ಕರಾವಳಿ

ದ್ವಿತೀಯ ಪಿಯು ಪರೀಕ್ಷೆ ಎಲ್ಲೆಡೆ ಸಿಸಿ ಟಿವಿ ಅಳವಡಿಕೆ : ಸದಾಶಿವ ಪ್ರಭು

Pinterest LinkedIn Tumblr

ಉಡುಪಿ: ಮಾರ್ಚ್ 4 ರಿಂದ 23 ರ ವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಡೆಯಬಹುದಾದ ಯಾವುದೇ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ, ಪ್ರಶ್ನೆ ಪತ್ರಿಕೆ ಇಡಲಾಗುವ ಜಿಲ್ಲಾ ಖಜಾನೆ ಸೇರಿದಂತೆ, ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 15100 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು, ಜಿಲ್ಲೆಯ ತಹಸೀಲ್ದಾರ್‍ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ 8 ತಂಡಗಳನ್ನು ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ನಿಗಧಿತ ಅವಧಿಯೊಳಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸದಾಶಿವ ಪ್ರಭು ತಿಳಿಸಿದರು.

ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಂದ ತೆಗೆಯುವುದನ್ನು ಮತ್ತು ವಿತರಿಸುವುದನ್ನು ಪರಿಶೀಲಿಸಲು ಜಿಲ್ಲಾ ಖಜಾನೆಯ ಒಳಗೆ ಮತ್ತು ಹೊರಗೆ 24*7 ಸಿಸಿಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ವೀಕ್ಷಿಸಲು ಪರೀಕ್ಷೆಗಳು ಮುಕ್ತಾಯವಾಗುವವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಹಾಗೂ ಬೆಂಗಳೂರಿನ ಪಿಯು ಬೋರ್ಡ್‍ನಲ್ಲಿ ಕಂಟ್ರೋಲ್ ರೂಂ ತೆರೆಯಲಾಗುವುದು ಎಂದು ಎಡಿಸಿ ತಿಳಿಸಿದರು.

ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಮಾತ್ರ ಠೇವಣಿ ಮಾಡಲಾಗುವುದರಿಂದ, ಪ್ರಶ್ನೆ ಪತ್ರಿಕೆ ವಿತರಣೆಗೆ ನಿಯೋಜಿಸಲಾದ ಆಯಾಯ ತಾಲೂಕುಗಳ ತಹಶೀಲ್ದಾರ್‍ಗಳು, ಶಿಕ್ಷಣ ಸಂಯೋಜಕರು, ರೂಟ್‍ಆಫೀಸರ್‍ಗಳು, ಪ್ರಶ್ನೆ ಪತ್ರಿಕೆ ಸಾಗಾಟ ವಾಹನಗಳು, ಪೋಲೀಸ್ ಸಿಬ್ಬಂದಿಗಳು ಕ್ಲಪ್ತ ಸಮಯಕ್ಕೆ ಜಿಲ್ಲಾ ಖಜಾನೆಯಲ್ಲಿ ಹಾಜರಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪಡೆದು ವಿತರಿಸುವಂತೆ ಸೂಚಿಸಿದ ಅಪರ ಜಿಲ್ಲಾಧಿಕಾರಿ, ಎಲ್ಲಾ ತಂಡಗಳಿಗೂ ಆಗಮನ ಮತ್ತು ನಿರ್ಗಮನ ಸಮಯಗಳ ವೇಳಾಪಟ್ಟಿಯನ್ನು ನಿಗದಿ ಪಡಿಸಿದರು.

ಜಿಲ್ಲಾ ಖಜಾನೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಮತ್ತು ಬಾರ್‍ಕೋಡ್ ರೀಡರ್‍ಗಳನ್ನು ಅಳವಡಿಸಲಾಗುತ್ತದೆ. ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಸಾಗಿಸಲು ಅಂಚೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲು ಹಿರಿಯ ಪ್ರಾಂಶುಪಾಲರ ನೇತೃತ್ವದಲ್ಲಿ ಜಾಗೃತ ತಂಡಗಳನ್ನು ನೇಮಿಸಲಾಗಿದೆ.

ಜಿಲ್ಲೆಯಲ್ಲಿ ಈ ವರ್ಷ ಒಟ್ಟು 15,100 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಲ್ಲಿ 13,802 ಹೊಸದಾಗಿ, 493 ಪುನಾರಾವರ್ತನೆ, 805 ಖಾಸಗಿಯಾಗಿ ಪರೀಕ್ಷೆ ಬರೆಯುವವರು. ಒಟ್ಟು 7733 ಹೆಣ್ಣು ಮಕ್ಕಳು ಮತ್ತು 7367 ಗಂಡು ಮಕ್ಕಳು ಪರೀಕ್ಷೆ ಬರೆಯಲಿದ್ದು, ಸೈನ್ಸ್, ಆಟ್ರ್ಸ್ ಮತ್ತು ಕಾಮರ್ಸ್ ವಿಭಾಗದಲ್ಲಿ ಕ್ರಮವಾಗಿ 5075, 1789 ಮತ್ತು 8236 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಎಚ್ಚರವಹಿಸುವಂತೆ ಹಾಗೂ ಪರೀಕ್ಷಾ ಕೆಲಸಗಳಿಗೆ ನಿಯುಕ್ತಿಗೊಳಿಸಿದ ಎಲ್ಲ ಅಧಿಕಾರಿಗಳೂ ಪರೀಕ್ಷೆಗಳು ಆರಂಭದಿಂದ ಮುಕ್ತಾಯವಾಗುವವರೆಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು..

ಸಭೆಯಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ಡಿಡಿಪಿಐ ಶೇಷಶಯನ ಕಾರಿಂಜ, ಎಲ್ಲಾ ತಾಲೂಕುಗಳ ತಹಶೀಲ್ದಾರ್‍ಗಳು, ಉಪತಹಶೀಲ್ದಾರ್‍ಗಳು, ಬಿ.ಇ.ಓಗಳು, ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು ಉಪಸ್ಥಿತರಿದ್ದರು.

Comments are closed.