ಕರ್ನಾಟಕ

ಶಾಲೆಗಳಲ್ಲಿ ರಕ್ಷಣಗೆ ಕಟ್ಟಪ್ಪಣೆ: ರಾಜ್ಯಗಳಿಗೆ ಮಾರ್ಗದರ್ಶಿ ಸೂತ್ರಗಳ ರವಾನೆ/ ತುರ್ತು ನಿರ್ಗಮನ ದ್ವಾರ ರೂಪಿಸಲು ಸೂಚನೆ

Pinterest LinkedIn Tumblr

Pray-for-children

ಹೊಸದಿಲ್ಲಿ: ಪೇಶಾವರದ ಸೈನಿಕ ಶಾಲೆಯಲ್ಲಿ ತಾಲಿಬಾನ್ ಉಗ್ರರು ನಡೆಸಿದ ಮಕ್ಕಳ ಕಗ್ಗೊಲೆಯಿಂದ ಜಾಗೃತಗೊಂಡಿರುವ ಕೇಂದ್ರ ಸರಕಾರ, ದೇಶದ ಶಾಲಾ-ಕಾಲೇಜುಗಳಲ್ಲಿ ಕೈಗೊಳ್ಳಬೇಕಾದ ಭದ್ರತೆ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ಈ ಸಂಬಂಧ ಎಲ್ಲಾ ರಾಜ್ಯ ಸರಕಾರಗಳಿಗೂ ಕೇಂದ್ರ ಸುತ್ತೋಲೆ ಬರೆದಿದೆ.

ಉಗ್ರರಿಗೆ ಶಾಲೆಗಳು ಸುಲಭ ಗುರಿಗಳಾಗಿವೆ. ಪೇಶಾವರದಲ್ಲಿ ನಡೆಸಿದಂಥ ದುಸ್ಸಾಹಸವನ್ನೂ ಉಗ್ರರು ಭಾರತದಲ್ಲೂ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿಗಳು ಎಚ್ಚರಿಸಿವೆ. ಈ ಹಿನ್ನೆಲೆಯಲ್ಲಿ ಉಗ್ರರ ದಾಳಿ ನಡೆದರೆ, ಅದರಿಂದ ಮಕ್ಕಳನ್ನು ರಕ್ಷಿಸಲು ಸೂಕ್ತ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ತುರ್ತು ನಿರ್ಗಮನ ಬಾಗಿಲುಗಳು, ಅಪಾಯ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಎಚ್ಚರಿಸಲು ಅಲರಾಂ ಮೊಳಗಿಸುವ ವ್ಯವಸ್ಥೆಯನ್ನು ಪ್ರತಿಯೊಂದು ಶಾಲೆಯೂ ಹೊಂದಿರಬೇಕು. ಶಾಲೆಗಳಲ್ಲಿ ಪ್ರವೇಶ ದ್ವಾರ ಮತ್ತು ತರಗತಿಯ ಬಾಗಿಲುಗಳು ಗಟ್ಟಿಯಾಗಿದ್ದು, ಮುಚ್ಚಿಕೊಳ್ಳುವಂತಿರಬೇಕು, ಉಗ್ರರ ದಾಳಿಯಿಂದ ಮಕ್ಕಳನ್ನು ರಕ್ಷಿಸುವ ವಿಧಾನದ ಕುರಿತು ಶಿಕ್ಷಕರಿಗೆ ತಿಳಿವಳಿಕೆ ಮೂಡಿಸಬೇಕು ಎಂಬ ಸಲಹೆಗಳನ್ನು ರಾಜ್ಯಗಳಿಗೆ ನೀಡಲಾಗಿದೆ. ಮುಂಬಯಿ ದಾಳಿಯ ನಂತರ ಶಾಲೆಗಳಿಗೆ ಇಂಥಹದೇ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿತ್ತು. ಇದೀಗ ಆ ಅಂಶಗಳನ್ನು ಪರಿಷ್ಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರು, ದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕೊತಾ, ಹೈದಾರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ಸೈನಿಕ ಶಾಲೆಗಳಿಗೆ(ಕೇಂದ್ರೀಯ ವಿದ್ಯಾಲಯಗಳು) ಕೆಲವೊಂದು ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರ ಜತೆ ಮಾತುಕತೆ ನಡೆಸಲು ಸೂಚಿಸಲಾಗಿದೆ. ದಿಲ್ಲಿಯ ಕೆಲವೊಂದು ಪ್ರತಿಷ್ಠಿತ ಶಾಲೆಗಳಲ್ಲಿ ಪೊಲೀಸ್ ಪಹರೆಯನ್ನು ಕಟ್ಟುನಿಟ್ಟು ಮಾಡಲಾಗಿದೆ ಎಂದು ರಾಜನಾಥ್ ಹೇಳಿದ್ದಾರೆ.

ಲಷ್ಕರ್ ದಾಳಿ: ಭಾರತ ಹೈ ಅಲರ್ಟ್
ಪೇಶಾವರ ಶಾಲೆಯಲ್ಲಿ ತಾಲಿಬಾನ್ ಉಗ್ರರು ನಡೆಸಿದ ರೀತಿಯ ದಾಳಿಗಳನ್ನು ಭಾರತದಲ್ಲಿ ನಡೆಸಲು ಲಷ್ಕರೆ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಗಣರಾಜ್ಯೋತ್ಸವವನ್ನು ಹಾಳುಗೆಡುವುದು ಉಗ್ರರ ಮುಖ್ಯ ಗುರಿಯಾಗಿದೆ ಎಂದು ಅವು ಹೇಳಿವೆ. ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿಕೊಂಡಿರುವ ಐವರು ಐಎಂ ಉಗ್ರರು ಇದೇ ಸಂಚಿಯಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ನಾಪತ್ತೆಯಾದ ಉಗ್ರರ ಜತೆ ಲಷ್ಕರೆ ನಾಯಕರು ನಡೆಸಿದ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಸಿದ್ದು ಅದರಲ್ಲಿ ಐವರಿಗೆ ದಾಳಿ ಹೊಣೆ ಹೊರಿಸುವ ಸಂಗತಿಗಳು ಪ್ರಸ್ತಾಪವಾಗಿರುವುದು ಭದ್ರತಾ ಸಂಸ್ಥೆಗಳ ನಿದ್ರೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ನಗರಗಳು, ಪಟ್ಟಣಗಳಲ್ಲಿನ ಮಾಲ್‌ಗಳು, ದೇಗುಲಗಳು ಸೇರಿದಂತೆ ಜನಸಂದಣಿ ಹೆಚ್ಚು ಸೇರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಶಾಲಾ ಮಕ್ಕಳ ಮೌನ ಪ್ರಾರ್ಥನೆ
ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ಮನವಿಗೆ ಓಗೊಟ್ಟ ದೇಶದ ಶಾಲಾ ಮಕ್ಕಳು ಪೇಶಾವರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಕ್ಕಳ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದರು. ಮೌನ ಪ್ರಾರ್ಥನೆಯ ನೇತೃತ್ವವನ್ನು ಸ್ವತಃ ಪ್ರಧಾನಿ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ವಹಿಸಿದ್ದರು.

ಉಗ್ರರ ನಿರ್ಮೂಲನಕ್ಕೆ ನವಾಜ್ ಸಂಕಲ್ಪ
ಪೇಶಾವರ: ಶಾಲಾ ಮಕ್ಕಳ ಕಗ್ಗೊಲೆಯಿಂದ ತೀವ್ರ ವಿಚಲಿತಗೊಂಡಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಉಗ್ರರನ್ನು ಬೇರು ಸಹಿತ ನಿರ್ಮೂಲನೆ ಮಾಡುವ ಪಣ ತೊಟ್ಟಿದ್ದಾರೆ. ”ಕೇವಲ ಪಾಕ್, ಆಫ್ಘನ್ ಅಷ್ಟೇ ಅಲ್ಲ ಇಡೀ ದಕ್ಷಿಣ ಏಷ್ಯಾ ವಲಯದ ಉಗ್ರರನ್ನು ಸಮೂಲವಾಗಿ ನಾಶ ಮಾಡುವುದೇ ನಮ್ಮ ಗುರಿ,” ಎಂದು ಅವರು ಸರ್ವಪಕ್ಷಗಳ ಸಭೆಯಲ್ಲಿ ಘೋಷಿಸಿದ್ದಾರೆ. ಇದರ ಅಂಗವಾಗಿ ಗಲ್ಲು ಶಿಕ್ಷೆ ಜಾರಿಗೆ ತಮ್ಮ ಸರಕಾರ ವಿಧಿಸಿದ್ದ ಸ್ವಯಂ ನಿಯಂತ್ರಣವನ್ನು ಅವರು ಕೈಬಿಟ್ಟಿದ್ದಾರೆ. ಉಗ್ರರನ್ನು ನಿಷ್ಕರುಣೆಯಿಂದ ಗಲ್ಲಿಗೇರಿಸುವುದಾಗಿ ಅವರು ಘೋಷಿಸಿದ್ದಾರೆ.

Write A Comment