ಕರಾವಳಿ

ಸಂಜೀವಿನಿ ಒಕ್ಕೂಟದ ಮೂಲಕ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ‌: ಸಿಡಿಪಿಒ ಶ್ವೇತಾ

Pinterest LinkedIn Tumblr

ಕುಂದಾಪುರ:  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ನಡೆಯುತ್ತಿದ್ದು ಸಂಜೀವಿನಿ ಒಕ್ಕೂಟಗಳು ಕೂಡಾ ಇದೇ ಮಾದರಿಯಲ್ಲಿ ಬಹುದೊಡ್ಡ ಬದಲಾವಣೆಯನ್ನು ಸಮಾಜದಲ್ಲಿ ತರಬೇಕಿದೆ. ಈ ನಿಟ್ಟಿನಲ್ಲಿ ಶ್ರದ್ಧೆಯಿಂದ ಗ್ರಾಮೀಣ ಪ್ರದೇಶದಲ್ಲಿ  ಕಾರ್ಯನಿರ್ವಹಿಸಿದಲ್ಲಿ ಮಹಿಳಾ ಸ್ವಾವಲಂಬನೆ ಬಗ್ಗೆ ಸರಕಾರದ ಉದ್ದೇಶವೂ ಈಡೇರಲಿದೆ ಎಂದು ಸಿಡಿಪಿಒ ಮತ್ತು ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಹೇಳಿದರು.

ಅವರು ಮಂಗಳವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ  ಸಂಜೀವಿನಿ ಒಕ್ಕೂಟಗಳ ಎಂಬಿಕೆಗಳ ಪ್ರಗತಿ ಪರಿಶೀಲನೆ, ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಂಜೀವಿನಿ ಸಂಘಗಳು ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಸರಕಾರದಿಂದ ದೊರೆಯುವ ವಿವಿಧ ಆರ್ಥಿಕ ಮೂಲ, ಸಹಾಯ, ಬ್ಯಾಂಕ್ ನೆರವು ಇತ್ಯಾದಿಗಳ ಮಾಹಿತಿ ನೀಡುವ ಮೂಲಕ ಮಹಿಳಾ ಬಲವರ್ಧನೆಗೆ ಕಾರಣವಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್‌ನ ಸಹಾಯಕ ಯೋಜನಾ ನಿರ್ದೇಶಕ ಜೇಮ್ಸ್ ಮಾತನಾಡಿ, ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯತ್‌ಗಳಲ್ಲಿ ಸಂಜೀವಿನಿ ಒಕ್ಕೂಟಗಳನ್ನು ರಚಿಸಲಾಗಿದೆ. ಕೆಲವು ಪಂಚಾಯತ್‌ಗಳಲ್ಲಿ ವರ್ಷದಿಂದ ನಡೆಸಲ್ಪಡುತ್ತಿದ್ದು ಕೆಲವುಗಳಲ್ಲಿ ಹೊಸದಾಗಿ ಆರಂಭಿಸಲಾಗಿದೆ. ಸಂಜೀವಿನಿ ಕುರಿತಾದ ನಕಾರಾತ್ಮಕ ಧೋರಣೆ ಈಗ ಕಡಿಮೆಯಾಗಿದೆ. ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಗ್ರಾಮ ಪಂಚಾಯತ್ ಮಟ್ಟದಲ್ಲಿ ಒಕ್ಕೂಟದ ಮುಖ್ಯ ಭೂಮಿಕೆಯಲ್ಲಿದ್ದಂತೆ ಎಂದರು.

ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್, ಜಯಮಾಲಾ ಉಪಸ್ಥಿತರಿದ್ದರು.

ತಾಲೂಕು ಮೇಲ್ವಿಚಾರಕ ಪ್ರಶಾಂತ್ ನಿರ್ವಹಿಸಿ, ಸ್ವಾಗತಿಸಿದರು.

Comments are closed.