ಅಂತರಾಷ್ಟ್ರೀಯ

ಭಯೋತ್ಪಾದನೆ ವಿರುದ್ಧ ರಾಷ್ಟ್ರೀಯ ಯೋಜನೆ: ಶರೀಫ್

Pinterest LinkedIn Tumblr

AP12_17_2014_000001B

ಪೇಶಾವರ, ಡಿ. 17: ಒಳ್ಳೆಯ ತಾಲಿಬಾನ್ ಅಥವಾ ಕೆಟ್ಟ ತಾಲಿಬಾನ್ ಎಂಬ ಭೇದಭಾವ ಮಾಡದೆ ಭಯೋತ್ಪಾದನೆ ವಿರುದ್ಧ ಹೋರಾಡಲು ಒಂದು ವಾರದಲ್ಲಿ ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಇಂದು ಘೋಷಿಸಿದ್ದಾರೆ.

ಪೇಶಾವರದ ಸೇನಾ ಶಾಲೆಯೊಂದರ ಮಕ್ಕಳ ಮೇಲೆ ತಾಲಿಬಾನಿಗಳು ಅತ್ಯಂತ ಪೈಶಾಚಿಕ ದಾಳಿ ನಡೆಸಿದ ಒಂದು ದಿನದ ಬಳಿಕ ಪಾಕ್ ಪ್ರಧಾನಿಯ ಘೋಷಣೆ ಹೊರಬಿದ್ದಿದೆ. ದಾಳಿಯಲ್ಲಿ 148 ಮಂದಿ ಮೃತರಾಗಿದ್ದಾರೆ. ಅವರ ಪೈಕಿ ಹೆಚ್ಚಿನವರು ಮಕ್ಕಳು.

ಮಕ್ಕಳ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಇಲ್ಲಿ ಸರ್ವ ಪಕ್ಷ ಸಭೆಯೊಂದರ ಅಧ್ಯಕ್ಷತೆ ವಹಿಸಿದ ಶರೀಫ್, ‘‘ಭಯೋತ್ಪಾದಕರ ವಿರುದ್ಧದ ಕಾರ್ಯಯೋಜನೆಯ ಕರಡು ಸಿದ್ಧಪಡಿಸಲು ಹಾಗೂ ಅದರ ಬಗ್ಗೆ ತುರ್ತಾಗಿ ವ್ಯವಹರಿಸಲು ಇಂದಿನ ಸಭೆ ನಿರ್ಧರಿಸಿತು’’ ಎಂದು ತಿಳಿಸಿದರು.

ನ್ಯಾಶನಲ್ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಯಕ ಖುರ್ಷೀದ್ ಶಾ ಮತ್ತು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಜೊತೆಗೆ ಮಾಧ್ಯಮದೊಂದಿಗೆ ಮಾತನಾಡಿದ ಶರೀಫ್, ಸೇನಾ ಶಾಲೆಯ ಮೇಲೆ ನಡೆದ ದಾಳಿ ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಕರಾಳವಾದುದು ಎಂದು ಬಣ್ಣಿಸಿದರು.

‘‘ಈ ದಾಳಿ ಬರ್ಬರತೆಗೆ ಒಂದು ಉದಾಹರಣೆಯಾಗಿದೆ. ಇಂಥ ಇನ್ನೊಂದು ಉದಾಹರಣೆ ಇತಿಹಾಸದಲ್ಲಿ ಸಿಗಲಾರದು’’ ಎಂದರು.

‘‘ ‘ಒಳ್ಳೆಯ’ ಅಥವಾ ‘ಕೆಟ್ಟ’ ತಾಲಿಬಾನ್ ಎಂಬ ವಿಭಜನೆ ಮಾಡುವುದಿಲ್ಲ ಎಂಬುದಾಗಿ ನಾವು ಘೋಷಿಸುತ್ತೇವೆ. ಕೊನೆಯ ಭಯೋತ್ಪಾದಕನನ್ನು ನಿರ್ಮೂಲ ಮಾಡುವವರೆಗೆ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ’’ ಎಂದು ಪಾಕ್ ಪ್ರಧಾನಿ ಹೇಳಿದರು.‘‘ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟವಾಗಿದೆ. ಇದಕ್ಕಾಗಿ ಒಂದು ಸಮಗ್ರ ಮಾರ್ಗನಕ್ಷೆಯ ಅಗತ್ಯವಿದೆ’’ ಎಂದರು.

ವಿದ್ಯಾರ್ಥಿಗಳ ತಲೆಗೆ ಗುರಿಯಿರಿಸಿದ ತಾಲಿಬಾನಿಗಳು
ಪೇಶಾವರದ ಸೇನಾ ಶಾಲೆಯಲ್ಲಿ ಮಂಗಳವಾರ ತಾಲಿಬಾನಿ ಭಯೋತ್ಪಾದಕರು ಹೆಚ್ಚಿನ ವಿದ್ಯಾರ್ಥಿಗಳ ತಲೆಗೆ ಸಮೀಪದಿಂದ ಗುಂಡು ಹಾರಿಸಿ ನಿರ್ದಯವಾಗಿ ಹತ್ಯೆಗೈದಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲೆ ನಡೆದ ಅತ್ಯಂತ ಪೈಶಾಚಿಕ ದಾಳಿಗಳ ಪೈಕಿ ಒಂದಾಗಿದೆ.

ಪೇಶಾವರದ ವಾರ್ಸಕ್ ರಸ್ತೆಯಲ್ಲಿರುವ ಸೇನಾ ಶಾಲೆಯ ಮೇಲೆ ಅರೆ ಸೇನಾ ಪಡೆ ಫ್ರಂಟಿಯರ್ ಕಾರ್ಪ್ಸ್‌ನ ಸಮವಸ್ತ್ರ ಧರಿಸಿ ನುಗ್ಗಿದ ಭಯೋತ್ಪಾದಕರು ವಿದ್ಯಾರ್ಥಿಗಳ ಮೇಲೆ ಒಂದೇ ಸಮನೆ ಗುಂಡು ಹಾರಿಸಿದರು.

ಪಕ್ಕದ ಸ್ಮಶಾನದ ಆವರಣ ಗೋಡೆ ಹಾರಿ ಒಳನುಗ್ಗಿದ ಉಗ್ರರು ಗುಂಡುಗಳ ಸುರಿಮಳೆಗೈಯುತ್ತಾ ತರಗತಿ ಕೋಣೆಗಳು ಮತ್ತು ಸಭಾಭವನಗಳತ್ತ ಧಾವಿಸಿದರು ಎಂದು ವಿದ್ಯಾರ್ಥಿಗಳನ್ನು ಉಲ್ಲೇಖಿಸಿ ‘ಡಾನ್’ ವರದಿ ಮಾಡಿದೆ. ‘‘ಹೆಚ್ಚಿನ ವಿದ್ಯಾರ್ಥಿಗಳ ತಲೆಯನ್ನು ಗುಂಡುಗಳು ಛಿದ್ರಗೊಳಿಸಿವೆ’’ ಎಂದು ಖೈಬರ್ ಪಖ್ತೂಂಖ್ವ ರಾಜ್ಯದ ವಾರ್ತಾ ಸಚಿವ ಮುಶ್ತಾಕ್ ಅಹ್ಮದ್ ಘನಿ ತಿಳಿಸಿದರು. ಶಾಲೆ ಬಿಡುವ ಹೊತ್ತಿನಲ್ಲಿ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಸಾಮಾನ್ಯವಾಗಿ ಶಾಲೆಯ ಹೊರಗೆ ಕಾಯುವ ಹೆತ್ತವರು ಮಂಗಳವಾರ ಆಸ್ಪತ್ರೆಗಳ ಹೊರಗಡೆ ರೋದಿಸುತ್ತಿದ್ದರು.

ತಾನು ಹಾಗೂ ಇತರರು ಶಾಲಾ ಸಭಾಭವನದಲ್ಲಿ ಪ್ರಥಮ ಚಿಕಿತ್ಸೆ ತರಬೇತಿಯನ್ನು ಪಡೆಯುತ್ತಿದ್ದಾಗ ಗುಂಡು ಹಾರಾಟದ ಸದ್ದು ಕೇಳಿಸಿತು ಎಂದು ಏಳನೆ ತರಗತಿ ವಿದ್ಯಾರ್ಥಿ ಮುಹಮ್ಮದ್ ಝೀಶನ್ ‘ಡಾನ್’ಗೆ ಹೇಳಿದನು.

‘‘ನೆಲದ ಮೇಲೆ ಮುಖ ಕೆಳಗೆ ಮಾಡಿ ಮಲಗುವಂತೆ ನಮ್ಮ ಶಿಕ್ಷಕರು ನಮಗೆ ಸೂಚಿಸಿದರು. ಅದೇ ವೇಳೆ ಭಯೋತ್ಪಾದಕರು ಸಭಾಭವನಕ್ಕೆ ನುಗ್ಗಿದರು’’.

ಭಯೋತ್ಪಾದಕರು ವಿದ್ಯಾರ್ಥಿಗಳ ತಲೆಗೆ ಸಮೀಪದಿಂದ ಗುಂಡು ಹಾರಿಸಲು ಆರಂಭಿಸಿದರು ಎಂದು ಝೀಶನ್ ತಿಳಿಸಿದನು.

‘‘ಅವರು ನಮ್ಮ ಸಹಪಾಠಿಗಳನ್ನು ಕೊಂದರು. ನನ್ನ ಪಾದಕ್ಕೆ ಒಂದು ಗುಂಡು ಬಡಿದಿದೆ’’ ಎಂದನು.

ಮರಣ ದಂಡನೆ ಮೇಲಿನ ತಡೆ ರದ್ದುಪಡಿಸಿದ ಶರೀಫ್
ಇಸ್ಲಾಮಾಬಾದ್, ಡಿ. 17: ಪೇಶಾವರದ ಸೇನಾ ಶಾಲೆಯೊಂದರಲ್ಲಿ 132 ವಿದ್ಯಾರ್ಥಿಗಳು ಮತ್ತು ಒಂಬತ್ತು ಶಿಕ್ಷಕರನ್ನು ತಾಲಿಬಾನಿಗಳು ಹತ್ಯೆ ನಡೆಸಿದ ಒಂದು ದಿನದ ಬಳಿಕ, ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಮರಣ ದಂಡನೆ ಮೇಲೆ ವಿಧಿಸಲಾಗಿದ್ದ ತಡೆಯನ್ನು ತೆಗೆದುಹಾಕಿದ್ದಾರೆ.

‘‘ಈ ತಡೆಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಇದಕ್ಕೆ ಪ್ರಧಾನಿ ಅನುಮೋದನೆ ನೀಡಿದ್ದಾರೆ’’ ಎಂದು ಸರಕಾರದ ವಕ್ತಾರ ಮುಹಿಯುದ್ದೀನ್ ವನಿ ತಿಳಿಸಿದರು.

‘‘ಅಮಾಯಕ ಮಕ್ಕಳ ಮೇಲೆ ಭಯೋತ್ಪಾದಕರು ಗುಂಡುಗಳನ್ನು ಹಾರಿಸಿದ ರೀತಿಗಿಂತ ಹೆಚ್ಚಿನ ದುರಂತ ಬೇರೊಂದು ಇರಲಿಕ್ಕಿಲ್ಲ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನವಾಝ್ ಶರೀಫ್ ಹೇಳಿದರು.

‘‘ಹಿಂದೆ ಭಯೋತ್ಪಾದಕರೊಂದಿಗೆ ಮಾತುಕತೆ ನಡೆಸಲು ನಾವು ಪ್ರಯತ್ನಿಸಿದ್ದೆವು. ಆದರೆ, ಅದು ಫಲಿಸಲಿಲ್ಲ’’ ಎಂದು ಪಾಕ್ ಪ್ರಧಾನಿ ನುಡಿದರು.

ಮೃತರ ಸಾಮೂಹಿಕ ಅಂತ್ಯಕ್ರಿಯೆ
ಪೇಶಾವರ, ಡಿ. 17: ಪಾಕಿಸ್ತಾನದಾದ್ಯಂತ ಆವರಿಸಿದ ದಟ್ಟ ಶೋಕದ ನಡುವೆ, ಪೇಶಾವರದ ಸೇನಾ ಶಾಲೆಯೊಂದರಲ್ಲಿ ತಾಲಿಬಾನಿ ಉಗ್ರರಿಂದ ಹತರಾದ 142 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಬುಧವಾರ ನಡೆಯಿತು.

ದೇಶಾದ್ಯಂತ ಜನರು ಹಾಗೂ ಇತರ ಶಾಲೆಗಳ ವಿದ್ಯಾರ್ಥಿಗಳು ಮೃತರಿಗಾಗಿ ಪ್ರಾರ್ಥನೆ ನಡೆಸಿದರು. ಪೇಶಾವರದ ಶಾಲೆಯಲ್ಲಿ ನಡೆದ ದುರಂತದ ಬಗ್ಗೆ ಜನರು ತಮ್ಮ ಆಘಾತ ವ್ಯಕ್ತಪಡಿಸಿದರು. ಭಯೋತ್ಪಾದಕರು ಮಂಗಳವಾರ ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಂದರು ಹಾಗೂ ಕೆಲವು ಶಿಕ್ಷಕಿಯರನ್ನು ಜೀವಂತ ಸುಟ್ಟು ಹಾಕಿದರು.

3 ದಿನ ಶೋಕ: ಬುಧವಾರದಿಂದ ಆರಂಭಗೊಂಡು ಮೂರು ದಿನಗಳ ಶೋಕಾಚರಣೆಯನ್ನು ಸರಕಾರ ಘೋಷಿಸಿದೆ.

ಉಗ್ರರ ಚಿತ್ರಗಳನ್ನು ಬಿಡುಗಡೆ ಮಾಡಿದ ತಾಲಿಬಾನ್
ಪೇಶಾವರ, ಡಿ. 17: ಪೇಶಾವರದ ಸೇನಾ ಶಾಲೆಯಲ್ಲಿ 132 ಮಕ್ಕಳು ಸೇರಿದಂತೆ 148 ಜನರ ಮಾರಣಹೋಮ ನಡೆಸಿದ ತಾಲಿಬಾನಿ ಭಯೋತ್ಪಾದಕರ ಚಿತ್ರಗಳನ್ನು ತಾಲಿಬಾನ್ ಸಂಘಟನೆ ಬುಧವಾರ ಬಿಡುಡೆಗೊಳಿಸಿದೆ.

ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನಿ ತಾಲಿಬಾನ್ ವಕ್ತಾರ ಮುಹಮ್ಮದ್ ಖುರಸಾನಿ, ಇಂಥ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ನಾಗರಿಕರು ಸೇನಾ ಸಂಸ್ಥೆಗಳೊಂದಿಗಿನ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಆತ ಎಚ್ಚರಿಸಿದ್ದಾನೆ.

ತಾಲಿಬಾನ್ ಬಿಡುಗಡೆಗೊಳಿಸಿದ ಚಿತ್ರದಲ್ಲಿ ಬಂದೂಕುಗಳನ್ನು ಹಿಡಿದಿರುವ 6-7 ಮಂದಿಯಿದ್ದಾರೆ.

ಪಾಕ್ ಸೇನಾ ಮುಖ್ಯಸ್ಥ ಅಫ್ಘಾನ್‌ಗೆ
ಇಸ್ಲಾಮಾಬಾದ್, ಡಿ. 17: ಪೇಶಾವರದ ಸೇನಾ ಶಾಲೆಯಲ್ಲಿ ನಡೆದ ಮಕ್ಕಳ ಹತ್ಯಾಕಾಂಡಕ್ಕೆ ಸಂಬಂಧಿಸಿ ತಾಲಿಬಾನ್ ನಾಯಕ ಮುಲ್ಲಾ ಫಝ್ಲುವಾಹ್‌ನನ್ನು ಗಡಿಪಾರು ಮಾಡುವಂತೆ ಕೋರಲು ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಬುಧವಾರ ಅಫ್ಘಾನಿಸ್ತಾನಕ್ಕೆ ಧಾವಿಸಿದ್ದಾರೆ.

ಪೇಶಾವರದಲ್ಲಿ ನಡೆದ ರಾಜಕೀಯ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ತಿಳಿಸಿದರು.

ಶಾಲೆಯಲ್ಲಿ ಸ್ಮಶಾನ ವೌನ
ಪೇಶಾವರದ ಸೇನಾ ಶಾಲೆಯ ರಕ್ತ ಹರಿದ ಕಾರಿಡಾರ್‌ಗಳು ಮತ್ತು ತರಗತಿ ಕೋಣೆಗಳಲ್ಲಿ ಬುಧವಾರ ಸ್ಮಶಾನ ವೌನ ನೆಲೆಸಿತ್ತು. ಒಂದು ದಿನ ಮೊದಲು ಇದೇ ಶಾಲೆಯಲ್ಲಿ ತಾಲಿಬಾನ್ ಉಗ್ರರು 132 ಮಕ್ಕಳನ್ನು ಅಮಾನುಷವಾಗಿ ಹತ್ಯೆಗೈದಿದ್ದರು.

ಶಾಲೆಯ ಆವರಣಕ್ಕೆ ಪ್ರವೇಶಿಸಲು ಮಾಧ್ಯಮಗಳಿಗೆ ಬುಧವಾರ ಅನುಮತಿ ನೀಡಲಾಯಿತು. ಶಾಲೆ ಇಂದು ಹೃದಯ ಬಿರಿಯುವ ವಿನಾಶದ ಸ್ಥಳವಾಗಿತ್ತು. ನೆಲ ಮತ್ತು ಮೆಟ್ಟಿಲುಗಳಲ್ಲಿ ರಕ್ತ ಹೆಪ್ಪುಟ್ಟಿತ್ತು. ಕಿಟಿಕಿಗಳ ಗಾಜುಗಳು ಮತ್ತು ಬಾಗಿಲುಗಳ ದಾರಂದಗಳು ಒಡೆದಿದ್ದವು.

ಹರಿದ ನೋಟ್ ಪುಸ್ತಕಗಳು, ಬಟ್ಟೆಗಳ ಚೂರುಗಳು ಮತ್ತು ಮಕ್ಕಳ ಬೂಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಶಾಲೆಯ ಕೋಣೆಗಳಲ್ಲಿ ಮಕ್ಕಳ ಮಾತುಗಳು ಕೇಳಿ ಬರಲಿಲ್ಲ. ಸೈನಿಕರ ಬೂಟುಗಳ ಸದ್ದು ಮಾತ್ರ ಕೇಳಿ ಬರುತ್ತಿತ್ತು.

ಶಾಲೆಯ ಗೋಡೆಗಳು ಗುಂಡುಗಳ ರಂಧ್ರಗಳಿಂದ ತುಂಬಿಹೋಗಿದ್ದವು.

ಶಾಲೆಯ ಆಡಳಿತ ವಿಭಾಗದಲ್ಲಿ ವಿನಾಶಗಳ ಸರಮಾಲೆಯೇ ತುಂಬಿಹೋಗಿತ್ತು.

ತರಗತಿ ಕೋಣೆಗಳಲ್ಲಿ ಒಡೆದ ಕನ್ನಡಕಗಳು, ಗುಂಡಿನ ಹಿಡಿಕೆಗಳು, ಪ್ಲಾಸ್ಟರ್, ಒಡೆದ ಕಂಪ್ಯೂಟರ್‌ಗಳು ಹರಡಿಕೊಂಡಿದ್ದವು.

Write A Comment