ಕರಾವಳಿ

ಕಾಲೇಜು ಶುಲ್ಕ ಕಟ್ಟಲು‌ ಸಮಸ್ಯೆ; ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಬ್ಬರಿಗೆ ಸ್ಪಂದಿಸಿದ ಹಂಗಳೂರು ಎಲ್.ಜಿ. ಫೌಂಡೇಶನ್

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕೊರೋನಾ ಬಳಿಕ ಆರ್ಥಿಕ ಸಂಕಷ್ಟದಲ್ಲಿ‌ ಆತ್ಮಹತ್ಯೆಗೆ ಶರಣಾದ ತಂದೆ. ಮೊದಲೇ ಬಡತನದ ಕುಟುಂಬ. ಮಕ್ಕಳಿಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿನಿಯರು. ತಂದೆ ಮೃತರಾದ ಬಳಿಕ ಕಾಲೇಜು ಶುಲ್ಕ ಕಟ್ಟದೆ ಸಮಸ್ಯೆ ಅನುಭವಿಸಿದ ವಿದ್ಯಾರ್ಥಿಗಳ ಸಹಾಯಕ್ಕೆ ದಾನಿಯೊಬ್ಬರು ಮುಂದೆ ಬಂದು ಮಾನವೀಯತೆ ಮೆರೆದಿದ್ದಾರೆ.

ಕುಂದಾಪುರದ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಸೋದರಿಯರು ತಂದೆಯನ್ನು ಕಳೆದುಕೊಂಡ ಮೇಲೆ ಎರಡು ವರ್ಷದ ಕಾಲೇಜು ಶುಲ್ಕ ಕಟ್ಟಲಾಗದೇ ಸಮಸ್ಯೆ ಅನುಭವಿಸುತ್ತಿದ್ದು ವಿದ್ಯಾರ್ಥಿನಿಯರ ಸಮಸ್ಯೆ ಬಗ್ಗೆ ದೇವಾಡಿಗ ಒಕ್ಕೂಟ ಬೈಂದೂರಿನ ಕಾರ್ಯದರ್ಶಿ ನಾರಾಯಣ ದೇವಾಡಿಗ ಹಾಗೂ ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅವರು ಹಂಗಳೂರಿನ ಎಲ್.ಜಿ. ಫೌಂಡೇಶನ್ ಆಡಳಿತ ನಿರ್ದೇಶಕ ನಾಗರಾಜ ಡಿ.ಪಡುಕೋಣೆ ಅವರ ಗಮನಕ್ಕೆ ತಂದಿದ್ದು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಾಗರಾಜ ಪಡುಕೋಣೆಯವರು ಕಾಲೇಜಿನವರ ಬಳಿ‌ಮಾತನಾಡಿ 85 ಸಾವಿರ ರೂ.‌ಶುಲ್ಕ ಪಾವತಿ ಮಾಡಿದ್ದು ಕಾಲೇಜು ಆಡಳಿತ ಮಂಡಳಿಯೂ ಇಬ್ಬರ ಬಾಕಿ ಶುಲ್ಕದಲ್ಲಿ ರಿಯಾಯಿತಿ ನೀಡಿದ್ದಾರೆ.

ದಾನಿ ನಾಗರಾಜ ಡಿ. ಪಡುಕೋಣೆಯವರು ಈವರೆಗೆ ಶಿಕ್ಷಣ, ಆರೋಗ್ಯ ವಿಚಾರದಲ್ಲಿ ಹಲವರಿಗರ ಆರ್ಥಿಕ ಸಹಕಾರ ನೀಡಿದ್ದು, ಬಹಳಷ್ಟು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದಿದ್ದಾರೆ. ಸದ್ಯವೇ ಪರೀಕ್ಷೆಗಳು ಎದುರಾಗುತ್ತಿದ್ದು ಕಾಲೇಜು ಶುಲ್ಕ ಪಾವತಿಯಿಂದ ಇಬ್ಬರು ಸಹೋದರಿಯರಿಗೆ ಅನುಕೂಲವಾಗಿದ್ದು ಅವರ ಮುಂದಿನ ಉನ್ನತ ಶಿಕ್ಷಣಕ್ಕೂ ಸಹಕಾರ ನೀಡುವುದಾಗಿ ನಾಗರಾಜ ಪಡುಕೋಣೆಯವರು ಭರವಸೆ ನೀಡಿದ್ದಾರೆ.

Comments are closed.