ಬ್ರಿಸ್ಬೇನ್, ಡಿ.17: ಆರಂಭಿಕ ಬ್ಯಾಟ್ಸ್ಮನ್ ಮುರಳಿ ವಿಜಯ್ ದಾಖಲಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಗೌರವಾರ್ಹ ಮೊತ್ತ ದಾಖಲಿಸಿದೆ.
ಇಲ್ಲಿನ ಗಾಬಾ ಸ್ಟೇಡಿಯಂನಲ್ಲಿ ಬುಧವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ಚೆನ್ನೈ ಬ್ಯಾಟ್ಸ್ಮನ್ ಮುರಳಿ ವಿಜಯ್ ಆಕರ್ಷಕ ಶತಕ(144 ರನ್, 213 ಎಸೆತ, 22 ಬೌಂಡರಿ) ಸಿಡಿಸಿ ಭಾರತ ಮೊದಲ ದಿನದಾಟದಂತ್ಯಕ್ಕೆ 83 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಲು ನೆರವಾದರು.
ಮುಂಬೈ ಬ್ಯಾಟ್ಸ್ಮನ್ಗಳಾದ ಅಜಿಂಕ್ಯ ರಹಾನೆ(ಅಜೇಯ 75 ರನ್, 122 ಎ, 7 ಬೌಂ.) ಹಾಗೂ ರೋಹಿತ್ ಶರ್ಮ(ಅಜೇಯ 26) ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಸೀಸ್ನ ಪರ ಚೊಚ್ಚಲ ಪಂದ್ಯ ಆಡಿದ್ದ ಹಝ್ಲೆವುಡ್(2-44) ಎರಡು ವಿಕೆಟ್ ಪಡೆದಿದ್ದಾರೆ. ಹಿರಿಯ ವೇಗಿ ಜಾನ್ಸನ್ ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದರು. ಮೊದಲ ಟೆಸ್ಟ್ನ ಎರಡನೆ ಇನಿಂಗ್ಸ್ನಲ್ಲಿ ಕೇವಲ 1 ರನ್ನಿಂದ ಶತಕ ವಂಚಿತರಾಗಿದ್ದ ವಿಜಯ್ ಇಂದು ಎರಡು ಬಾರಿ ಲಭಿಸಿದ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡರು. ವಿಜಯ್ 36 ಹಾಗೂ 102 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು.
ನಾಲ್ಕನೆ ವಿಕೆಟ್ಗೆ ರಹಾನೆಯೊಂದಿಗೆ 124 ರನ್ ಜೊತೆಯಾಟ ನಡೆಸಿದ ವಿಜಯ್ ಇನಿಂಗ್ಸ್ಯುದ್ದಕ್ಕೂ ವೇಗದ ಪಿಚ್ನಲ್ಲಿ ಆಸ್ಟ್ರೇಲಿಯದ ವೇಗದ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಭಾರತದ ಅಗ್ರ ಸರದಿ ಬ್ಯಾಟ್ಸ್ಮನ್ಗಳಾದ ಶಿಖರ್ ಧವನ್(24) ಮತ್ತೊಮ್ಮೆ ನಿರಾಸೆಗೊಳಿಸಿದರು. ಚೇತೇಶ್ವರ ಪೂಜಾರ(18 ರನ್) ಚೊಚ್ಚಲ ಪಂದ್ಯ ಆಡಿದ್ದ ಹಝ್ಲೆವುಡ್ಗೆ ವಿಕೆಟ್ ಒಪ್ಪಿಸಿದರು. ಚೆಂಡು ಪೂಜಾರ ಗ್ಲೌಸ್ಗೆ ತಾಗದೇ ಹೆಲ್ಮೆಟನ್ನು ಸ್ಪರ್ಶಿಸಿದ ಹೊರತಾಗಿಯೂ ಅಂಪೈರ್ಗಳು ಔಟ್ ತೀರ್ಪು ನೀಡಿದರು. ಅಡಿಲೇಡ್ ಟೆಸ್ಟ್ನಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಉತ್ತಮ ಆರಂಭವನ್ನು ಪಡೆದಿದ್ದರೂ ಚೆಂಡನ್ನು ಎದುರಿಸುವಲ್ಲಿ ಎಡವಿ ಹಝ್ಲೆವುಡ್ಗೆ ಎರಡನೆ ಬಲಿಯಾದರು.
ಸ್ಕೋರ್ ವಿವರ
ಭಾರತ ಪ್ರಥಮ ಇನಿಂಗ್ಸ್83 ಓವರ್ಗಳಲ್ಲಿ 311/4
ಮುರಳಿ ವಿಜಯ್ ಸಿ ಹಡಿನ್ ಬಿ ಲಿನ್ 144, ಶಿಖರ್ ಧವನ್ ಸಿ ಹಡಿನ್ ಬಿ ಮಿಚೆಲ್ ಮಾರ್ಷ್ 24, ಚೇತೇಶ್ವರ ಪೂಜಾರ ಸಿ ಹಡಿನ್ ಬಿ ಹಝ್ಲೆವುಡ್ 18, ವಿರಾಟ್ ಕೊಹ್ಲಿ ಸಿ ಹಡಿನ್ ಬಿ ಹಝ್ಲೆವುಡ್ 19, ಅಜಿಂಕ್ಯ ರಹಾನೆ ಅಜೇಯ 75, ರೋಹಿತ್ ಶರ್ಮ ಅಜೇಯ 26, ಇತರ 5
ವಿಕೆಟ್ ಪತನ: 1-56, 2-100, 3-137, 4-261.
ಬೌಲಿಂಗ್: ಜಾನ್ಸನ್ 15-2-64-0, ಹಝ್ಲೆವುಡ್ 15.2-5-44-2, ಸ್ಟಾರ್ಕ್ 14-1-56-0, ಮಿಚೆಲ್ ಮಾರ್ಷ್ 6-1-14-1, ಲಿನ್ 20-1-87-1, ವ್ಯಾಟ್ಸನ್ 10.4-5-29-0, ವಾರ್ನರ್ 1-0-9-0, ಸ್ಮಿತ್ 1-0-4-0.