Saudi Arabia

ಸೌದಿಅರೇಬಿಯಾದಲ್ಲಿ ಕಾರಿಗೆ ಅಡ್ಡ ಬಂದ ಒಂಟೆ: ದ.ಕ ಮೂಲದ ಮೂವರ ಸಹಿತ ನಾಲ್ವರು ಮೃತ್ಯು

Pinterest LinkedIn Tumblr

ಮಂಗಳೂರು: ಸೌದಿ ಅರೇಬಿಯಾದ ಅಲ್-ಹಸಾ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಹಳೆಯಂಗಡಿ ಬಳಿಯ ಕದಿಕೆ ನಿವಾಸಿ ರಿಜ್ವಾನ್ (23) ಸುರತ್ಕಲ್ ಕೃಷ್ಣಾಪುರದ ಶಿಹಾಬ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್ ಹಾಗು ಬಾಂಗ್ಲಾದೇಶದ ಪ್ರಜೆ ನಾಸೀರ್ ಎಂದು ಗುರುತಿಸಲಾಗಿದೆ ಎಂದು ಮೃತರ ಬಂಧುಗಳು ಮಾಹಿತಿ ನೀಡಿದ್ದಾರೆ.

ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಅಲ್-ಹಸಾ ಎಂಬ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿ ಬಳಿಯ ನಿವಾಸಿ ರಿಜ್ವಾನ್ ಅವರು 4 ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಇವರು ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ಒಬ್ಬನೇ ಮಗ. ಈ ದಂಪತಿಗೆ ಇನ್ನು ಮೂವರು ಪುತ್ರಿಯರು ಇದ್ದಾರೆ.

ಮೃತಪಟ್ಟವರೆಲ್ಲ ಅಲ್ಲಿನ ಅಲ್ ಸ್ಯಾಕೊ ಕಂಪನಿಯ ಉದ್ಯೋಗಿಯಾಗಿದ್ದರು. ರಾತ್ರಿ ವೇಳೆ ಕೆಲಸಕ್ಕೆ ತೆರಳುತ್ತಿರುವಾಗ ಹಠಾತ್ತನೆ ಒಂಟೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ವಾಹನ ನಿಯಂತ್ರಿಸಲಾಗದೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತದೇಹಗಳನ್ನು ಅಲ್ಲಿನ ಅಲ್-ಹಸಾ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದೆ‌. ಮೃತರ ಪಾರ್ಥೀವ ಶರೀರಗಳನ್ನು ಊರಿಗೆ ತರಿಸುವ ಬಗ್ಗೆ ಮಂಗಳೂರಿನ ಸಂಘಟನೆಗಳ ಪ್ರಮುಖರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Comments are closed.