ಉಡುಪಿ: ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಉಡುಪಿಯ ಭವ್ಯಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ತಂದಿದ್ದಾರೆ.
ಹಪ್ಪಳ ಮಾರಾಟ ಮಾಡಿ ಜೀವನ ಸಾಗಿಸುವ ನಾರಾಯಣ ನಾಯಕ್ ಅವರ ಪುತ್ರಿಯಾಗಿರುವ ಭವ್ಯ ನಾಯಕ್ ಉಡುಪಿ ಪುತ್ತೂರು ನಿವಾಸಿ.
ಪೂರ್ಣಪ್ರಜ್ಞಾ ಪಿಯು ಕಾಲೇಜಿ ವಿದ್ಯಾರ್ಥಿನಿಯಾಗಿರುವ ಭವ್ಯ 597 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾಳೆ.
ಒಟ್ಟು 5 ವಿಷಯಗಳಲ್ಲಿ 100 ಕ್ಕೆ 100 ಅಂಕ ಸಾಧಿಸಿರುವ ಈಕೆ ಇಂಗ್ಲೀಷ್ ನಲ್ಲಿ ಮಾತ್ರ 3 ಅಂಕ ಕಡಿಮೆ ಪಡೆದಿದ್ದಾಳೆ. ಉತ್ತಮ ಅಂಕದ ಜೊತೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಲು ಪೋಷಕರು ಮತ್ತು ಕಾಲೇಜಿನ ಉಪನ್ಯಾಸಕರು ನೀಡಿದ ಪ್ರೋತ್ಸಾಹ ಹಾಗೂ ಸಹಾಯ ಕಾರಣ ಎನ್ನುತ್ತಾಳೆ ಭವ್ಯ. ಓದಲು ಯಾವುದೇ ಟೈಮ್ ಟೇಬಲ್ ಇತ್ಯಾದಿ ಬಳಸದೆ, ನೇರ ವಿಷಯವನ್ನು ಗ್ರಹಿಸಿ ಮನವರಿಕೆ ಮಾಡಿಕೊಂಡರೆ ಉತ್ತಮ ಅಂಕ ಪಡೆಯಬಹುದು ಎನ್ನುವ ಟಿಪ್ಸ್ ನೀಡುತ್ತಾಳೆ ಭವ್ಯ. ಮುಂದೆ ಕಂಪ್ಯೂಟರ್ ಸೈಯನ್ಸ್ ಶಿಕ್ಷಣ ಪಡೆಯುವ ಇಂಗಿತವಿರಿಸಿಕೊಂಡಿರುವ ಭವ್ಯ, ಸದ್ಯ ಸಿಇಟಿ ಪರೀಕ್ಷೆಯನ್ನು ಬರೆದಿದ್ದು ಅದರಲ್ಲೂ ಉತ್ತಮ ರ್ಯಾಂಕ್ ನೀರಿಕ್ಷೆಯಲ್ಲಿದ್ದಾರೆ.
Comments are closed.