ಹೊಸದಿಲ್ಲಿ, ಡಿ.17: ಡಿಸೆಂಬರ್ 25ರಂದು ಕ್ರಿಸ್ಮಸ್ನ ದಿನ ಶಾಲೆಗಳನ್ನು ತೆರೆದಿಡುವಂತೆ ಸೂಚಿಸಿ ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರಿಂದು ಗದ್ದಲ ನಡೆಸಿದರು.
ಸರಕಾರವು ಸಂಘಪರಿವಾರದ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಸದನದ ‘ಹಾದಿ ತಪ್ಪಿಸುತ್ತಿದೆ’ ಎಂದು ಪ್ರತಿಪಕ್ಷಗಳ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಗಾಂಧಿ ಕುಟುಂಬದ ಮೇಲೆ ಮಾತಿನ ದಾಳಿ ನಡೆಸಿದರು.
ಡಿಸೆಂಬರ್ 25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಹಿನ್ನೆಲೆಯಲ್ಲಿ ‘ಉತ್ತಮ ಆಡಳಿತ ದಿನ’ವನ್ನು ಆಚರಣೆ ಮಾಡಲು ಸರಕಾರ ನಿರ್ಧರಿಸಿದೆ. ಇದರಿಂದ ಕ್ರಿಸ್ಮಸ್ ಆಚರಣೆಗೆ ಅಡೆತಡೆಯುಂಟಾಗುವುದಿಲ್ಲ ಎಂದು ಸರಕಾರ ಉತ್ತರ ನೀಡಿತು. ಸರಕಾರದ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್, ಟಿಎಂಸಿ, ಎನ್ಸಿಪಿ ಮತ್ತು ಎಡ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಸೋಮವಾರದಿಂದಲೂ ಈ ವಿಷಯ ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಡಿಸೆಂಬರ್ 25ರಂದು ಬೇರೆಬೇರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಶಾಲಾಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ್ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತ ತಿಳಿಸಿದರು. ಸರಕಾರದ ಸುತ್ತೋಲೆಯನ್ನು ಅವರು ಈ ಸಂದರ್ಭದಲ್ಲಿ ಸದನದಲ್ಲಿ ಓದಿ ಹೇಳಿದರು.
ಶಾಲಾಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿರುವ ಬಗ್ಗೆ ಸಾಕ್ಷಾಧಾರವಾಗಿ ಛಾಯಾಚಿತ್ರಗಳು ಮತ್ತು ವಿಡಿಯೊ ದಾಖಲೆಗಳನ್ನು ಕಳುಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇವೆಲ್ಲ ಆನ್ಲೈನ್ ಚಟುವಟಿಕೆಗಳು ಎಂಬ ಸರಕಾರದ ಹೇಳಿಕೆಯನ್ನು ಪ್ರಶ್ನಿಸಿದ ಅವರು, ‘ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳದೇ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಹೇಗೆ ಕಳುಹಿಸಲು ಸಾಧ್ಯ’ ಎಂದರು. ಈ ವಿವಾದದ ವಿಚಾರದಲ್ಲಿ ಸರಕಾರದ ಉತ್ತರವು ‘ತಪ್ಪು’ ಮತ್ತು ‘ಹಾದಿ ತಪ್ಪಿಸುವಂತಿದೆ’ ಎಂದು ಅವರು ದೂರಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವಿವಾದದ ಕುರಿತು ಸರಕಾರದ ವತಿಯಿಂದ ಉತ್ತರ ನೀಡಿದ ಸಂಸದೀಯ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಪ್ರತಿಪಕ್ಷಗಳೇ ದೇಶದ ‘ಹಾದಿ ತಪ್ಪಿಸುತ್ತಿವೆ’ ಎಂದು ತಿರುಗೇಟು ನೀಡಿದರು. ಇದೊಂದು ಬಹಳ ಸೂಕ್ಷ್ಮವಾದ ವಿಷಯ ಎಂದರು.
ಕ್ರಿಸ್ಮಸ್ ರಜಾದಿನಕ್ಕೆ ತೊಂದರೆಯಾಗದು ಎಂದು ಹೇಳಿದ ನಾಯ್ಡು, ಈ ಸಂಬಂಧವಾಗಿ ಸುತ್ತೋಲೆಯೊಂದನ್ನು ಓದಿ ಹೇಳಿದರು. ಸರಕಾರವು ಸಂಘ ಪರಿವಾರದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಕೆಲವು ಸದಸ್ಯರು ಈ ಸಂದರ್ಭದಲ್ಲಿ ಆರೋಪಿಸಿದರು.
ಈ ಹಂತದಲ್ಲಿ ಸಚಿವರು ಗಾಂಧಿ ಕುಟುಂಬದ ವಿರುದ್ಧವಾಗಿ ‘ಫ್ಯಾಮಿಲಿ ಕಾ ಸಾಥ್, ದೇಶ್ ಕಾ ವಿನಾಶ್, ಕಾಂಗ್ರೆಸ್ ಕಾ ವಿನಾಶ್’ ಎಂಬ ಘೋಷಣೆಯೊಂದನ್ನು ಹೇಳಿದರು. ಇದನ್ನು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದರು.
‘ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ನಾನು ಅವರ ವಿರುದ್ಧ ದಾಳಿ ಮಾಡಿದ್ದೇನೆ. ಅವರು ತಮ್ಮ ಮಾತುಗಳನ್ನು ವಾಪಸ್ ಪಡೆದುಕೊಂಡಲ್ಲಿ, ನಾನು ನನ್ನ ಮಾತನ್ನು ವಾಪಸ್ ಪಡೆದುಕೊಳ್ಳುತ್ತೇನೆ’ ಎಂದು ನಾಯ್ಡು ಹೇಳಿದರು.
ವಾಜಪೇಯಿ ಕ್ರಿಸ್ಮಸ್ ದಿನ ಹುಟ್ಟಿದವರು. ಅಂದು ಸರಕಾರವು ‘ಉತ್ತಮ ಆಡಳಿತ ದಿನ’ ಆಚರಣೆ ಮಾಡಲಿದೆ. ಕ್ರಿಸ್ಮಸ್ಗೆ ಅಗೌರವ ನೀಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
ಈ ಹಂತದಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಕಾಂಗ್ರೆಸ್ ಸದಸ್ಯರನ್ನು ಅನುಸರಿಸಿ ತೃಣಮೂಲ ಕಾಂಗ್ರೆಸ್, ಎನ್ಸಿಪಿ ಮತ್ತು ಎಡಪಕ್ಷಗಳ ಸದಸ್ಯರು ಹೊರ ನಡೆದರು.