ಕರಾವಳಿ

ನೆಟ್‌ಬಾಲ್  ಪಂದ್ಯಾಟ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Pinterest LinkedIn Tumblr

ಕುಂದಾಪುರ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ನೆಟ್‌ಬಾಲ್  ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ತಂಡದ ನಾಯಕ ಗಣೇಶ್ ಆರ್., ತಂಡದಲ್ಲಿದ್ದ ವಿದ್ಯಾರ್ಥಿಗಳಾದ ನಿರೂಪ, ರೋಹಿತ್, ಯಶಸ್, ದಿಗಂತ, ಸುಬ್ರಮಣ್ಯ, ಸಚಿನ್, ಕಾರ್ತಿಕ್ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ವಿಜೇತರನ್ನು ಅಭಿನಂದಿಸಿ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ನೆಟ್‌ಬಾಲ್‌ನಲ್ಲಿ ಪಾಲ್ಗೊಂಡು ವಿಜಯ ಸಾಧಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಪಠ್ಯದ ಜೊತೆಗೆ ಕ್ರೀಡೆಯಲ್ಲೂ ಪ್ರಗತಿ ಸಾಧಿಸಿರುವುದು ಅಭಿನಂದನೀಯ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢತೆಯಿಂದ ಇರಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ. ನಮ್ಮ ಕಾಲೇಜಿ‌ನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕು ಎಂದು ಶುಭಕೋರಿದರು.

ಈ ವೇಳೆ ದೇವಳದ ಕಾರ್ಯನಿರ್ವಾಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಉಪ ಕಾರ್ಯನಿರ್ವಹಣಾಧಿಕಾರಿ ಐ.ಎಚ್.ತುಂಬಿಗೆ, ವ್ಯವಸ್ಥಾಪನ ಸಮಿತಿಯ ಸದಸ್ಯ ಮಾಲಿಂಗ ನಾಯ್ಕ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಸದಸ್ಯರುಗಳು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ., ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ತಂಡದ ವ್ಯವಸ್ಥಾಪಕ ನಾಗರಾಜ್ ಅಡಿಗ ನೀಲಾವರ, ತರಬೇತುದಾರ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚಿನಿ, ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿ ರಾಜ್ಯಮಟ್ಟದ ನೆಟ್ ಬಾಲ್ ತೀರ್ಪುಗಾರ ಅವಿನಾಶ್  ಆಚಾರ್ಯ, ಕೀರ್ತನ ಸಿಗಂದೂರು, ಮಣಿಕಂಠ ಸಿಗಂದೂರು, ಗಣೇಶ ನಿಟ್ಟೂರು ಇದ್ದರು.

ತದನಂತರ ತೆರೆದ ವಾಹನ ಮೂಲಕ ವಿಜೇತ ವಿದ್ಯಾರ್ಥಿಗಳನ್ನು ದೇವಸ್ಥಾನದಿಂದ ಮುಖ್ಯ ರಸ್ತೆ ಮೂಲಕ ಕಾಲೇಜಿನ ತನಕ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.

Comments are closed.