ಬೆಂಗಳೂರು, ಡಿ.17: ದೇಶದಲ್ಲಿ ಕೋಮು ಗಲಭೆ ಸೃಷ್ಟಿ ಮಾಡುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳ ಮೂರು ಚರ್ಚ್ಗಳ ಮೇಲೆ ಬಾಂಬ್ ಸಿಡಿಸಿದ್ದ ಎಂಟು ಜನ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯಗಳು ವಿಧಿಸಿದ್ದ ಗಲ್ಲು ಶಿಕ್ಷೆ ರದ್ದುಪಡಿಸಿರುವ ಹೈಕೋರ್ಟ್, ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಅಲ್ಲದೆ, ಇದೇ ಪ್ರಕರಣದಲ್ಲಿ 12 ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅದು ಎತ್ತಿ ಹಿಡಿದಿದೆ.
ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕುಮಾರ್ ಹಾಗೂ ನ್ಯಾ. ರತ್ನಕಲಾ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ಅಪರಾಧಿಗಳು ವಿವಿಧ ಕೋಮುಗಳ ನಡುವೆ ವಿನಾ ಕಾರಣ ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯಗಳನ್ನು ನಡೆಸಿದ್ದು, ಅವರು ಜೀವಿತಾವಧಿ ಶಿಕ್ಷೆ ಅನುಭವಿಸಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ಸಂಬಂಧದ ಈ ಆದೇಶ ಇದೇ ರೀತಿಯಲ್ಲಿ ಸಮಾಜದ ಸ್ವಾಸ್ಥ ಹಾಳುಮಾಡುವ ಉದ್ದೇಶವಿರುವವರಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಅದು ಅಭಿಪ್ರಾಯಿಸಿದೆ. ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಭಾವಿಸಿ ವಿಶೇಷ ನ್ಯಾಯಾಲಯಗಳು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿವೆ.
ಆದರೆ, ಕೃತ್ಯ ನಡೆಸಿದ ಮುಖ್ಯ ಕಾರಣ ಸಮಾಜದಲ್ಲಿ ಗಲಭೆ ಉಂಟು ಮಾಡುವುದೇ ವಿನಾ ಯಾರನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ ಹಾಗೂ ಪ್ರಕರಣದಲ್ಲಿ ಯಾರೂ ಸಹ ಸಾವನ್ನಪ್ಪಿರಲಿಲ್ಲ. ಅಲ್ಲದೆ, ಸುಪ್ರೀಂ ಕೋರ್ಟ್ ಈ ರೀತಿಯ ಹಲವು ಪ್ರಕರಣಗಳಲ್ಲಿ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದುಪಡಿ ಸಿದ್ದು, ಆ ಹಿನ್ನೆಲೆಯಲ್ಲಿ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ವಜಾ ಮಾಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.ಅಪರಾಧಿಗಳಿಗೆ ಕೋಮು ಉದ್ವಿಗ್ನತೆ ಪ್ರಚೋದಿಸುವ ಉದ್ದೇಶ ವಿತ್ತು. ಅವರು ರಾಷ್ಟ್ರದ ವಿರುದ್ಧ ಸಂಚು ರೂಪಿಸಿದ್ದರು. ಈ ಎಲ್ಲ ಕೃತ್ಯಗಳಿಗೆ ಡಕಾಯಿತಿ ಮಾಡಿ ಹಣ ಪಡೆಯುತ್ತಿದ್ದರು. ಪ್ರಕರಣದಲ್ಲಿನ 10 ಆರೋಪಿಗಳು ಪಾಕಿಸ್ತಾನಕ್ಕೆ ಹೋಗಿ ತರಬೇತಿಯನ್ನು ಪಡೆದಿದ್ದರು ಎಂಬ ಬಗ್ಗೆ ಆರೋಪವಿತ್ತು. ಈ ಎಲ್ಲ ಆರೋಪಗಳಿಗೂ ಸೂಕ್ತವಾದ ಸಾಕ್ಷಗಳು ಲಭ್ಯವಿರುವುದರಿಂದ ಪ್ರಕರಣದಿಂದ ಯಾರನ್ನೂ ಕೈಬಿಡಬೇಕಾಗಿಲ್ಲ ಎಂದು ಅದು ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ 2000ದ ಜುಲೈ ತಿಂಗಳಲ್ಲಿ ಸರಣಿಯಾಗಿ ಬೆಂಗಳೂರಿನ ಜೆಜೆ ನಗರದ ಸೇಂಟ್ ಪೀಟರ್ ಚರ್ಚ್, ಹುಬ್ಬಳ್ಳಿಯ ಸ್ಯೆಂಟ್ ಜಾನ್ ಲೂಥರನ ಚರ್ಚ್, ಕಲಬುರಗಿಯ ವಾಡಿಯಲ್ಲಿರುವ ಸ್ಯೆಂಟ್ ಕೆಥೊಲಿಕ್ ಚರ್ಚ್ಗಳ ಮೇಲೆ ದಾಳಿ ನಡೆದಿತ್ತು.
ಈ ಎಲ್ಲಾ ಪ್ರಕರಣಗಳಲ್ಲಿ ಒಟ್ಟು 22 ಜನರ ಅಪರಾಧಿಗಳು ಎಂದು ವಿಶೇಷ ನ್ಯಾಯಾ ಲಯ ನೀಡಿದ್ದ ತೀರ್ಪಿನಲ್ಲಿ ತಿಳಿಸಲಾಗಿತ್ತು. ಆದರೆ, ಇಬ್ಬರು ಆರೋಪಿಗಳು ಘಟನೆಯಲ್ಲಿ ಸಾವನ್ನಪ್ಪಿದ್ದರು, 12 ಮಂದಿಗೆಜೀವಾವಧಿ ಶಿಕ್ಷೆ ವಿಧಿಸಿದ್ದರು. ಆಲ್ಲದೆ, 8 ಮಂದಿಗೆ ಗಲ್ಲು ಶಿಕ್ಷೆ ನೀಡಿದ್ದರು. ಇದನ್ನು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಗಲ್ಲು ಶಿಕ್ಷೆಯಿಂದ ಪಾರಾದವರು: ಶೇಕ್ ಅಬ್ದುಲ್ಲಾ, ಮುಹ್ಮದ್ ಶರೀಫುದ್ದೀನ್, ಮಹಮ್ಮದ್ ಖಾಲಿದ್ ಚೌದರಿ, ಇಬ್ರಾಹೀಂ ಚೌಧರಿ, ಮುಹಮ್ಮದ್ ಶರೀಫುದ್ದೀನ್, ಶೇಖ್ ಹಶೀಂ ಅಲಿ, ಮುಹಮ್ಮದ್ ಸಿದ್ದಿಕಿ, ಇಬ್ರಾಹೀಂ ಸೈಯದ್.