ಕನ್ನಡ ವಾರ್ತೆಗಳು

ವಿಟ್ಲದ ಅಪ್ರಾಪ್ತ ಬಾಲಕಿಯ ಚಿತ್ರ ಫೇಸ್‌ಬುಕ್‌ನಲ್ಲಿ ದುರ್ಬಳಕೆ ಆರೋಪ ;ಬೆಂಗಳೂರಿನ ವ್ಯಕ್ತಿಯ ಬಂಧನ – ಷರತ್ತುಬದ್ಧ ಬಿಡುಗಡೆ

Pinterest LinkedIn Tumblr

FaceBook_Misuse_arest

ಬಂಟ್ವಾಳ, ಮೇ.7 : ವಿಟ್ಲದ ಅಪ್ರಾಪ್ತ ಬಾಲಕಿಯ ಫೋಟೊವನ್ನು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಮತ್ತು ಅವಾಚ್ಯವಾಗಿ ಬರೆದಿದ್ದುದನ್ನು ಶೇರ್ ಮಾಡಿದ ಆರೋಪದಲ್ಲಿ ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡು ಷರತ್ತಿನನ್ವಯ ಬಿಡುಗಡೆಮಾಡಿದ್ದಾರೆ. ಮಾಣಿ ಪೆರಾಜೆ ಸಮೀಪದ ಮದುವೆಗೆಂದು ಆರೋಪಿ ಬೆಂಗಳೂರಿನ ಬಾಲಕೃಷ್ಣರಾಜ್ ನೀರ್ಚಾಲ್ ಎಂಬಾತ ಆಗಮಿಸಿರುವ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ಷರತ್ತುಗಳನ್ನು ಹಾಕಿ ನಂತರ ಬಿಡುಗಡೆ ಮಾಡಿದ್ದಾರೆ.

ನೈಜೀರಿಯದಲ್ಲಿರುವ ಶಾಂತಾರಾಮ ಹೆಗಡೆಕಟ್ಟೆ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಬಾಲಕಿಯರ, ಮಹಿಳೆಯರ ಫೇಸ್‌ಬುಕ್ ಅಕೌಂಟ್‌ನಿಂದ ಫೋಟೊಗಳನ್ನು ಕಳವುಗೈದು ಅವುಗಳನ್ನು ‘ಸತ್ಯಶೋಧ ಮಿತ್ರ ಮಂಡಳಿ’ ಎಂಬ ಗ್ರೂಪ್‌ನಲ್ಲಿ ಹಾಕಿ, ಅನವಶ್ಯಕ ಕಮೆಂಟ್‌ಗಳನ್ನು ಮಾಡುತ್ತಿದ್ದ ಎನ್ನಲಾಗಿದ್ದು, ಆ ಫೋಟೊಗಳ ಮೇಲೆ ಅಶ್ಲೀಲವಾಗಿ ಮತ್ತು ಅವಾಚ್ಯವಾಗಿ ಬರೆಯುತ್ತ ಚಾರಿತ್ರ್ಯಹನನ, ಮಾನಹಾನಿ ಮಾಡುತ್ತಲೇ ಕಾಲಹರಣ ಮಾಡುತ್ತಿದ್ದು, ಅವುಗಳನ್ನು ಬೆಂಗಳೂರಿನ ಬಾಲಕೃಷ್ಣರಾಜ್ ನೀರ್ಚಾಲ್ ಶೇರ್ ಮಾಡುತ್ತ ತಾನೂ ಅದಕ್ಕೆ ವ್ಯಂಗ್ಯವಾದ ಕಮೆಂಟ್‌ಗಳನ್ನು ಸೇರ್ಪಡೆಗೊಳಿಸುತ್ತಿದ್ದ ಎನ್ನಲಾಗಿದೆ. ವಿಟ್ಲದ ಅಪ್ರಾಪ್ತ ಬಾಲಕಿಯ ಚಿತ್ರವನ್ನೂ ಇದೇ ರೀತಿ ಬಳಸಿ, ಕಮೆಂಟ್ ಮಾಡಿರುವುದರ ವಿರುದ್ಧ ಆಕೆಯ ತಂದೆ ದಾಖಲೆಗಳನ್ನು ಪ್ರಸ್ತುತಪಡಿಸಿ, ಎ.13ರಂದು ವಿಟ್ಲ ಠಾಣೆಗೆ ದೂರು ನೀಡಿದ್ದರು.

ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಮತ್ತು ಪೊಲೀಸರಾದ ರಕ್ಷಿತ್, ಚಿದಾನಂದ್ ಬೆಂಗಳೂರಿಗೆ ತೆರಳಿ, ಬಾಲಕೃಷ್ಣರಾಜ್‌ನನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಆತನ ಕಚೇರಿಗೆ ದಾಳಿ ನಡೆಸಿದ್ದರೂ ಆತ ತಪ್ಪಿಸಿಕೊಂಡಿದ್ದ. ಆತನನ್ನು ಬಂಧಿಸುವುದಕ್ಕಾಗಿ ವಿಟ್ಲ ಪೊಲೀಸರು ಮತ್ತೆ ಬೆಂಗಳೂರಿನ ಪಯಣಕ್ಕೆ ಸಿದ್ಧರಾಗಿದ್ದರು.

ಈ ನಡುವೆ ಆತನೇ ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಮಾಣಿಯಲ್ಲಿ ಸಿಕ್ಕಿಬಿದ್ದ: ಮೇ 5ರಂದು ಆತ ತನ್ನ ಸಂಬಂಧಿಯ ಮದುವೆಗೆಂದು ಮಾಣಿ ಪೆರಾಜೆಯ ಸಭಾಭವನಕ್ಕೆ ಆಗಮಿಸಿದ್ದ. ಈ ಮಾಹಿತಿಯನ್ನು ಪಡೆದ ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ಪೊಲೀಸರಾದ ರಕ್ಷಿತ್, ಭವಿತ್ ರೈ ರಾತ್ರಿ 12 ಗಂಟೆಗೆ ದಾಳಿ ಮಾಡಿ, ಆತನನ್ನು ವಶಪಡಿಸಿಕೊಂಡು ವಿಟ್ಲ ಠಾಣೆಗೆ ಕರೆತಂದಿದ್ದರು. ನಂತರ ಷರತ್ತುಗಳನ್ನು ಹಾಕಿ ಬಿಡುಗಡೆಮಾಡಲಾಯಿತು.

Write A Comment