ಕರಾವಳಿ

ತಂದೆ ನೆನಪಲ್ಲಿ ಹಡಿಲು ಭೂಮಿಯನ್ನು ಹಸನು ಮಾಡುತ್ತಿರುವ ಕೃಷಿಕ; ಯಾಂತ್ರೀಕೃತ ಭತ್ತದ ಕೃಷಿಯಲ್ಲಿ ಕರಾವಳಿ ರೈತನ ಸಾಧನೆ…!

Pinterest LinkedIn Tumblr

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಒಂದೆಡೆ ಉಪ್ಪು ನೀರಿನ ಸಮಸ್ಯೆ, ಮತ್ತೊಂದೆಡೆ ಕೂಲಿಯಾಳುಗಳಿಗೆ ಕೊರತೆ. ಕರಾವಳಿಯ ಕೋಡಿ ಭಾಗದಲ್ಲಿ ಹಲವು ವರ್ಷಗಳಿಂದ ಬಹುತೇಕರು ಕೃಷಿಗೆ ಗುಡ್ ಬೈ ಹೇಳಿದ್ದು ಇಲ್ಲಿನ ಬಹಳಷ್ಟು ಹಡಿಲು ಭೂಮಿಗಳನ್ನು ಗೇಣಿ ಪಡೆದು ಭತ್ತದ ಕೃಷಿ ಮಾಡಿ ಉತ್ತಮ ಬೆಳೆ ತೆಗೆದು ಬರಡು ಭೂಮಿಗೆ ಜೀವ ಕಳೆ ತುಂಬಿದ ಮಾದರಿ ಕೃಷಿಕ ಕುಂದಾಪುರ ತಾಲೂಕಿನ ಕೋಡಿ, ಹಂಗಳೂರು ನಿವಾಸಿ ಗಂಗಾಧರ ಪೂಜಾರಿ ಈ ಬಾರಿ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಹಸನಾದ ಹಡಿಲು ಭೂಮಿ..!
ಕಳೆದ 34 ವರ್ಷದಿಂದ ಗಂಗಾಧರ ಪೂಜಾರಿಯವರು ಸೌಂಡ್ಸ್&ಲೈಟ್ಸ್ ಹಾಗೂ ಡೆಕರೇಶನ್ ವೃತ್ತಿ ಮಾಡಿಕೊಂಡಿದ್ದಾರೆ. ತನ್ನ ಉದ್ಯಮದ ಜೊತೆಗೆ ಕೃಷಿ ಕೈಂಕರ್ಯದತ್ತ ಒಲವು ತೋರಲು ತಂದೆ ತೊಪ್ಲು ಗಣಪ ಪೂಜಾರಿಯವರು ಪ್ರೇರಣೆ. ಬಾಲ್ಯದಿಂದ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಅವರ ನಿಧನದ ಬಳಿಕ ಕೃಷಿಯನ್ನು ಬಿಡದೇ ಮುಂದುವರೆಸುತ್ತಿದ್ದಾರೆ. ತಂದೆ ಏಳು ಮಕ್ಕಳಿಗೆ ಕೃಷಿಕಾಯಕದಿಂದಲೇ ಹೊಟ್ಟೆ-ಬಟ್ಟೆ, ವಿದ್ಯಾಭ್ಯಾಸ ಕೊಡಿಸಿದ್ದು ಇವರಿಗೆ ಸ್ಪೂರ್ತಿ. ಮೊದಲಿಗೆ ತಮ್ಮದೆ ಒಂದಷ್ಟು ಗದ್ದೆ ಹಾಗೂ ಮತ್ತೊಂದಷ್ಟು ಎಕರೆ ಬೇರೆಯವರ ಹಡಿಲು ಭೂಮಿಯನ್ನು ಗೇಣಿ ಪಡೆದು ಸಾಂಪ್ರದಾಯಿಕ ಭತ್ತ ಕೃಷಿ ಮಾಡುತ್ತಾ ಬಂದಿರುವ ಅವರು ಇತ್ತೀಚೆಗೆ ಯಾಂತ್ರೀಕೃತ ಭತ್ತದ ಕೃಷಿ ಮಾಡುತ್ತಿದ್ದಾರೆ. ಕಳೆದ 20 ವರ್ಷದಿಂದ ಕೋಡಿ ಚಕ್ರೇಶ್ವರ ದೇವಸ್ಥಾನ ಆಸುಪಾಸಿನ ಇವರ (ಇವರು, ಪತ್ನಿ ಮನೆ ಭೂಮಿ) 5 ಎಕರೆ ಹಾಗೂ ಇತರರ 19 ಎಕರೆ ಹಡಿಲು ಭೂಮಿ ಸಹಿತ ಒಟ್ಟು 24 ಎಕರೆಯಲ್ಲಿ ಸಂಪೂರ್ಣ ಯಾಂತ್ರೀಕೃತ ಭತ್ತದ ಕೃಷಿ ನಡೆಸಲು ತಯಾರಿ ನಡೆದಿದೆ. ಹಡಿಲು ಗದ್ದೆ ಗೇಣಿ ನೀಡಿದವರಿಗೆ 1 ಎಕ್ರೆಗೆ 2 ಚೀಲ ಅಕ್ಕಿ ನೀಡುವುದು ಒಪ್ಪಂದ.

ಈ ಬಾರಿ ಹೊಸ ಪ್ರಯೋಗ: ಈ ಸಾಲಿನಲ್ಲಿ 24 ಎಕರೆ ಗದ್ದೆಯಲ್ಲಿ ಮ್ಯಾಟ್ ಪದ್ಧತಿ ಮೂಲಕ ಭತ್ತದ ಕೃಷಿ ಮಾಡಲು ಚಿಂತಿಸಿದ ಗಂಗಾಧರ್ ಅವರು, ಮಹೀಂದ್ರಾ ಕಂಪೆನಿಯ ಪೆಟ್ರೋಲ್ ಚಾಲಿತ ನಾಟಿ ಯಂತ್ರವನ್ನು ಖರೀದಿಸಿದ್ದಾರೆ. ಹಾಗೆಯೇ ನಾಟಿಗೆ 1500 ಮ್ಯಾಟ್ ನೇಜಿಯನ್ನು ಮನೆಯಂಗಳದಲ್ಲಿ ಸಿದ್ಧಪಡಿಸಿದ್ದಾರೆ. ಮ್ಯಾಟ್, ಕೊಟ್ಟಿಗೆ ಗೊಬ್ಬರ, ಗುಡ್ಡೆ ಮಣ್ಣು, ಹೊಯಿಗೆ ಮಣ್ಣು ಸೇರಿಸಿ ಗಾಳಿಸಿಕೊಂಡು ಹದಗೊಳಿಸಿ ನೀರು ಸಿಂಪಡಿಸಿ 1 ಮ್ಯಾಟ್ ಗೆ 110 ಗ್ರಾಂ ಭತ್ತದ ಬೀಜ ಹಾಕಿದ್ದು 18-19 ದಿನಗಳಲ್ಲಿ ನಾಟಿಗೆ ಸಿದ್ದವಾಗಿದೆ. 1 ಎಕರೆಗೆ ಅಂದಾಜು 70 ಮ್ಯಾಟ್ ಅಗತ್ಯವಿದ್ದು 24 ಎಕ್ರೆಗೆ 1800-200 ಮ್ಯಾಟ್ ಅಗತ್ಯವಿದೆ ಎಂದು ಅವರು ಹೇಳುತ್ತಾರೆ. ಮಾನವ ಶ್ರಮದಲ್ಲಿ ಈ ಕೆಲಸ ಮಾಡಿದರೆ ಸರಾಸರಿ 15 ದಿನಕ್ಕೂ ಅಧಿಕ ಬೇಕಿದೆ. ಕೂಲಿಯಾಳುಗಳ ಕೊರತೆ, ಸಮಯಾವಕಾಶದ ಹಿನ್ನೆಲೆ ಇವರ ಆಲೋಚನೆಯಂತೆ ಯಾಂತ್ರೀಕೃತವಾಗಿ ಮಾಡಿದರೆ 24 ಎಕರೆ ಕೇವಲ 4-5 ದಿನಗಳಲ್ಲಿ ಮನೆಯವರೇ ಸೇರಿ ನಾಟಿ ಮಾಡಬಹುದು.

ಶ್ರಮಜೀವನ, ಕೃಷಿ ಆಸಕ್ತಿಗೆ ಕುಟುಂಬ ಸಾಥ್..!
ವರ್ಷವಿಡೀ ಸದಾ ಲೈಟ್ಸ್, ಸೌಂಡ್ಸ್ ಎಂದು ಕ್ರಿಯಾಶೀಲವಾಗಿರುವ 55 ವರ್ಷ ಪ್ರಾಯದ ಗಂಗಾಧರ್ ಅವರಿಗೆ ಕೃಷಿಯೇ ಶಕ್ತಿ. ಮಳೆಗಾಲದ ಮೂರು ತಿಂಗಳು ತಮ್ಮ ಮೂಲ ವೃತ್ತಿಗೆ ಬಹುತೇಕ ಬಿಡುವಿರುವ ಕಾರಣ ಆ ಸಮಯ ಪೋಲು ಮಾಡದೆ ಗದ್ದೆಗೆ ಇಳಿಯುತ್ತಾರೆ. ತಾನೇ ಟಿಲ್ಲರ್ ಮೂಲಕ ಅಷ್ಟು ಎಕರೆ ಗದ್ದೆ ಉಳುಮೆ ಮಾಡುತ್ತಾರೆ. ನಾಟಿ ಬಳಿಕ ಭತ್ತ ಕೃಷಿಯ ನಡುವೆ ಬೆಳೆಯುವ ಕಳೆ ಕೀಳುವುದನ್ನು ಇವರೆ ಮಾಡುತ್ತಾರೆ. ಇವರ ಸಾಧನೆಗೆ ಹಲವು ಸಂಘಸಂಸ್ಥೆಗಳು ಗೌರವಿಸಿದೆ. ಹೀಗೆ ಮೂರ್ನಾಲ್ಕು ತಿಂಗಳು ಸಂಪೂರ್ಣ ಸಮಯ ಕೃಷಿಗೆ ನೀಡುತ್ತಾರೆ. ಇವರಿಗೆ ಪತ್ನಿ ಸಹಿತ ಕುಟುಂಬಿಕರು ಸಹಕಾರ ನೀಡುತ್ತಿದ್ದು ಇವರ ಬಂಧುಗಳಾದ ಪ್ರಗತಿಪರ ಕೃಷಿಕ ಕೋಡಿ ಶಂಕರ್ ಪೂಜಾರಿ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಗಂಗಾಧರ ಪೂಜಾರಿಯವರ ಪುತ್ರ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದಾರೆ.

ಕೃಷಿಯಿಂದ ನೆಮ್ಮದಿ, ತೃಪ್ತಿ ಸಿಕ್ಕಿದೆ…
ನನ್ನ ಉದ್ಯೋಗ ಬೇರೆಯಿದೆ, ಹಣದ ಆಸೆಯಿಲ್ಲ. ನೆಮ್ಮದಿ ಜೀವನ ಮಾಡಲು ಕೃಷಿ ಕ್ಷೇತ್ರ ಸೂಕ್ತ. ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಇತ್ತೀಚೆಗೆ ಕೃಷಿ ಕೆಲಸಕ್ಕೆ ಜನರು ಬರುತ್ತಿಲ್ಲ. ಎಲ್ಲವನ್ನೂ ಲಾಭದ ಚಿಂತನೆಯಲ್ಲಿ ಮಾಡಬಾರದು. ಯಾಂತ್ರೀಕೃತ ಕೃಷಿ ಪದ್ದತಿ ಜೊತೆಗೆ ಆಳಾಗಿ ಕೆಲಸ ಮಾಡಿದರೆ ಆರೋಗ್ಯ, ನೆಮ್ಮದಿ ಸಾಧ್ಯ. ಕೃಷಿಯನ್ನು ನೆಚ್ಚಿಕೊಂಡು ನಾವು ಮೊದಲು ಕೈಯಾಳು ಕೆಲಸ ಮಾಡಿಸುತ್ತಿದ್ದು ಎಲ್ಲವೂ ದುಬಾರಿಯಾಗಿತ್ತು. ಯಂತ್ರದಲ್ಲಿ ಮನೆಯವರೆ ಸೇರಿ ಎಲ್ಲಾ ಕೆಲಸ ಮಾಡುವುದರಿಂದ ಭತ್ತ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯ. ಈ ಬಾರಿ ಮಳೆ ಹಿನ್ನಡೆಯಾಗಿದ್ದರಿಂದ ನಾಟಿ ಕಾರ್ಯ ವಿಳಂಬವಾಗಿದೆ. ಕೋಡಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಯಿಂದ ಕೃಷಿ ಮಾಡಲಾಗುತ್ತಿಲ್ಲ. ಎಲ್ಲವೂ ಸುಸೂತ್ರವಾದರೆ ಮುಂದಿನ ದಿನಗಳಲ್ಲಿ 50 ಎಕ್ರೆ ಹಡಿಲು ಕೃಷಿಭೂಮಿಯಲ್ಲಿ ಭತ್ತ ಬೆಳೆಯುವ ಆಸೆಯಿದೆ.
– ಗಂಗಾಧರ ಪೂಜಾರಿ (ಕೃಷಿಕರು)

Comments are closed.