ಯುವಜನರ ವಿಭಾಗ

ನಿಮಗೆ ಗರ್ಲ್​ಫ್ರೆಂಡ್ ಸಿಗದಿರಲು ಮುಖ್ಯ ಕಾರಣ ಈ ನಿಮ್ಮ ಗುಣಗಳೇ…!

Pinterest LinkedIn Tumblr

ಪ್ರೀತಿ ಮಾಯೆ ಹುಷಾರು..ಕಣ್ಣೀರು ಮಾರೋ ಬಜಾರು ಎಂಬ ಗೀತೆ ಕೂಡ ನೀವು ಕೇಳಿರಬಹುದು…ಆದರೆ ನೀವು ಸಂಗಾತಿಯನ್ನು ಆರಿಸಿಕೊಳ್ಳುವಾಗ ಎಚ್ಚರಿಕೆ ವಹಿಸಿದರೆ ಅದೇ ಪ್ರೀತಿ ನಿಮ್ಮನ್ನು ಪ್ರೇಮಲೋಕದಲ್ಲಿ ತೇಲಾಡಿಸುವುದರಲ್ಲಿ ಸಂಶಯವೇ ಇಲ್ಲ.

ಪ್ರೀತಿ..ಪ್ರೇಮ..ಪುಸ್ತಕದ ಬದನೆಕಾಯಿ ಎಂದು ಹೇಳಿದರೂ, ಎಷ್ಟೋ ಜನರು ಇತಮ್ಮ ಒಣ ವೇದನೆಗಳನ್ನು ಹೇಳಿಕೊಳ್ಳಲು ಗೆಳೆತಿಯೊಬ್ಬಳಿಗಾಗಿ ಹಾತೊರೆಯುತ್ತಿರುತ್ತಾರೆ. ಅದರಲ್ಲೂ ಹರೆಯ ಹುಡುಗರಲ್ಲಿ ಇಂತಹ ಭಾವನೆ ಹೆಚ್ಚು. ಹೇಗಾದರೂ ಮಾಡಿ, ಒಂದು ಹುಡುಗಿಯನ್ನು ಒಲಿಸಿಕೊಳ್ಳಬೇಕೆಂದು ಬಯಸುತ್ತಿರುತ್ತಾರೆ. ಆದರೆ ನಾನಾ ಕಸರತ್ತು ಮಾಡಿದರೂ ಗರ್ಲ್​ಫ್ರೆಂಡ್ ಮಾತ್ರ ಸಿಕ್ಕಿರುವುದಿಲ್ಲ. ಎಲ್ಲ ಫ್ರೆಂಡ್ಸ್​ ಗುಂಪಿನಲ್ಲಿ ಒಬ್ಬ ಸಿಂಗಲ್ ಇದ್ದೇ ಇರುತ್ತಾನೆ. ಎಲ್ಲರೂ ಆತನನ್ನು ಕಾಲೆಳೆಯುವುದು ಇಂದಿನ ಟ್ರೆಂಡ್ ಆಗಿಬಿಟ್ಟಿದೆ. ಇಂತಹ ವೇಳೆ ಮನಸ್ಸಿನಲ್ಲಿ ನೂರಾರು ಭಾವನೆಯನ್ನು ಅದುಮಿಟ್ಟುಕೊಂಡು ಆತ ಹೇಳುವ ಡೈಲಾಗ್ ‘ಸಿಂಗಲ್ಲಾಗಿದ್ದರೂ ಸಂತೋಷವಾಗಿದ್ದೀನಿ’. ಆದರೆ ಒಳಗೊಳಗೆ ಏಕಾಂತದಿಂದ ಬಳಲಿ ಪ್ರೀತಿಗಾಗಿ ಕೊರಗುತ್ತಿರುತ್ತಾನೆ ಎಂಬುದೇ ನಿಜ.

ಸಾಮಾನ್ಯವಾಗಿ ನಿಮಗೆ ಗರ್ಲ್​ಫ್ರೆಂಡ್ ಸಿಗದಿರಲು ಮುಖ್ಯ ಕಾರಣ ನೀವೇ ಹೊರತು, ಮತ್ಯಾರೂ ಅಲ್ಲ. ಏಕೆಂದರೆ ನೀವು ಒಬ್ಬರೊಂದಿಗೆ ಹೇಗೆ ವರ್ತಿಸುತ್ತೀರಿ, ನಿಮ್ಮ ನಡವಳಿಕೆ, ನಿಮ್ಮ ಆತ್ಮ ವಿಶ್ವಾಸ ಎಂಬಿತ್ಯಾದಿ ವಿಷಯಗಳೇ ಒಬ್ಬರಿಗೆ ನೀವು ಇಷ್ಟವಾಗಲು ಇರಬೇಕಾದ ಪ್ರಮುಖ ಅಂಶಗಳು. ಇದನ್ನು ನೀವು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸದಿದ್ದರೆ ಸಿಂಗಲ್ ಆಗಿರುತ್ತೀರಿ. ಅಥವಾ ನಿಮಗೆ ಗರ್ಲ್​ಫ್ರೆಂಡ್ ಒಲಿಯದಿರಲು ನಿಮ್ಮ ಈ ಗುಣಗಳು ಸಹ ಕಾರಣವಾಗಿರಬಹುದು.

ಆತ್ಮ ವಿಶ್ವಾಸದ ಕೊರತೆ: ಯಾರೂ ಏನೇ ಹೇಳಿದರೂ, ಕೆಲ ಹುಡುಗರಿಗೆ ಹುಡುಗಿಯರು ಅಂದರೆ ಅದೇನೊ ಭಯ. ನಾಲ್ಕು ಜನರೊಂದಿಗೆ ಹೊಡೆದಾಡ ಬಲ್ಲೆ, ಆದರೆ ನಲ್ಲೆಯನ್ನು ಒಲಿಸಲು ಮುಂದೆ ನಿಲ್ಲಲಾಗದಷ್ಟು ಹೆದರಿಕೆ. ಇವಳೇ ಸಂಗಾತಿ ಎಂದು ಮನಸಲ್ಲಿ ತೀರ್ಮಾನಿಸಿದರೂ, ಅವಳ ಬಳಿ ಮಾತ್ರ ಹೇಳಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಆತ್ಮ ವಿಶ್ವಾಸದ ಕೊರತೆ. ನೀವು ಪ್ರತಿ ನಿತ್ಯ ನೋಡುವ ಹುಡುಗಿಯಾಗಿದ್ದರೆ, ಅವಳಿಗೂ ನಿಮ್ಮ ಮೇಲೆ ಅದೇ ಪ್ರೀತಿ ಮೊಳಕೆಯೊಡಿದಿರಬಹುದು. ಇಂತಹ ಸಂದರ್ಭದಲ್ಲಿ ಆತ್ಮ ವಿಶ್ವಾಸದಿಂದ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಇಲ್ಲದಿದ್ದರೆ ನೀವು ಸಿಂಗಲ್ಲಾಗಿ ಸೈಲೆಂಟಾಗಿ ಇರುತ್ತೀರಿ.

ಚಂಚಲತೆ : ಕೆಲ ಹುಡುಗರ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಒಂದು ಹುಡುಗಿಯನ್ನು ನೋಡಿದಾಗ ಮನಸ್ಸಿಗೆ ಮೆಚ್ಚುಗೆಯಾದರೂ, ಮೆದುಳು ಜಾಸ್ತಿ ಕೆಲಸ ಮಾಡಿ ಬಿಡುತ್ತದೆ. ಇದರಿಂದ ಅವಳು ನನಗೆ ಸೂಟ್ ಆಗಲ್ಲ. ಅವಳಿಗಿಂತ ನನಗಿಂತ ಸುಂದರವಾಗಿಲ್ಲ. ಆಕೆ ಸರ್ವಗುಣ ಸಂಪನ್ನೆಯಲ್ಲ. ಅವಳನ್ನು ಗೆಳೆತಿ ಮಾಡಿಕೊಂಡರೆ ಫ್ರೆಂಡ್ಸ್​ ಏನೇಳುತ್ತಾರೊ…ಇತ್ಯಾದಿ ಪ್ರಶ್ನೆಗಳನ್ನು ತನಗೆ ತಾನೇ ಕೇಳುತ್ತಿರುತ್ತಾನೆ. ಅಲ್ಲದೆ ಇವಳಿಗಿಂತ ಅವಳೇ ಚೆನ್ನಾಗಿದ್ದಾಳೆ. ಅವಳನ್ನೇ ಗರ್ಲ್​ಫ್ರೆಂಡ್ ಮಾಡುವುದು ಉತ್ತಮ ಎಂದು ಇಬ್ಬರನ್ನು ಕಂಪೇರ್ ಮಾಡಲು ಪ್ರಾರಂಭಿಸುತ್ತಾನೆ. ಇಲ್ಲಿ ತಾನು ಹೇಗಿದ್ದೀನಿ ಎಂಬುದನ್ನು ಯೋಚಿಸುವುದಿಲ್ಲ. ತನಗೆ ಸೂಕ್ತ ಎನಿಸಿದರೆ ಪ್ರೀತಿ ಹೇಳಬೇಕೆ ಹೊರತು, ಮೈ ಬಣ್ಣ, ಬೇರೆಯವರು ವಿಚಾರ, ಜಾತಿ-ಗೀತಿ ಇತ್ಯಾದಿಗಳನ್ನು ಪಕ್ಕಕ್ಕಿಡಬೇಕಾಗುತ್ತದೆ. ಇಲ್ಲದಿದ್ದರೆ ಲೈಫ್ ಲಾಂಗ್ ನೀವು ಇಂತಹ ಚಂಚಲತೆ ಆಲೋಚನೆಯಿಂದ ಸಿಂಗಲ್ಲಾಗೆ ಉಳಿಯುತ್ತೀರಿ.

ಕೀಳರಿಮೆ: ಕೆಲವರ ಮನಸ್ಸನಲ್ಲಿ ಚಂಚಲತೆ ಮನೆ ಮಾಡಿದರೆ, ಮತ್ತೆ ಕೆಲವು ಹುಡುಗರಲ್ಲಿ ಹೋಗಲಾಡಿಸದಂತಹ ಕೀಳರಿಮೆ ತುಂಬಿರುತ್ತದೆ. ಇಂತಹವರಿಗೂ ಗರ್ಲ್​ಫ್ರೆಂಡ್ ಸಿಗುವುದು ತುಸು ಕಷ್ಟ. ತಾನು ನೋಡಲು ಸ್ಪುರದ್ರೂಪಿ ಅಲ್ಲ, ನನ್ನ ಬಳಿ ಹಣವಿಲ್ಲ, ನನ್ನನ್ನು ಯಾವ ಹುಡುಗಿ ಕೂಡ ಇಷ್ಟಪಡುವುದಿಲ್ಲ..ಎಂಬಿತ್ಯಾದಿ ಕೀಳರಿಮೆಯನ್ನು ನಿಮ್ಮ ಬಗ್ಗೆ ನೀವೇ ಬೆಳೆಸಿಕೊಂಡಿರುತ್ತೀರಿ. ಆದರೆ ಬರೀ ಚರ್ಮವನ್ನು ನೋಡಿ ಯಾರೂ ಕೂಡ ಪ್ರೀತಿಸುವುದಿಲ್ಲ. ಅಥವಾ ಎಲ್ಲರೂ ದುಡ್ಡಿಗಾಗಿ ಪ್ರೀತಿಸುವುದಿಲ್ಲ ಎಂಬುದು ನೆನಪಿಟ್ಟುಕೊಳ್ಳಿ. ಸಾಮಾನ್ಯವಾಗಿ ಕೀಳರಿಮೆ ಇರುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಮತ್ತೊಂದು ಕಾರಣ ಅವರಲ್ಲಿನ ಮುಗ್ಧತೆ ಎನ್ನಬಹುದು. ಇಲ್ಲಿ ನೀವು ಒಂಚೂರು ಆತ್ಮ ವಿಶ್ವಾಸ ಪ್ರದರ್ಶಿಸಿದರೂ ಗರ್ಲ್​​ಫ್ರೆಂಡ್​ ಅನ್ನು ಒಲಿಸಿಕೊಳ್ಳಬಹುದು. ಆದರೆ ಹುಡುಗಿಯರು ನಿಮ್ಮ ಬಳಿ ಬರುವಾಗ ಅದೇ ಕೀಳರಿಮೆಯಿಂದ ವರ್ತಿಸಿದರೆ ಸಿಂಗಲ್ಲಾಗಿರುವುದು ಶಾಶ್ವತವಾಗಿ ಬಿಡುತ್ತದೆ.

ಗೆಳೆಯರ ಗುಂಪು: ಹುಡುಗಿಯರು ಸಾಮಾನ್ಯವಾಗಿ ಉತ್ತಮ ನಡತೆಯುಳ್ಳ ಗೆಳೆಯ ಬೇಕೆಂದು ಬಯಸುತ್ತಾರೆ. ಆದರೆ ನೀವು ಉತ್ತಮವಾಗಿದ್ದರೂ, ಕೆಟ್ಟ ಫ್ರೆಂಡ್ಸ್​ಗಳ ಜತೆಯಿದ್ದೀರಿ ಎಂದಿಟ್ಟುಕೊಳ್ಳಿ. ಅವರಿಗೆ ನಿಮ್ಮ ಬಗ್ಗೆಯು ಕೆಟ್ಟ ಭಾವನೆ ಇರುತ್ತದೆ. ನೀವು ಕೂಡ ಪೋಲಿಗಳ ಗುಂಪಿನ ಸದಸ್ಯ ಎಂಬಂತೆ ಅವರ ಕಣ್ಣಿಗೆ ಕಾಣಿಸುತ್ತದೆ. ಇಂತಹ ಗೆಳೆಯರ ಗುಂಪಿನಲ್ಲಿ ನೀವಿದ್ದರೆ ಗರ್ಲ್​​ಫ್ರೆಂಡ್ ಸಿಗುವುದು ಯಾಕೋ ಡೌಟ್. ಹಾಗಾಗಿ ಯಾರನ್ನಾದರೂ ಒಲೈಸಿಕೊಳ್ಳುವ ಪ್ಲ್ಯಾನ್​ ಇದ್ದರೆ, ಸಾಧ್ಯವಾದಷ್ಟು ಸಿಂಗಲ್ಲಾಗಿ ಹೋಗಿ ಪ್ರೊಪೊಸ್ ಮಾಡಿ.ನಾಚಿಕೆ ಸ್ವಭಾವ: ನಿಮ್ಮಲ್ಲಿ ಅತಿಯಾದ ನಾಚಿಕೆಯಿದ್ದರೂ ಸಂಗಾತಿ ಸಿಗುವುದು ಸ್ವಲ್ಪ ಕಷ್ಟ. ಏಕೆಂದರೆ ಕೆಲವರು ಫೇಸ್​ಬುಕ್, ವಾಟ್ಸ್​ಆ್ಯಪ್​ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಆದರೆ ನೇರವಾಗಿ ಒಂದು ನಿಮಿಷ ಮಾತನಾಡಲು ಹಿಂಜರಿಯುತ್ತಾರೆ. ಇಂತಹವರನ್ನು ಹುಡುಗಿಯರು ಹೆದರು ಪುಕ್ಕಲರು ಎಂದೇ ಭಾವಿಸುತ್ತಾರೆ. ಹುಡುಗಿಯರು ಯಾವಾಗಲೂ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಿಸುವ ಹುಡುಗರನ್ನು ಬಯಸುತ್ತಾರೆ. ನಿಮ್ಮ ಅತಿಯಾದ ನಾಚಿಕೆ ಸ್ವಭಾವ ಅವರನ್ನು ನಿಮ್ಮಿಂದ ಏನೂ ಆಗಲ್ಲ ಎಂಬ ಭಾವನೆ ಮೂಡಿಸುತ್ತದೆ. ನೀವು ಹೀಗಿದ್ದರೆ, ನಿಮ್ಮ ಆ್ಯಟಿಟ್ಯೂಡ್ ಬದಲಿಸಿಕೊಳ್ಳಿ. ಒಂದು ಬಾರಿ ನೇರವಾಗಿ ನಿಮ್ಮ ಗೆಳತಿಗೆ ನೋವಾಗದಂತೆ ಗೌರವದಿಂದ ಪ್ರೊಪೊಸ್ ಮಾಡಿ. ಇಲ್ಲದಿದ್ದರೆ ನಿಮಗೆ ಗರ್ಲ್​ಫ್ರೆಂಡ್ ಇಷ್ಟವಾದರೂ, ಅವರಿಗೆ ನಿಮನ್ನು ಇಷ್ಟವಾಗದೇ ಸಿಂಗಲ್ಲಾಗಿರುತ್ತೀರಿ.

ಆತುರತೆ ಮತ್ತು ಅನುಭವ: ಕೆಲವರು ಸ್ವಲ್ಲ ದಿನದ ಪರಿಚಯದಲ್ಲೇ ಹುಡುಗಿಯರನ್ನು ಪ್ರೊಪೋಸ್ ಮಾಡುವ ಆತುರತೆ ತೋರಿಸುತ್ತಾರೆ. ನಿಮ್ಮಲ್ಲಿ ಪ್ರೀತಿಯ ಭಾವನೆ ಇದ್ದರೂ, ಅವರಲ್ಲಿ ನಿಮ್ಮ ಬಗ್ಗೆ ಅನುಮಾನಗಳು ಮೂಡಿಸುತ್ತದೆ. ಹುಡುಗಿಯರು ಸಾಮಾನ್ಯವಾಗಿ ಎಲ್ಲವನ್ನು ಅಳೆದು ತೂಗಿ ಯೋಚಿಸುವುದರಿಂದ ನಿಮ್ಮ ಆತುರದ ನಿರ್ಧಾರವನ್ನು ತಿರಸ್ಕರಿಸುವ ಸಾಧ್ಯೆತೆಯಿರುತ್ತದೆ. ಅಥವಾ ಈ ಹಿಂದಿನ ಪ್ರೀತಿಯಲ್ಲಿನ ಕಹಿ ಅನುಭವ ನಿಮ್ಮ ನಿಜವಾದ ಪ್ರೀತಿಯ ಮೇಲೆ ಸಂಶಯ ಮೂಡುವಂತೆ ಮಾಡುತ್ತದೆ. ಹೀಗಾಗಿ ಒಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕಿಂತ ಮುಂಚೆ ನಿಮ್ಮ ಪ್ರೀತಿ ವ್ಯಕ್ತಪಡಿಸಬೇಡಿ. ಹಾಗೇನಾದರೂ ಹೇಳಿದರೂ, ಬಳಿಕ ಸಂಭಾಳಿಸಿ ಗೆಳೆತಿಯ ಮನಸಿನಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಇಲ್ಲದಿದ್ದರೆ ನೀವು ಗೆಳೆತನಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯದಲ್ಲಿ ನಿಮ್ಮನ್ನು ದೂರ ಮಾಡುವ ಸಾಧ್ಯತೆ ಹೆಚ್ಚು.

ವಿಶೇಷ ಕೌಶಲ್ಯದ ಕೊರತೆ: ಹುಡುಗಿಯರು ತಮ್ಮ ಬಾಯ್​ ಫ್ರೆಂಡ್ ಆಗುವ ಹುಡುಗರಿಂದ ತುಸು ಜಾಸ್ತಿಯೇ ಬಯಸುತ್ತಾರೆ. ಅದರಲ್ಲಿ ಮುಖ್ಯವಾಗಿ ನಿಮ್ಮಲಿರುವ ವಿಶೇಷ ಟ್ಯಾಲೆಂಟ್​ಗಳು. ಉದಾ: ನಿಮಗೆ ಒಂದು ಹಾಡನ್ನು ಗುನುಗಲು ಬರುವುದಿಲ್ಲ ಎಂದು ಗೊತ್ತಾದರೆ ಅವರೂ ಕೂಡ ಯೋಚಿಸುತ್ತಾರೆ. ನಿಮಗೆ ತಿಳಿದಿರುವ ಒಂದು ವಿಷಯವನ್ನು ಅಥವಾ ಇವರಿಗೆ ಇಷ್ಟವಿರುವ ಒಂದು ಕಲೆಯ ಬಗ್ಗೆ ನೀವು ಆಸಕ್ತಿವಹಿಸುವುದು ಉತ್ತಮ. ಆ ಮೂಲಕ ನೀವು ಬಯಸಿದ ಹುಡುಗಿಯನ್ನು ಇಂಪ್ರೆಸ್ ಮಾಡಬಹುದು. ಕೊನೆ ಪಕ್ಷ ಅತ್ಯುತ್ತಮ ಸಿನಿಮಾಗಳನ್ನು ನೋಡುವವರಾಗಿದ್ದರೂ ಸಾಕು. ಅಂತಹ ಸಿನಿಮಾಗಳ ಬಗ್ಗೆ ಪರಸ್ಪರ ಅಭಿಪ್ರಾಯ ಹಂಚಿಕೊಂಡು ಹತ್ತಿರವಾಗಬಹುದು. ಇದು ಕೂಡ ಇಲ್ಲದಿದ್ದರೆ ಜೀವನ ಸರ್ವೇ ಸಿಂಗಲ್ ಮಯಂ ಆಗಿಬಿಡುವ ಚಾನ್ಸ್ ಜಾಸ್ತಿ.

ಫಿಟ್​ನೆಸ್ ಹಾಗೂ ಡ್ರೆಸಿಂಗ್: ತುಂಬಾ ನೀಟಾಗಿ ಡ್ರೆಸಿಂಗ್ ಮಾಡುವ ಹುಡುಗರು ಹುಡುಗಿಯರಿಗೆ ಬೇಗನೇ ಇಷ್ಟವಾಗುತ್ತಾರೆ. ಅದರಲ್ಲೂ ಫಾರ್ಮಲ್ ಲುಕ್​ನಲ್ಲಿರುವ ಹುಡುಗರನ್ನು ಕಂಡರೆ ಹುಡುಗಿಯರು ಫಿದಾ ಆಗುತ್ತಾರಂತೆ. ಹೀಗಾಗಿ ಸದಾ ನಿಮ್ಮ ಡ್ರೆಸಿಂಗ್ ಕಡೆ ಗಮನವಿರಲಿ. ಹಾಗೆಯೇ ಆರ್ಕಷಕ ಮೈಕಟ್ಟನ್ನು ಹೊಂದಿದ್ದರೆ ಮತ್ತಷ್ಟು ಸುಲಭವಾಗಿ ಇಂಪ್ರೆಸ್ ಮಾಡಿಕೊಳ್ಳಬಹುದು. ಹೀಗಾಗಿ ಹುಡುಗಿಯರನ್ನು ಒಲೈಸಿಕೊಳ್ಳಲು ಫಿಟ್​ನೆಸ್ ಹಾಗೂ ಡ್ರೆಸಿಂಗ್ ಸ್ವಲ್ಪ ಹೆಚ್ಚೇ ಗಮನಹರಿಸಿ.

ಅಂದಹಾಗೆ ಒಂದು ಮಾತು. ಜೀವನದಲ್ಲಿ ಗರ್ಲ್​ಫ್ರೆಂಡ್ ಇದ್ದವರೆಲ್ಲರೂ ಸಾಧಿಸಿದ್ದಾರೆ ಎಂದರ್ಥವಲ್ಲ. ಗರ್ಲ್​ಫ್ರೆಂಡ್ ಅಂದರೇನೇ ಜೀವನ ಎಂಬ ನಿಯಮ ಕೂಡ ಇಲ್ಲಿಲ್ಲ. ಸಂಗಾತಿ ಸಿಕ್ಕರೆ ಜೀವನ ತುಸು ರೋಮ್ಯಾಂಟಿಕ್ ಟ್ರ್ಯಾಕ್​ನಲ್ಲಿರುತ್ತದೆ. ಗರ್ಲ್​ಫ್ರೆಂಡ್​ನ ಬೇಕೆಂಬುದು, ಬಿಡುವುದು ನಿಮ್ಮ ವೈಯುಕ್ತಿ ವಿಚಾರ. ಸಿಂಗಲ್ಲಾಗಿ ಸಿಂಗಲ್ ಸಿಂಗಂ ಎಂಬಂತೆ ಸಾಧಿಸಿ ತೋರಿಸಿದ ಅನೇಕ ಉದಾಹರಣೆಗಳು ನಮ್ಮ ಸಮಾಜದಲ್ಲಿದೆ. ಹಾಗೆಯೇ ಪ್ರೀತಿ ಎಂಬುದು ಬರೀ ಹುಡುಗಿಗೆ ಮಾತ್ರ ಕೊಡುವಂತದಲ್ಲ. ಏಕೆಂದರೆ ನಿಮಗೆ ಪ್ರೀತಿಸಲು ಕಲಿಸಿದ್ದೇ ತಂದೆ ತಾಯಿಗಳು ಎಂಬುದು ಸದಾ ನೆನಪಿರಲಿ.

Comments are closed.