ್ದಾರೆ. ಸಣ್ಣ ಸಣ್ಣ ಡಿಟೆಲಿಂಗ್‌ ಬಗ್ಗೆಯೂ ಅವರು ತಲೆಕೆಡಿಸಿಕೊಂಡು ಕೆಲಸ ಮಾಡಿರುವುದು ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಒಂದು ಸಾಮ್ರಜ್ಯ, ಅಲ್ಲಿನ ವೈಭವ, ಅದ್ಧೂರಿತವನ್ನು ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ. ಅವರ ಕೆಲವು ಕಲ್ಪನೆಯೇ ಅದ್ಭುತ. ಚಿತ್ರದಲ್ಲಿ ಬರುವ ಯುದ್ಧದ ದೃಶ್ಯ, ಅಲ್ಲಿ ಬಳಸಲಾದ ತಂತ್ರಗಳು ತುಂಬಾ ಹೊಸದು. ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಈ ಯುದ್ಧ ಕೂಡಾ ಒಂದು. ಅದಕ್ಕಾಗಿ ಮಾಡಿಕೊಂಡಿರುವ ಸೆಟಪ್‌, ಅಷ್ಟೊಂದು ಜನರು° ಸೇರಿಸಿರುವ ರೀತಿ ನಿಜಕ್ಕೂ ಮೈ ನವಿರೇಳಿಸುತ್ತದೆ.

ಮೊದಲೇ ಹೇಳಿದಂತೆ ಇಲ್ಲಿ ರಾಜ್‌ಮೌಳಿ ಪ್ರತಿ ಪಾತ್ರಗಳ ಬಗ್ಗೆ ಸ್ಪಷ್ಟವಾಗಿದ್ದಾರೆ. ರಮ್ಯಕೃಷ್ಣ, ನಾಜರ್‌, ಸತ್ಯರಾಜ್‌, ಪ್ರಭಾಕರ್‌, ಸುದೀಪ್‌ … ಹೀಗೆ ಇಲ್ಲಿ ಬರುವ ಪ್ರತಿ ಪಾತ್ರಗಳಿಗೂ ಒಂದು ಸ್ಪಷ್ಟ ಕಾರಣವಿದೆ ಮತ್ತು ಅವೆಲ್ಲವೂ ಸಿನಿಮಾವನ್ನು ಮುನ್ನಡೆಸಬಲ್ಲ ಪಾತ್ರಗಳು. ಮುಖ್ಯವಾಗಿ ಪ್ರಭಾಸ್‌ ಹಾಗೂ ರಾಣಾ ದಗ್ಗುಬಾಟಿ ಚಿತ್ರದ ಎರಡು ಆಧಾರ ಸ್ತಂಭಗಳು. ಪಾತ್ರಕ್ಕಾಗಿ ದೇಹ ದಂಡಿಸಿ ತಯಾರಾದಂತೆ, ನಟನೆಯಲ್ಲೂ ಮಿಂಚಿದ್ದಾರೆ. ಬಾಹುಬಲಿಯಾಗಿ ಪ್ರಭಾಸ್‌ ಹಾಗೂ ಬಲ್ಲಾಳದೇವನಾಗಿ ರಾಣಾ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ನಾಯಕಿಯರಾದ ತಮನ್ನಾ ಹಾಗೂ ಅನುಷ್ಕಾಗೆ ಇಲ್ಲಿ ಹೆಚ್ಚಿನ ಸ್ಕೋಪ್‌ ಇಲ್ಲ. ಅನುಷ್ಕಾ ಇಲ್ಲಿ ಮುಂದುವರಿದ ಭಾಗದ ಕಥೆಯನ್ನು ಲೀಡ್‌ ಮಾಡುವುದಕ್ಕೆ ಪಾತ್ರವಾದಂತೆ ಕಂಡುಬಂದರೆ, ತಮನ್ನಾ ಕೊಂಚ ರಗಡ್‌ ಆಗಿ, ಜೊತೆಗೆ ಅಷ್ಟೇ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ರಮ್ಯಕೃಷ್ಣ ಇದ್ದ ದೃಶ್ಯದಲ್ಲಿ ಅವರೇ ಹೈಲೈಟ್‌. ಶಸ್ತ್ರಾಸ್ತ್ರ ಡಿಲರ್‌ ಅಸ್ಲಾಂ ಖಾನ್‌ ಸುದೀಪ್‌ ಕೆಲ ನಿಮಿಷ ಬಂದು ಹೋಗುತ್ತಾರೆ. ಚಿತ್ರದಲ್ಲಿ ಹಾಡುಗಳಿಗಿಂತ ಸಂಗೀತ ನಿರ್ದೇಶಕ ಕೀರವಾಣಿಯವರ ಹಿನ್ನೆಲೆ ಸಂಗೀತ ಹೈಲೈಟ್‌. ಇಡೀ ಸಿನಿಮಾಕ್ಕೊಂದು ಫೀಲ್‌ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೆಂಥಿಲ್‌ ಕುಮಾರ್‌ ಅವರ ಛಾಯಾಗ್ರಹಣದಲ್ಲಿ “ಬಾಹುಬಲಿ’ಯ ಅದ್ಭುತವಾಗಿ ಮೆರೆದಾಡಿದೆ. ಒಂದೊಂದು ದೃಶ್ಯವನ್ನು ಅವರು ಕಟ್ಟಿಕೊಟ್ಟ ರೀತಿ ನಿಜಕ್ಕೂ ಸುಂದರ.
ರವಿಪ್ರಕಾಶ್‌ ರೈ
-ಉದಯವಾಣಿ

Write A Comment