ಕರಾವಳಿ

ಸ್ವಂತ ಖರ್ಚಿನಲ್ಲಿ ಪ್ರತಿವರ್ಷ ಮರದ ಕಾಲು ಸಂಕ ನಿರ್ಮಿಸಿಕೊಳ್ಳುವ ಸ್ಥಳೀಯರು | ನೈಕಂಬ್ಳಿ ಜನರ ಸಮಸ್ಯೆ ಕೇಳೋರು ಯಾರು..?

Pinterest LinkedIn Tumblr

ಅಪಾಯಕಾರಿ ಸಂಕದಲ್ಲೇ ಮಕ್ಕಳು ಬೈಕ್ ಸವಾರರ ಪಯಣ

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಒಂದಷ್ಟು ಗ್ರಾಮಗಳಿಗೆ ಸಂಪರ್ಕಿಸಲು ಕಿರುಸೇತುವೆ ಹಾಗೂ ಬಾಕಿಯಾದ ರಸ್ತೆ ಕಾಮಗಾರಿ ನಡೆಸಲು ಹಲವು ವರ್ಷಗಳಿಂದ ಸ್ಥಳೀಯರು ನೀಡಿದ ಮನವಿ ಕಳೆದೆರಡು ಸರ್ಕಾರದ ಅವಧಿಯಲ್ಲಿ ಈಡೇರಿಲ್ಲ. ಹರಿಯುವ ನೀರಿನ ಮದ್ಯೆ ಸ್ಥಳೀಯರೇ ಸಾವಿರಾರು ರೂಪಾಯಿ ವ್ಯಯಿಸಿ ಕಟ್ಟಿಕೊಂಡ ಕಾಲುಸಂಕದಲ್ಲಿ ಇಲ್ಲಿನ ಜನರ ಭಯದ ಪಯಣ.

ಬೈಂದೂರು ವಿಧಾನಸಭಾ ಕ್ಷೇತ್ರದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನೈಕಂಬ್ಳಿ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗಳಿನ್ನು ಈಡೇರಿಲ್ಲ. ಇಲ್ಲಿನ ಹಳೆಯಮ್ಮ ದೇವಸ್ಥಾನದಿಂದ ಮುಂದೆ ಸಾಗಿದಾಗ ಈ ಕಾಲು ಸಂಕ ಸಿಗುತ್ತದೆ. ಐದಾರು ವರ್ಷಗಳ ಹಿಂದೆ ಸ್ಥಳೀಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ವೇಳೆ ಸ್ಥಳೀಯ ಏಳೆಂಟು ನಿವಾಸಿಗಳು ತಮ್ಮ ಖಾಸಗಿ ಜಾಗ ಬಿಟ್ಟುಕೊಟ್ಟು ರಸ್ತೆ ನಿರ್ಮಾಣವಾಗಲಿ ಎಂಬ ಆಶಯ ಹೊಂದಿದ್ದರು. ಸೇತುವೆ ಹಾಗೂ ರಸ್ತೆ ಸಂಪರ್ಕಕ್ಕಾಗಿ ಬಹಳಷ್ಟು ಮನವಿ ಕೂಡ ನೀಡಿದ್ದರೂ ಏನು ಪ್ರಯೋಜನವಾಗಿಲ್ಲ. ಇನ್ನೇನು ಮಳೆಗಾಲ ಅರಂಭವಾಗುತ್ತಿದ್ದು ತಮ್ಮೂರು ಸಂಪರ್ಕದ ಕಿರುಸೇತುವೆ ನಿರ್ಮಾಣ ಆಗದಿರುವುದರಿಂದ ಈ ಮಳೆಗಾಲದಲ್ಲಿ ಕೂಡ ನದಿ ದಾಟಲು ಮರದಿಂದ ತಾವೇ ನಿರ್ಮಿಸಿಕೊಂಡ ಕಿರಿದಾದ ಕಾಲು ಸಂಕ ಅವಲಂಬಿಸಬೇಕಿದೆ. ಹೊಸೂರು, ಹಾರ್ಮಣ್ಣು, ನೈಕಂಬ್ಳಿ ಮಾರ್ಗವಾಗಿ ಮಾರಣಕಟ್ಟೆ ಹಾಗೂ ಚಿತ್ತೂರು, ಕೆರಾಡಿ ನಡುವಿನ ಸಂಪರ್ಕ ಮಾರ್ಗ ಬಹಳ ಹತ್ತಿರವಾಗಿದೆ. ಕೊಲ್ಲೂರು-ಹೆಮ್ಮಾಡಿ ಪ್ರಮುಖ ಮಾರ್ಗದ ಹಾರ್ಮಣ್ ಮೂಲಕ ಈ ರಸ್ತೆಯಲ್ಲಿ ಸಾಗಿದರೆ ಹಲವು ಗ್ರಾಮಗಳು ಜನರಿಗೆ ಹತ್ತಿರ.

ಪ್ರತಿವರ್ಷ ಸ್ಥಳೀಯರಿಂದಲೇ ಕೆಲಸ
ಪ್ರತಿವರ್ಷವೂ ಸಾವಿರಾರು ರೂ. ಹಣ ವ್ಯಯಿಸಿ, ಜೆಸಿಬಿ ತರಿಸಿ ಮರದ ದಿಣ್ಣೆಗಳನ್ನು ಬಳಸಿಕೊಂಡು ಕಾಲು ಸೇತುವೆ ನಿರ್ಮಿಸಿಕೊಳ್ಳುತ್ತೇವೆ ಎಂದು ಸ್ಥಳೀಯ ಹಿರಿಯ ನಾಗರಿಕ ಸಂಜೀವ ಶೆಟ್ಟಿ ಹೇಳುತ್ತಾರೆ. ನೂರಾರು ಮನೆಗಳ ನಿವಾಸಿಗಳು, ಕಾರ್ಮಿಕರು, ಕೃಷಿಕರ ಸಹಿತ ನೈಕಂಬ್ಳಿ ಅಂಗನವಾಡಿ, 1-5 ನೇ ತರಗತಿವರೆಗಿನ ಸರಕಾರಿ ಶಾಲೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೊಲ್ಲೂರು, ನೆಂಪು, ಕುಂದಾಪುರ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಮರದ ಕಾಲು ಸಂಕ ಉಪಯೋಗಿಸಬೇಕಿದೆ. ಮಾತ್ರವಲ್ಲದೇ ಇದೇ ಸಂಕದಲ್ಲಿ ಬೈಕ್, ದ್ವಿಚಕ್ರ ವಾಹನಗಳನ್ನು ಸರ್ಕಸ್ ರೀತಿ ಚಲಾಯಿಸಿ ಗಮ್ಯ ಸ್ಥಾನ ತಲುಪಬೇಕು. ಇಲ್ಲಿಗೆ ಮೂಲಸೌಕರ್ಯ ಒದಗಿಸಲು ಕಳೆದ ಹಲವು ವರ್ಷಗಳಿಂದ ಸಂಸದರು, ಶಾಸಕರು ಸಹಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ, ಕಿರುಸೇತುವೆ ನಿರ್ಮಾಣ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕೋರಲಾಗಿತ್ತು. ಇದು ಕೇವಲ ಆಶ್ವಾಸನೆಯಾಗಿದೆ ಹೊರತು ಅನುದಾನ ಬಿಡುಗಡೆಗೊಳಿಸದಿರುವುದು ಗ್ರಾಮಸ್ಥರಲ್ಲಿ ನಿರಾಸೆ ಉಂಟುಮಾಡಿದೆ ಎಂದು ರಾಘವೇಂದ್ರ ಶೆಟ್ಟಿ ಹೇಳಿದರು.

ರಸ್ತೆ ನಿರ್ಮಾಣ ಕಾಮಗಾರಿ ಆಗಿಲ್ಲ..!
ಮುಲ್ಲಿಮನೆಯಿಂದ ಮಲ್ಲೋಡು ದಲಿತ ಕಾಲನಿವರೆಗಿನ ಸುಮಾರು 1.5 ಕಿ.ಮೀ. ವ್ಯಾಪ್ತಿಯ ರಸ್ತೆ ನಿರ್ಮಾಣ ಕಾಮಗಾರಿಗೆ ಬೇಡಿಕೆ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಳಿಯಮ್ಮ ದೇಗುಲ ಹಾಗೂ ಮಹಾಲಿಂಗೇಶ್ವರ ದೇಗುಲದ ಸಂಪರ್ಕ ಕೊಂಡಿಯಾಗಿರುವ ನೈಕಂಬ್ಳಿ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ಮನವಿ ನೀಡಿದರೂ ಅನುದಾನ ಬಿಡುಗಡೆ‌ಗೊಂಡಿಲ್ಲ. ಈ ಹಿಂದಿನ ಶಾಸಕರು, ಹಾಲಿ ಸಂಸದರಿಗೆ ಮನವಿ ಸಲ್ಲಿಸಿ ಕಿರುಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಹಲವು ಬಾರಿ ಬೇಡಿಕೆಯಿಟ್ಟರೂ ಪ್ರಯೋಜನವಿಲ್ಲ.
-ರಾಘು ಶೆಟ್ಟಿ, ಪ್ರೇರಣಾ- ನೈಕಂಬ್ಳಿ

ಒಂದು ಗ್ಯಾಸ್ ಸಿಲಿಂಡರ್ ಸಾಗಿಸಲು ಸಮಸ್ಯೆ. ಕೃಷಿ-ಹೈನುಗಾರಿಕೆ ಕಾರ್ಯಕ್ಕೂ ತೊಡಕಾಗುತ್ತದೆ. ಮಕ್ಕಳನ್ನು ಮಳೆಗಾಲದಲ್ಲಿ ಶಾಲೆಗೆ ಕಳಿಸಲು ಭಯವಾಗುತ್ತದೆ. ದೇವಸ್ಥಾನ ಜೀರ್ಣೋದ್ದಾರದ ವೇಳೆ ನಾಲ್ಕಾರು ಊರಿನ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ನಮ್ಮ ಸ್ವಂತ ಜಾಗ ನೀಡಿದ್ದು ಸೇತುವೆ ನಿರ್ಮಿಸಿದ್ದರೆ ಎಲ್ಲರಿಗೂ ಅನುಕೂಲವಾಗುತ್ತಿತ್ತು.
– ರತ್ಮಮ್ಮ ಶೆಟ್ಟಿ (ಸ್ಥಳೀಯ ಮಹಿಳೆ)

ಕೃಷಿ ಮಾಡಲು ಸಂಕಷ್ಟ..
ಕಳೆದ 5 ವರ್ಷದಿಂದ ಈ ಕಾಲು ಸಂಕ ಬಳಸುತ್ತಿದ್ಧೇವೆ. ಸಂಕದ ಸಮಸ್ಯೆಯಿಂದ ಸ್ಥಳೀಯ ಶಾಲೆಗೆ ಮಕ್ಕಳ ಸಂಖ್ಯೆಯೂ ಕಮ್ಮಿಯಾಗಿದೆ. ಟ್ರಾಕ್ಟರ್ ತೆರಳಲ್ಲ, ಗೊಬ್ಬರ ಮೊದಲಾದ ಕೃಷಿ ಸಂಬಂಧಿ ವಸ್ತುಗಳ ಸಾಗಾಟಕ್ಕೆ ಕಷ್ಟವಾಗುತ್ತಿದೆ. ಕಾಲು ಸಂಕ ಆಸುಪಾಸಿನಲ್ಲಿ 1 ಎಕರೆ ಸಾಗುವಳಿ ಮಾಡಲು ಹತ್ತು ಕಿ.ಮೀ ಸುತ್ತು ಹಾಕಬೇಕಿದೆ. ಹೊಸದಾಗಿ ಆಯ್ಕೆಯಾದ ಶಾಸಕರು ಆದ್ಯತೆ ಮೇರೆಗೆ ನಮ್ಮೂರ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ.
– ಶೋಭಾ (ಸ್ಥಳೀಯ ನಿವಾಸಿ)

Comments are closed.