ಕರಾವಳಿ

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ. ಕೂರ್ಮರಾವ್‌ ಅಧಿಕಾರ ಸ್ವೀಕಾರ: ವಿದ್ಯಾರ್ಥಿಗಳ ಜೊತೆ‌ ಸಂವಾದ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ. ಕೂರ್ಮ ರಾವ್‌ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ, ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೂಡ ಸೇವೆ‌‌ಸಲ್ಲಿಸಿದ್ದರು.

ನಿರ್ಗಮನ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದು ಇಂದಿನಿಂದ ಜಿಲ್ಲಾಧಿಕಾರಿ, ಜಿಲ್ಲಾ‌ದಂಡಾಧಿಕಾರಿಯಾಗಿ ಕೂರ್ಮರಾವ್ ಕರ್ತವ್ಯ ನಿರ್ವಹಿಸಲಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 9, 10 ಮತ್ತು ಪಿಯುಸಿ ಭೌತಿಕ ತರಗತಿಗಳು ಇಂದಿನಿಂದ ಆರಂಭವಾಗುತ್ತಿದ್ದು ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಡಿಸಿ‌ ಕೂರ್ಮರಾವ್‌ ಶಾಲೆ ಹಾಗೂ ಕಾಲೇಜಿ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಬೆರೆತು ಖುಷಿ ಪಟ್ಟರು.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿ, ಅಧಿಕಾರ ಸ್ವೀಕಾರದ ಬಳಿಕ ಮಕ್ಕಳ‌ಜೊತೆ ಮಾತನಾಡಿ‌ಅವರ ಅನುಭವ ಪಡೆದಿರುವುದು ಖುಷಿಯಾಗಿದೆ. ಶಾಲೆ, ಕಾಲೇಜಿನಲ್ಲಿ ಕೊರೋನಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಪೋಷಕರು ಕೂಡ ನಂಬಿಕೆಯಿಟ್ಟು ಶಾಲೆ, ಕಾಲೇಜಿಗೆ ಕಳಿಸಿದ್ದು ಮಾಸ್ಕ್, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಹಾಜರಾತಿ ಕೂಡ ಉತ್ತಮವಾಗಿರುವುದು ಕಂಡುಬಂದಿದೆ. ಶಿಕ್ಷಣ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಕೊರೋನಾ ಮಹಾಮಾರಿಯನ್ನು ಮುಕ್ತವಾಗಿಸಲು ಒಗ್ಗೂಡಿ ಹೋರಾಡಬೇಕು. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡವರು ಕೂಡ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಹಾಗೂ ಸ್ಯಾನಿಟೈಸಿಂಗ್ ಕ್ರಮ ಪಾಲನೆ ಮಾಡಬೇಕು.

ಇನ್ನು 6, 7, 8ನೇ ತರಗತಿಗಳು ಉಳಿದ ಜಿಲ್ಲೆಯಲ್ಲಿ ಆರಂಭಗೊಳ್ಳುವ ಸಮಯವೇ ಉಡುಪಿಯಲ್ಲಿ ಆರಂಭವಾಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಪಾಸಿಟಿವಿಟಿ ರೇಟ್ ಆಧಾರದಲ್ಲಿ ಸರಕಾರದ ನಿರ್ಧಾರ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಸರಕಾರ ಉಡುಪಿಯಲ್ಲಿ ವಾರಾಂತ್ಯದ ಕರ್ಫ್ಯೂ ಆದೇಶಿಸಿದ್ದು ಈ ಬಗ್ಗೆ ಸಂಬಂದಪಟ್ಟವರ ಬಳಿ‌ ಚರ್ಚಿಸಲಾಗುತ್ತದೆ. ಹಿಂದಿನ ಜಿಲ್ಲಾಧಿಕಾರಿಗಳು ಹಾಗೂ ತಂಡ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡಿದ್ದು ಮುಂದಿನ‌ದಿನದಲ್ಲಿ ಸ್ಥಿತಿಗತಿಗಳನ್ನು ಪರಿಶೀಲಿಸಿ‌ ಕ್ರಮಕೈಗೊಳ್ಳಲಾಗುತ್ತದೆ. ಜನರ ಜೊತೆ ಬೆರೆಯುವ ಸಲುವಾಗಿ ಪ್ರವಾಸ ಮಾಡಿ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ನನ್ನ‌ ಕಾರ್ಯವೈಖರಿಯಾಗಿದೆ ಎಂದರು.

 

Comments are closed.