Uncategorized

ಚಿನ್ನ ನೀಡದೆ ವಂಚನೆ ನಡೆಸಿದ ಪ್ರಕರಣ : ಸಂತ್ರಸ್ತ ಗ್ರಾಹಕರಿಂದ ಅಂಗಡಿಗೆ ಮುತ್ತಿಗೆ

Pinterest LinkedIn Tumblr

ಪುತ್ತೂರು, ಜು.5: ಸುಲಭ ಕಂತುಗಳ ತಿಂಗಳ ಪಾವತಿಯ ಚಿನ್ನದ ಸ್ಕೀಂ ನಡೆಸಿ ಅವಧಿ ಮುಗಿದ ಗ್ರಾಹಕರಿಗೆ ಚಿನ್ನ ನೀಡದೆ ವಂಚನೆ ನಡೆಸಿದ ಪ್ರಕರಣವೊಂದು ಪುತ್ತೂರಿನ ಜುವೆಲ್ಲರಿ ಅಂಗಡಿಯೊಂದರಲ್ಲಿ ನಡೆದಿದ್ದು, ಗ್ರಾಹಕರು ಶುಕ್ರವಾರ ಅಂಗಡಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಪುತ್ತೂರಿನ ದರ್ಬೆಯಲ್ಲಿರುವ ಶ್ರೀವರ ಜುವೆಲ್ಲರ್ಸ್‌ ಸ್ಕೀಂ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ನಡೆಸಿದ ಅಂಗಡಿ ಎಂದು ದೂರಲಾಗಿದೆ.

ಈ ಮಳಿಗೆ ಪ್ರಾರಂಭಿಸುವ ಸಂದರ್ಭ ಶ್ರೀವರ ಹೆಸರಿನಲ್ಲಿ ಸಾರ್ವಜನಿಕರಿಂದ ಕಂತುಗಳ ರೂಪದಲ್ಲಿ ಹಣ ಸಂಗ್ರಹ ಮಾಡಲು ಪ್ರಾರಂಭಿಸಿದ್ದರು. ಗ್ರಾಮೀಣ ಪ್ರದೇಶಗಳ ಬಹಳಷ್ಟು ಮಂದಿಯನ್ನು ಕಂತುಗಳಿಗೆ ಸೇರಿಸಿಕೊಂಡು ಇದೀಗ ವಂಚಿಸಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಸ್ಕೀಂ ಸದಸ್ಯರಿಂದ ತಿಂಗಳ ಪಾವತಿಯ ಕಂತುಗಳ ಮೂಲಕ ರೂ. 250, 500, ಹಾಗೂ 1,000 ರೂ.ಗಳ 20 ಕಂತುಗಳಲ್ಲಿ ಲಕ್ಷಾಂತರ ರೂ. ಹಣ ಸಂಗ್ರಹ ಮಾಡಿದ್ದಾರೆ. ಸ್ಕೀಂನಲ್ಲಿ ವಿಜೇತರಾದವರಿಗೆ ಚಿನ್ನ ನೀಡಲಾಗುವುದು. ಹಾಗೂ ವಿಜೇತರಾಗದವರಿಗೆ ಕೊನೆಯಲ್ಲಿ ಪಾವತಿಸಿದ ಒಟ್ಟು ವೌಲ್ಯದ ಚಿನ್ನ ನೀಡಲಾಗುವುದು ಎಂದು ಸಂಸ್ಥೆಯವರು ಭರವಸೆ ನೀಡಿದ್ದರು.

ಆದರೆ ಇದೀಗ ಅವಧಿ ಮುಗಿದ ಗ್ರಾಹಕರಿಗೂ ಚಿನ್ನ ನೀಡುತ್ತಿಲ್ಲ, ಸ್ಕೀಂನಲ್ಲಿ ವಿಜೇತರಾದವರಿಗೂ ಚಿನ್ನವನ್ನು ನೀಡಿಲ್ಲ. ಪಾವತಿಸಿದ ಹಣವನ್ನೂ ಹಿಂದಿರುಗಿಸುತ್ತಿಲ್ಲ. ಈ ನಡುವೆ ತಮಗಿಷ್ಟವಾದ ಮಾದರಿಯ ಚಿನ್ನಾಭರಣ ಬುಕ್ ಮಾಡುವಂತೆ ಸೂಚಿಸಿದ್ದಾರೆ. ಆದರೆ ಚಿನ್ನ ಬುಕ್ ಮಾಡಿದ ಗ್ರಾಹಕರಿಗೆ ತಿಂಗಳು ಕಳೆದರೂ ಚಿನ್ನ ನೀಡುತ್ತಿಲ್ಲ. ಈ ಬಗ್ಗೆ ಜುವೆಲ್ಲರ್ಸ್‌ಗೆ ಬಂದು ವಿಚಾರಿಸಿದರೆ ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ಗ್ರಾಹಕರು ದೂರಿದ್ದಾರೆ.

ಜುವೆಲ್ಲರ್ಸ್‌ ಮಾಲಕರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ ಎಂದು ನೊಂದ ಗ್ರಾಹಕರು ಆರೋಪಿಸಿದ್ದಾರೆ. 200ಕ್ಕೂ ಅಧಿಕ ಮಂದಿ ಗ್ರಾಹಕರು ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು. ಚಿನ್ನ ಮರು ಪಾವತಿಸದಿರುವ ಬಗ್ಗೆ ನೊಂದ ಗ್ರಾಹಕರು ಪುತ್ತೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚನೆ ಪ್ರಕರಣ ದಾಖಲು
ಸ್ಕೀಮ್ ವಿಚಾರದಲ್ಲಿ ಗ್ರಾಹಕರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪ ಮೇಲೆ ವಿಚಾರಣೆ ನಡೆಸಿದ ಪೊಲೀಸರು ಶ್ರೀವರ ಜುವೆಲ್ಸ್ ಸಂಸ್ಥೆಯ ಮಾಲಕರು ಸಂಪರ್ಕಕ್ಕೆ ಸಿಗದ ಹಾಗೂ ವಿಚಾರಿಸಲು ಸಂಸ್ಥೆಗೆ ಮತ್ತು ಠಾಣೆಗೆ ಬಾರದ ಹಿನ್ನೆಲೆಯಲ್ಲಿ ಐಸಿಸಿ ಕಲಂ 420ರಡಿ ವಂಚನೆ ಪ್ರಕರಣ ದಾಖಲಿಸಿಕೊ ಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment