ಮಂಗಳೂರು, ಮೇ 7: ಮಹಿಳೆಯೊಂದಿಗೆ ಅನುಚಿತ ವರ್ತನೆ ತಡೆಯಲು ಯತ್ನಿಸಿದ ಯುವಕನ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವ ಬಗ್ಗೆ ಹಲ್ಲೆಗೊಳಗಾದ ಯುವಕ ಹರ್ಷಿಲ್ ಶೆಟ್ಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದಾಗಿ ಯುವಕನ ತಂದೆ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಬುಧವರಾ ಪತ್ರಿಕಾಗೋಷ್ಠಿಯಲ್ಲಿ ಹಲ್ಲೆಗೊಳಗಾದ ಹರ್ಷಿಲ್ ಶೆಟ್ಟಿ ಮಾತನಾಡಿ, ‘‘ನಗರದ ಬಲ್ಮಠ ಲಿಕ್ವಿಡ್ ಲಾಂಜ್ ಬಳಿ ಮೇ 2ರಂದು ರಾತ್ರಿ ಸುಮಾರು 10:30ಕ್ಕೆ ನಾನು ಹಾಗೂ ನನ್ನ ಸ್ನೇಹಿತರು ಉಪಾಹಾರ ಮುಗಿಸಿ ಬರುತ್ತಿದ್ದಾಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಅಲ್ಲಿದ್ದ ವ್ಯಕ್ತಿಯೊಬ್ಬ (ಸಂಜಯ್ ದಾಸ್) ದೈಹಿಕ ಕಿರುಕುಳ ನೀಡುತ್ತಿದ್ದ. ಅದನ್ನು ಗಮನಿಸಿದ ನಾವು ಆಕೆಯ ರಕ್ಷಣೆಗೆ ಮುಂದಾದಾಗ ಕಿರುಕುಳ ನೀಡಿದ ವ್ಯಕ್ತಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಾವು ಆತನನ್ನು ಹಿಂಬಾಲಿಸಿದಾಗ ಆತ ಬಾವುಟಗುಡ್ಡೆ ಪ್ರದೇಶಕ್ಕೆ ಓಡಿ ಹೋದದ್ದು ತಿಳಿಯಿತು’’ ಎಂದರು.
‘‘ಈ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸರಿಗೆ ವಿಚಾರ ತಿಳಿಸಿದಾಗ ಅವರು ಕಿರುಕುಳ ನೀಡಿದ ವ್ಯಕ್ತಿಯನ್ನು ಹಿಡಿಯುವ ಆಸಕ್ತಿ ತೋರಲಿಲ್ಲ. ಕಿರುಕುಳ ನೀಡಿದ ವ್ಯಕ್ತಿ ಬಾವುಟಗುಡ್ಡೆಯ ಬಳಿಯ ಹೊಟೇಲ್ ಒಂದರ ಒಳಗೆ ತೆರಳಿ ಅಂಗಿ ಬದಲಾಯಿಸಿಕೊಳ್ಳುತ್ತಿರುವುದು ಕಂಡು ಬಂತು. ಈ ಸಂದರ್ಭದಲ್ಲಿ ಹೊಟೇಲಿನ ಮಾಲಕರ ಬಳಿ ಕಿರುಕುಳ ನೀಡಿದ ವ್ಯಕ್ತಿ ನಿಮ್ಮ ಹೊಟೇಲಿನ ಒಳಗೆ ಅವಿತುಕೊಂಡಿದ್ದಾನೆ. ಆತನನ್ನು ಹೊರಗೆ ಕಳುಹಿಸಿ ಎಂದು ಹೇಳಿದ್ದರೂ ಅವರಿಂದಲೂ ನಮಗೆ ಸಹಕಾರ ದೊರೆಯಲಿಲ್ಲ. ಬದಲಾಗಿ ಅಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ನನ್ನ ಬಳಿ ಬಂದು ಹೊಟೇಲಲ್ಲಿ ಏಕೆ ಗಲಾಟೆ ಮಾಡುತ್ತಿ? ಎಂದು ಹೊಡೆದು ಪೊಲೀಸ್ ವ್ಯಾನ್‌ನಲ್ಲಿ ಕೂರಿಸಿದ್ದಾರೆ’’. ‘’ಬಳಿಕ ಬಂದರು ಠಾಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮೂರು ಮಂದಿ ಪೊಲೀಸರು ಥಳಿಸಿದ್ದಾರೆ.
ಯುವತಿಯ ಮೇಲಿನ ಕಿರುಕುಳ ತಡೆಯಲು ಯತ್ನಿಸಿದ ತನ್ನನ್ನು ಈ ರೀತಿ ಥಳಿಸಿರುವುದನ್ನು ವಿರೋಧಿಸಿದಾಗ ಇನ್ನಷ್ಟು ಥಳಿಸಿದ್ದಾರೆ. ಬಳಿಕ ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಗೆಳೆಯರು ಪೋನ್ ಮಾಡಿದಾಗ ನಾನು ಬಂದರ್ ಠಾಣೆಯಲ್ಲಿರುವುದಾಗಿ ತಿಳಿಸಿದೆ. ಬಳಿಕ ಕಿರುಕುಳಕ್ಕೆ ಒಳಗಾದ ಯುವತಿ ಹಾಗೂ ನನ್ನ ಗೆಳೆಯರು ಪೊಲೀಸ್ ಠಾಣೆಗೆ ಬಂದಿದ್ದಾರೆ.’’ ‘‘ಹಲ್ಲೆಗೊಳಗಾದ ಯುವತಿ ತನ್ನ ಮೇಲೆ ಸಂಜಯದಾಸ್ ಎನ್ನುವ ಯುವಕ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ಸಂದರ್ಭದಲ್ಲಿ ನಾನು ಆಕೆಯ ಸಹಾಯಕ್ಕೆ ಬಂದಿರುವುದನ್ನು ಪೊಲೀಸರ ಗಮನಕ್ಕೆ ತಂದರೂ ಪೊಲೀಸರು ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಆರೋಪಿಯನ್ನು ಗುರುತಿಸಲು ನಾನು ಹಾಗೂ ನನ್ನ ಗೆಳೆಯರನ್ನು ಕರೆದುಕೊಂಡು ಬಾವುಟ ಗುಡ್ಡೆಯ ಹೊಟೇಲಿಗೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಗೆಳೆಯ ಆರೋಪಿಯನ್ನು ಗುರುತಿಸಿದ ಬಳಿಕ ಆರೋಪಿಯ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ’’ ಎಂದರು.
‘‘ಬಳಿಕ 1:30ಕ್ಕೆ ಮರುದಿನ ಪೊಲೀಸ್ ಠಾಣೆಗೆ ಬರಬೇಕೆಂದು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ. ಮರುದಿನ ಮೇ 3ರಂದು ಬಂದರು ಪೊಲೀಸ್ ಸ್ಟೇಷನ್‌ಗೆ ಹೋದಾಗ ಅಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಚೆಲುವರಾಜ್ ನಮ್ಮದೇ ತಪ್ಪು ಎನ್ನುವ ರೀತಿಯಲ್ಲಿ ವಾದ ಮಾಡಿ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮನೆಯವರು ವೈದ್ಯಕೀಯ ಪರೀಕ್ಷೆ ನಡೆಸಬೇಕೆಂದು ಕೇಳಿದರೂ ಅದಕ್ಕೂ ಅವಕಾಶ ನೀಡದೆ ಒಂದು ದಿನ ಜೈಲಲ್ಲಿ ಇರಿಸಿದ್ದಾರೆ ಎಂದು ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದ ಹರ್ಷಿಲ್ ಶೆಟ್ಟಿ ತಿಳಿಸಿದ್ದಾರೆ’’.
ಪೊಲೀಸ್ ಆಯುಕ್ತರಿಗೆ ದೂರು :
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮಂಗಳವಾರ ಅವರ ಕಚೇರಿಗೆ ತೆರಳಿದಾಗ ನಮ್ಮ ಅಹವಾಲನ್ನು ಸ್ವೀಕರಿಸಿದ್ದಾರೆ. ಅವರ ಮಾತುಗಳ ಬಳಿಕ ಈ ಪ್ರಕರಣದಲ್ಲಿ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ವಿಶ್ವಾಸವನ್ನು ತಾವು ಹೊಂದಿರುವುದಾಗಿ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿನ ಕೆಲವು ಪೊಲೀಸರು ಅಪರಾಧ ತಡೆಗಟ್ಟುವ ಬದಲು, ದುಷ್ಕೃತ್ಯವನ್ನು ತಡೆಯುವ ಮನೋಭಾವ ಹೊಂದಿರುವ ನಾಗರಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಬೆಳಪು ಗ್ರಾಮ ಪಂಚಾಯತ್‌ನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯುವಕನ ಕುಟುಂಬದ ಸದಸ್ಯರಾದ ವಿಂದ್ಯಾ ಬಲ್ಲಾಳ್, ಚಿತ್ತರಂಜನ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.