ಕರಾವಳಿ

ಬಡವರ ಶಿಕ್ಷಣ ಕಾಶಿಯಾಗುತ್ತಿದೆ ಕುಂದಾಪುರ ಜ್ಯೂನಿಯರ್ ಕಾಲೇಜು: ಗಣನೀಯ ಮಟ್ಟದಲ್ಲಿ ಏರುತ್ತಿದೆ ವಿದ್ಯಾರ್ಥಿಗಳ ದಾಖಲಾತಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜ್ ಅಥವಾ ಜ್ಯೂನಿಯರ್ ಕಾಲೇಜು (ಬೋರ್ಡ್ ಹೈಸ್ಕೂಲ್) ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಎಸ್ಸೆಸ್ಸೆಎಲ್ಸಿ ಫಲಿತಾಂಶದ ನಂತರ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರಥಮ ಪಿಯುಸಿಗೆ ಅರ್ಜಿ ಭರ್ತಿ ಮಾಡಿದವರ ಸಂಖ್ಯೆ ಬರೋಬ್ಬರಿ 1300. ಪ್ರತಿದಿನ ಅರ್ಜಿ ಪಡೆಯಲು ಬರುತ್ತಿರುವ ಮಕ್ಕಳ ಸಂಖ್ಯೆ ಕೂಡಾ ಕಡಿಮೆಯಿಲ್ಲ.

ಕುಂದಾಪುರ ಪದವಿಪೂರ್ವ ಕಾಲೇಜ್ ಶತಮಾನ ಕಂಡಿದ್ದು, ಮುಂದಿನ ವರ್ಷ ಸುವರ್ಣ ಮಹೋತ್ಸವ ಸಂಭ್ರಮದ ಆಚರಣೆಗೆ ದಾಖಲೆ ಪ್ರಮಾಣದಲ್ಲಿ‌ ವಿದ್ಯಾರ್ಥಿಗಳು ಅಡ್ಮಿಶನ್ ಆಗುತ್ತಿದ್ದು ಇನ್ನು ಇಲ್ಲಿನ ಹಳೆ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಅಡ್ಮಿಶನ್ ಮಾಡುವ ಮೂಲಕ ತಾವು ಕಲಿತ ಶಾಲೆಗೆ ಉಡುಗೊರೆ ನೀಡುತ್ತಿದ್ದಾರೆ.

ಬೋರ್ಡ್ ಹೈಸ್ಕೂಲ್‌ನಲ್ಲಿ ಈಗಾಗಲೇ 22 ಸೆಕ್ಸನ್ ಇದ್ದು, ಮತ್ತೆ ನಾಲ್ಕು ಸೆಕ್ಷನ್ ಹೊಸದಾಗಿ ಆರಂಭಿಸಲಿದ್ದು, ಕಂಪ್ಯೂಟರ್ ಸೈನ್ಸ್, ಸ್ಟ್ಯಾಟಿಸ್ಟಿಕ್ಸ್, ಆರ್ಟ್ 1, ಕಲಾ ವಿಭಾಗದಲ್ಲಿ 1 ವಾಣಿಜ್ಯ ವಿಭಾಗದಲ್ಲಿ 6, ವಿಜ್ಞಾನ 3 ವಿಭಾಗವಿದ್ದು, ಹೆಚ್ಚು ವಿಭಾಗ ತೆರೆಯುವ ಅವಕಾಶ ಬೋರ್ಡ್ ಹೈಸ್ಕೂಲಿಗೆ ಇದೆ. ಈ ಭಾರಿ ಕಂಪ್ಯೂಟರ್ ಸೈನ್ಸ್ ಹಾಗೂ ಸ್ಟ್ಯಾಟಿಸ್ಟಿಕ್ ಕಡೆ ವಿದ್ಯಾರ್ಥಿಗಳು ಹೆಚ್ಚು ವಾಲಿದ್ದಾರೆ. ಕಂಪ್ಯೂಟರ್ ಸೈನ್ಸ್, ಇಬಿಎಸಿ, ಇಬಿಎಎಸ್, ಪಿಸಿಎಂಬಿ, ಪಿಸಿಎಂಸಿ, ಇಬಿಎಸಿ ಕೂಡಾ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಬೋರ್ಡ್ ಹೈಸ್ಕೂಲ್‌ನಲ್ಲಿ ಕಲಿಯೋದೆ ಒಂದು ಹೆಮ್ಮ ಸಂಗತಿಯಾಗಿದ್ದು, ಗತವೈಭವ ಮತ್ತೆ ಮರುಕಳಿಸುತ್ತಿದೆ ಎಂದರೆ ತಪ್ಪಾಗಲಾರದು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1300 ಅರ್ಜಿಗಳು ಈಗಾಗಲೇ ಬಂದಿದೆ. ವರ್ಷದಿಂದ ವರ್ಷಕ್ಕೆ ಹಾಜರಾತಿ ಏರಿಕೆಯಲ್ಲೇ ಸಾಗುತ್ತಿದೆ. ಕುಂದಾಪುರ ಪೇಟೆ ಪರಿಸರದ ಮಕ್ಕಳು‌ ಮಾತ್ರವೇ ಬೋರ್ಡ್ ಸ್ಕೂಲಿಗೆ ಬರೋದಿಲ್ಲ. ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಅತ್ಯಂತ ಗ್ರಾಮೀಣ ಭಾಗದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾರ್ಜನೆಗೆ ಬರುತ್ತಾರೆ. ಶೈಕ್ಷಣಿಕ ಮಟ್ಟ, ಶಿಸ್ತು, ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳ ಆಕರ್ಷಿಸುವುದರಿಂದಲೇ ಪ್ರತಿ ವರ್ಷ ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿಗಳ ಅಡ್ಮಿಶನ್ ಏರುಗತಿಯಲ್ಲಿ ಸಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1350ಕ್ಕೂ ಅಧಿಕ ವಿದ್ಯಾರ್ಥಿಗಳು ಅಡ್ಮೀಶನ್ ಅರ್ಜಿ ಭರ್ತಿ ಮಾಡಿದ್ದು, ಎಸ್ಸೆಸ್‌ಎಲ್ಸಿ ಫಲಿತಾಂಶದ ನಂತರ ಪ್ರತಿದಿನ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿ ಅಡ್ಮಿಶನ್‌ಗಾಗಿ ಬರುತ್ತಿದ್ದಾರೆ.

ಕುಂದಾಪುರ ಬೋರ್ಡ್ ಹೈಸ್ಕೂಲಿಗೆ ಅದರದ್ದೇ ಆದ ಇತಿಹಾಸವಿದ್ದು, ಪ್ರತೀವರ್ಷ ಶೇ.85ಕ್ಕೂ ಮಿಕ್ಕಿ ಫಲಿತಾಂಶ ದಾಖಲಾಗುತ್ತಿದೆ. ನಮ್ಮ ಶಾಲೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಕೇವಲ ಶಿಕ್ಷಣ ಮಾತ್ರವಲ್ಲದೆ ಕ್ರೀಡೆಗೂ ಕೊಡುವ ಪ್ರೋತ್ಸಾಹಕ್ಕೆ ಸಾಕ್ಷಿ. ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಆಗುತ್ತಿದ್ದು, ಹೆಮ್ಮೆಯಾಗಿದೆ. ಈ ಯಶಸ್ಸಿನ ಹಿಂದೆ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಾಗೂ ಉಪನ್ಯಾಸಕ ಮಂಡಳಿ ಸಹಕಾರವೇ ಕಾರಣ.
– ರಾಮಕೃಷ್ಣ ಬಿ.ಜಿ- ಪ್ರಾಂಶುಪಾಲರು ಬೋರ್ಡ್ ಹೈಸ್ಕೂಲ್, ಕುಂದಾಪುರ

Comments are closed.