(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ 2001ರಲ್ಲಿ 15 ಸಾವಿರವಿದ್ದ ಕೊರಗ ಸಮುದಾಯದ ಜನಸಂಖ್ಯೆ ಇದೀಗಾ 9 ಸಾವಿರಕ್ಕೆ ಇಳಿದಿದ್ದು, ಕೊರಗ ಸಮಾಜ ಅವನತಿ ಹಾದಿಯಲ್ಲಿರುವಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೊರಗ ಸಮುದಾಯದ ಯುವಕ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣನಾಗುವ ಮೂಲಕ ಸಮಾಜದಲ್ಲಿ ಶೈಕ್ಷಣಿಕ ಭರವಸೆ ಮೂಡಿಸಿದ್ದಾನೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನೆ ಅಧ್ಯಕ್ಷ ಶ್ರೀಧರ ನಾಡಾ ಹೇಳಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನೆ ಆಶ್ರಯದಲ್ಲಿ ಆಲೂರು ಹಾಡಿಮನೆ ವಠಾರದಲ್ಲಿ ಮಂಗಳವಾರ ನಡೆದ ಕೊರಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಅಖಿಲೇಶ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರಗ ಸಾಮಾಜದಲ್ಲಿ ನಾಲ್ಕು ಒಳಪಂಗಡಗಳಿದ್ದು, ಭಾಷೆ, ಸಂಸ್ಕೃತಿ, ಆಚರಣೆ, ನಂಬಿಕೆ, ಕಲೆ, ಡೋಲು ಬಾರಿಸುವ ಕ್ರಮ ಬೇರೆ ಬೇರೆಯಾಗಿದೆ. ಆಡುವ ಭಾಷೆ, ಸಂಪ್ರದಾಯದಲ್ಲೂ ಬದಲಾವಣೆ ಇದೆ. ಕೊರಗ ಸಮುದಾಯ ಅಳಿವಿನಂಚಿನಲ್ಲಿದ್ದು ಸರಕಾರ ಹಾಗೂ ಬೇರೆ ವರ್ಗದವರು ಸಮುದಾಯಕ್ಕೆ ವಿಶೇಷ ಮಾನ್ಯತೆ ನೀಡಬೇಕು. ಅಳಿವಿನಂಚಿಗೆ ಬಂದಿರುವ ಕೊರಗ ಸಮಾಜ ಅಳಿದರೆ ಕರಾವಳಿ ಭಾಗದ ಜನ ಸಂಸ್ಕೃತಿಯೇ ಹಾಗೂ ಪರಂಪರೆ ನಾಶವಾಗಲಿದೆ ಎಂದವರು ಅಭಿಪ್ರಾಯಪಟ್ಟರು.
ಆಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಶೆಟ್ಟಿ ಸನ್ಮಾನಿಸಿ ಮಾತನಾಡಿ, ಕೊರಗ ಸಮಾಜ ಬದಲಾವಣೆ ಆಗಿಬೇಕಿದ್ದರೆ ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಅಖಿಲೇಶ್ ಸಾಧನೆ ಕೊರಗ ಸಮಾಜದಲ್ಲಿ ಶೈಕ್ಷಣಿಕ ಭರವಸೆ ಮೂಡಿಸಿದ್ದು ಎಲ್ಲರಿಗೂ ಮಾದರಿಯಾಗಿದೆ. ಗ್ರಾಮಪಂಚಾಯತ್ ವತಿಯಿಂದ ಅಗತ್ಯ ಸಹಕಾರ ವಿದ್ಯಾರ್ಥಿಗೆ ನೀಡಲಾಗುತ್ತದೆ ಎಂಬ ಭರವಸೆ ನೀಡಿದರು.
ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುಂಡು ಪೂಜಾರಿ ಅತ್ಯಧಿಕ ಅಂಕ ಪಡೆದು ಉತ್ತೀರ್ಣನಾದ ಅಖಿಲೇಶ್‌ಗೆ 10/ಸಾವಿರ ನಗದು ಪ್ರೋತ್ಸಾಹ ಧನ ಘೋಷಿಸಿದರು. ಆಲೂರು ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ದೇವಾಡಿಗ, ಅಖಿಲೇಶ್ ತಂದೆ ಗಣೇಶ್ ಇದ್ದರು.
ಇಂಜಿನಿಯರ್ ಆಗುವ ಬಯಕೆ…
ಆಲೂರು ಗ್ರಾಮ ಪಂಚಾಯತ್ ನವಗ್ರಾಮ ನಿವಾಸಿ ಕೂಲಿ ಕೆಲಸ ಮಾಡಿಕೊಂಡಿರುವ ಗಣೇಶ್ ಹಾಗೂ ಮಾಲತಿ ಪುತ್ರ ಅಖಿಲೇಶ್ ಜಿಲ್ಲೆಯಲ್ಲಿ ಇದೂವರಗೆ ಕೊರಗ ವಿದ್ಯಾರ್ಥಿ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ಪಡೆಯದ ಅಂಕ ಪಡೆದು ಉತ್ತೀರ್ಣನಾಗಿದ್ದಾನೆ. ಆಲೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ಅಖಿಲೇಶ್ 602 ಅಂಕ ಪಡೆದಿದ್ದು, ಮುಂದೆ ಪಿಯುಸಿಯಲ್ಲಿ ಪಿಸಿಎಂಸಿ ವಿಭಾಗದಲ್ಲಿ ಮುಂದುವರೆದು ಇಂಜಿನಿಯರ್ ಆಗುವ ಗುರಿ ಹೊಂದಿದ್ದಾನೆ. ಮನೆಮಂದಿ ಏಳುವ ಮುಂಚೆಯೇ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದುತ್ತಾ, ಸಂಜೆಯೂ ಕೂಡ ಓದುತ್ತಿದ್ದ ಅಖಿಲೇಶ್ ಶಾಲಾ ಪಾಠ, ಶಿಕ್ಷಕರ ಹೊರತಾಗಿ ಯಾರ ಸಹಕಾರ ಪಡೆಯದೆ ಎಸ್ಸೆಸ್ಸೆಲ್ಸಿ ಮುಗಿಸಿದ್ದಾನೆ.
ನಾನು 8 ನೇ ತರಗತಿ ಓದಿದ್ದು ಕಷ್ಟದ ಹಿನ್ನೆಲೆ ಅರ್ಧಕ್ಕೆ ಶಾಲೆ ಬಿಡುವಂತಾಯಿತು.ನನ್ನ ಹಾಗೆ ನನ್ನ ಮಕ್ಕಳಾಗಬಾರದೆಂದು ಅವರಿಗೆ ಉತ್ತಮ ಶಿಕ್ಷಣ ನೀಡುವ ಯೋಚನೆಯಿದೆ. ಮಗ ಓದಿದರೆ ನನಗೆ ಖುಷಿ. ಅವನ ಚಿಂತನೆಯಂತೆ ಅಗತ್ಯ ಶಿಕ್ಷಣ ನೀಡುತ್ತೇನೆ.
– ಗಣೇಶ್ (ಅಖಿಲೇಶ್ ತಂದೆ)
Comments are closed.