ಮನೋರಂಜನೆ

ರಣಜಿ: ಕರ್ನಾಟಕ ತಂಡ ಜಯಭೇರಿ

Pinterest LinkedIn Tumblr

KARNATAKA1-cut

ಕೋಲ್ಕತಾ, ಡಿ.17: ನಾಯಕ ವಿನಯಕುಮಾರ್(6-34) ಅಮೋಘ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಬಂಗಾಳ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ.

ಟೂರ್ನಿಯಲ್ಲಿ ಸತತ ಎರಡನೆ ಗೆಲುವು ಸಾಧಿಸಿದ ಕರ್ನಾಟಕ ತಂಡ ಐತಿಹಾಸಿಕ ಈಡನ್‌ಗಾರ್ಡನ್ಸ್‌ನಲ್ಲಿ 72 ವರ್ಷಗಳ ನಂತರ ಬಂಗಾಳ ತಂಡವನ್ನು ಮಣಿಸಿದೆ. 1941-42ರಲ್ಲಿ ಆಗಿನ ಮೈಸೂರು ತಂಡ ಬಂಗಾಳವನ್ನು ಮಣಿಸಿತ್ತು. ಬುಧವಾರ ಇಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 15ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದ ವಿನಯ್ ಬಂಗಾಳ ತಂಡವನ್ನು ಎರಡನೆ ಇನಿಂಗ್ಸ್‌ನಲ್ಲಿ 227 ರನ್‌ಗೆ ಸರ್ವಪತನಗೊಳಿಸಿದರು.

ಬಂಗಾಳದ ಪರ ಸುದೀಪ್ ಚಟರ್ಜಿ(59 ರನ್) ಹಾಗೂ ನಾಯಕ ಲಕ್ಷ್ಮೀರತನ್ ಶುಕ್ಲಾ(57 ರನ್) ಅರ್ಧಶತಕ ದಾಖಲಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಗೆಲ್ಲಲು 71 ರನ್ ಗುರಿ ಪಡೆದ ಕರ್ನಾಟಕ ತಂಡ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (54 ರನ್, 36 ಎಸೆತ, 10 ಬೌಂ., 1 ಸಿ.) ಹಾಗೂ ಮಯಾಂಕ್ ಅಗರ್‌ವಾಲ್ (ಅಜೇಯ 17) ನೆರವಿನಿಂದ 10.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಉತ್ತಪ್ಪ ಔಟಾದ ಕಾರಣ ಕರ್ನಾಟಕ ಬೋನಸ್ ಅಂಕವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಬಂಗಾಳ ಎರಡೂ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿತು. ಕರ್ನಾಟಕದ ಮೊದಲ ಇನಿಂಗ್ಸ್ 408 ರನ್‌ಗೆ ಉತ್ತರವಾಗಿ 251 ರನ್ ಗಳಿಸಿದ್ದ ಬಂಗಾಳ ಫಾಲೊ ಆನ್‌ಗೆ ಸಿಲುಕಿತು. ಎರಡನೆ ಇನಿಂಗ್ಸ್‌ನಲ್ಲಿ 227 ರನ್ ಗಳಿಸಿ ಕರ್ನಾಟಕದ ಗೆಲುವಿಗೆ ಸುಲಭ ಸವಾಲು ನೀಡಿತು. 1 ವಿಕೆಟ್‌ಗೆ 46 ರನ್‌ನಿಂದ ನಾಲ್ಕನೆ ದಿನದಾಟವನ್ನು ಆರಂಭಿಸಿದ ಬಂಗಾಳ ಆರಂಭಿಕ ಬ್ಯಾಟ್ಸ್‌ಮನ್ ಅರಿಂದಮ್ ದಾಸ್(27) ಹಾಗೂ ಮನೋಜ್ ತಿವಾರಿ(4) ವಿಕೆಟನ್ನು ಅಗ್ಗಕ್ಕೆ ಕಳೆದುಕೊಂಡಿತು.

ತಂಡ 126 ರನ್‌ಗೆ 4 ವಿಕೆಟ್ ಕಳೆದುಕೊಂಡಾಗ ಶ್ರೀವಾಸ್ತವ ಗೋಸ್ವಾಮಿ ಹಾಗೂ ನಾಯಕ ಲಕ್ಷ್ಮೀರತನ್ ಶುಕ್ಲಾ 5ನೆ ವಿಕೆಟ್‌ಗೆ 72 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆದರೆ, ಈ ಜೋಡಿಯನ್ನು ವಿನಯ್ ಕುಮಾರ್ ಬೇರ್ಪಡಿಸಿದರು. ಎಸ್. ಅರವಿಂದ್‌ರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 10ನೆ ವಿಕೆಟ್‌ಗೆ ದಾಖಲೆಯ ಜೊತೆಯಾಟ ನಡೆಸಿದ ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

Write A Comment