ಕರ್ನಾಟಕ

ನಾಡ ಗೀತೆಯಲ್ಲಿ ಮಾಧ್ವರ ಸೇರ್ಪಡೆ: ಪಾಪು ಆಕ್ಷೇಪ

Pinterest LinkedIn Tumblr

puttappa

ಬೆಂಗಳೂರು, ಡಿ.17: ಕುವೆಂಪು ರಚಿಸಿರುವ ನಾಡ ಗೀತೆಯ ಮೂಲದಲ್ಲಿ ಮಾಧ್ವರ ಹೆಸರಿರಲಿಲ್ಲ. ಲಾಬಿಯಿಂದಾಗಿ ಈ ಹೆಸರನ್ನು ಸೇರಿಸಲಾಗಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ ಪಾಟೀಲ ಪುಟ್ಟಪ್ಪ ಆರೋಪಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ನಗರದ ಗಾಯನ ಸಮಾಜದಲ್ಲಿ ಆಯೋ ಜಿಸಿದ್ದ‘ನೃಪತುಂಗ ಪ್ರಶಸ್ತಿ ಪುರಸ್ಕೃತರ ಬದುಕು-ಬರಹ: ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ಮಾಧ್ವರ ಹೆಸರಿನ ಸೇರ್ಪಡೆಯ ಕುರಿತಂತೆ ಬೇಸರ ವ್ಯಕ್ತಪಡಿಸಿದರು.

ಇಂದು ಮಾಧ್ವರ ಹೆಸರನ್ನು ನಾಡ ಗೀತೆಯಲ್ಲಿ ಸೇರಿಸಲು ಲಾಬಿ ನಡೆಸುವವರಿದ್ದಾರೆ. ಆದರೆ ಗಾಂಧೀಜಿ ಹೆಸರನ್ನು ಸೇರ್ಪಡೆ ಮಾಡಲು ಯಾರೂ ಲಾಬಿ ಮಾಡಿಲ್ಲ. ಇದು ವಿಪರ್ಯಾಸ ಎಂದು ಪಾಪು ನೋವು ತೋಡಿಕೊಂಡರು. ಆದರೆ, ಪುಟ್ಟಪ್ಪನವರ ಭಾಷಣವನ್ನು ಈ ಸಂದರ್ಭದಲ್ಲಿ ಕೆಲವರು ತಡೆದ ಘಟನೆ ನಡೆಯಿತು. ನಾಡಗೀತೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಪಾಟೀಲ ಪುಟ್ಟಪ್ಪನವರೊಂದಿಗೆ ಭಾಷಣದ ಮಧ್ಯೆಯೇ ಕೆಲವರು ವಾಗ್ವಾದಕ್ಕೆ ಇಳಿದರು. ಇದರಿಂದ ಕಾರ್ಯಕ್ರಮದಲ್ಲಿ ಗೊಂದಲವುಂಟಾಯಿತು. ಆ ಸಂದರ್ಭದಲ್ಲಿ ಕೆಲವರು ಪಾಟೀಲ ಪುಟ್ಟಪ್ಪರ ಮಾತನ್ನು ಮೊಟಕುಗೊಳಿಸುವಂತೆ ಚೀಟಿ ಕೊಡಲು ಪರಿಷತ್ ಸದಸ್ಯರಿಗೆ ಸೂಚಿಸಿದರು. ಇದರಿಂದ ಪಾಟೀಲ ಪುಟ್ಟಪ್ಪ ಬೇಸರಗೊಂಡು, ತಮ್ಮ ಮಾತನ್ನು ಮೊಟಕುಗೊಳಿಸಿದರು.

ಬಳಿಕ ಮಾತನಾಡಿದ ಹಿರಿಯ ಸಾಹಿತಿ ಡಾ.ದೇ.ಜವರೇಗೌಡ, ರಾಜ್ಯದಲ್ಲಿ ಎಲ್ಲಿಯವರೆಗೆ ಕನ್ನಡ ಭಾಷೆಯ ಮೂಲಕ ಶಿಕ್ಷಣ ಹಾಗೂ ವ್ಯವಹಾರಗಳು ನಡೆಯುವುದಿಲ್ಲವೋ ಅಲ್ಲಿಯವರೆಗೂ ರಾಜ್ಯದ ಸಂಸ್ಕೃತಿ ಅಪಾಯದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಕಾನೂನುಗಳನ್ನು ತಿದ್ದುಪಡಿ ಮಾಡುವುದರ ಮೂಲಕ ಕನಿಷ್ಠ ಪ್ರಾಥಮಿಕ ಶಿಕ್ಷಣದಲ್ಲಾದರೂ ಕನ್ನಡವನ್ನು ಮಾಧ್ಯಮ ಭಾಷೆಯಾಗಿ ಅಳವಡಿಸುವಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿ ಮಾಡಬೇಕೆಂದು ಆಶಿಸಿದರು.

ಆಶಯ ನುಡಿಗಳನ್ನಾಡಿದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ನೃಪತುಂಗ ಪ್ರಶಸ್ತಿಯು ಬಿಎಂಟಿಸಿ ನೌಕರರ ಶ್ರಮದ ಫಲವಾಗಿ ಹುಟ್ಟಿಕೊಂಡಿರುವುದರಿಂದ ತನ್ನದೇ ಆದ ಘನತೆಯನ್ನು ಹೊಂದಿದೆ. ಹೀಗಾಗಿ ಈ ಪ್ರಶಸ್ತಿಯನ್ನು ಪ್ರಶಸ್ತಿಗೆ ಅರ್ಹರಾದವರೆಲ್ಲರೂ ಶ್ರಮ ಸಂಸ್ಕೃತಿಯನ್ನು ಗೌರವಿಸಿ, ಪಾಲಿಸುವವರೇ ಆಗಿದ್ದಾರೆ ಎಂಬುದು ಸಂತೋಷದ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ದೇ.ಜವರೇಗೌಡ, ಡಾ.ಪಾಟೀಲ ಪುಟ್ಟಪ್ಪ, ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಎಂ.ಎಂ.ಕಲಬುರ್ಗಿ, ಸಾರಾ ಅಬೂಬಕ್ಕರ್ ಹಾಗೂ ಡಾ.ಕುಂ.ವೀರಭದ್ರಪ್ಪರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ವಹಿಸಿದ್ದರು.

Write A Comment