ಕರಾವಳಿ

300 ವರ್ಷಕ್ಕೂ ಹಳೆಯದಾದ ಪ್ರಾಚೀನ ವಸ್ತುಗಳ ಹಸ್ತಾಂತರಿಸಿದ ವೈಶಿಷ್ಠ ಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶಿರ್ವ..!

Pinterest LinkedIn Tumblr

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ. ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ದಿನ, ವಿಶ್ವ ಪರಿಸರ ದಿನಾಚರಣೆ ಪ್ರಾಚೀನ ವಸ್ತುಗಳ ಹಸ್ತಾಂತರ ಕಾಯಕ್ರಮವು ಇಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾಯಕ್ರಮದಲ್ಲಿ 76 ಬಡಗಬೆಟ್ಟು ಮೂಡುಮನೆ ಕುಟುಂಬದ ಸುಮಾರು 300 ವರ್ಷಗಳಿಗೂ ಪುರಾತನವಾದ ಹಲವು ಪ್ರಾಚೀನ ವಸ್ತುಗಳನ್ನು ಕಾಲೇಜಿನ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಭಾರತೀಯ ಸಂಸ್ಕೃತಿಯ ವಿಶ್ವದ ಅತ್ಯಂತ ಪುರಾತನ ಮತ್ತು ಭವ್ಯ ಸಂಸ್ಕೃತಿಯಾಗಿದ್ದು, ಕ್ರಿಸ್ತಪೂರ್ವದಲ್ಲಿಯೇ ನಮ್ಮ ಸಂಸ್ಕೃತಿ ಉದಯವಾಗಿತ್ತು, ಇಂದಿಗೂ ಹಳೆಯ ಕಟ್ಟಡಗಳನ್ನು ಜೀರ್ಣೋದ್ದಾರ ಮಾಡುವ ಸಂದರ್ಭದಲ್ಲಿ ಹಲವು ಪುರಾತನ ವಸ್ತುಗಳು ದೊರೆಯುತ್ತಿದ್ದು, ಇವುಗಳು ನಮ್ಮ ಹಿಂದಿನ ಸಂಸ್ಕೃತಿಯ ವೈಭವವನ್ನು ಸಾರಿ ಹೇಳುತ್ತವೆ, ಇಂತಹ ಪುರಾತನ ವಸ್ತುಗಳನ್ನು ಸಂರಕ್ಷಿಸಿ ಅದರ ಮಹತ್ವವನ್ನು ಮತ್ತು ಯಾವುದೇ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ನೆರವಿಲ್ಲದೇ ನಮ್ಮ ಹಿರಿಯರು ಮಾಡಿರುವ ಅದ್ಬುತ ಕಾರ್ಯಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ಅತ್ಯಂತ ಅವಶ್ಯಕ ಎಂದರು.

ಆಜಾದಿ ಕ ಅಮೃತ ಮಹೋತ್ಸವದ ಆಂಗವಾಗಿ ರಾಜ್ಯದಲ್ಲಿ ಅಮೃತ ಭಾರತಿಗೆ ಕನ್ನಡದ ಅರತಿ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ ಕನ್ನಡ ನಾಡಿನ ಹೋರಾಟಗಳನ್ನು ನೆನಪಿಸಿಕೊಳ್ಳುವ ಮತ್ತು ಅವರ ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯದ ಸ್ವಾತಂತ್ರ್ಯ ಹೋರಾಟಗರರ ಮನೆಗಳಿಗೆ ತೆರಳಿ ಅವರ ಕುಟುಂಬದವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿಯೂ ಹಲವು ಸ್ವಾತಂತ್ರ್ಯ ಹೋರಾಟಗಾರರಿದ್ದು ಅವರನ್ನು ಅಭಿನಂದಿಸುವ ಕಾರ್ಯ ನಡೆಯುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬ್ಯಾಂಕ್ ಆಫ್ ಬರೋಡಾದ ಉಪ ಪ್ರಾದೇಶಿಕ ಮುಖ್ಯಸ್ಥ ಭೀಮಾ ಶಂಕರ್ ಮಾತನಾಡಿ, ಪ್ರಾಚೀನ ವಸ್ತುಗಳ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು,

ಪ್ರಾಚೀನ ವಸ್ತುಗಳನ್ನು ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಸಂಗ್ರಹಾಲಯಕ್ಕೆ ಹಸ್ತಾಂತರಿಸಿದ 76 ಬಡಗಬೆಟ್ಟು ಮೂಡುಮನೆ ಕುಟುಂಬದ ರಮಾನಾಥ ಹೆಗ್ಡೆ ಮಾತನಾಡಿ, ನಮ್ಮ ಹಿರಿಯರ ಕಾಲದ ಸುಮಾರು 300 ಕ್ಕೂ ಅಧಿಕ ವರ್ಷದ ವಸ್ತುಗಳನ್ನು ಸಂರಕ್ಷಣೆ ಹಾಗೂ ಮುಂದಿನ ಪೀಳಿಗಗೆ ಅದರ ಮಹತ್ವ ತಿಳಿಸುವ ಉದ್ದೇಶದಿಂದ ಉಚಿತವಾಗಿ ಕಾಲೇಜಿಗೆ ಹಸ್ತಾಂತರಿಸಲಾಗಿದ್ದು, ಇದರ ಸದುಪಯೋಗ ಆಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಹಾಗೂ ಇತಿಹಾಸ ಸಂಶೋಧಕ ಪ್ರೊ.ಟಿ.ಮುರುಗೇಶಿ, ವಸ್ತು ಸಂಗ್ರಹಾಲಯ ಎಂಬುವುದು ಮುಂದಿನ ಪೀಳಿಗೆಗೆ ಇತಿಹಾಸವನ್ನು ಪರಿಚಯಿಸುವ ಮಾಹಿತಿಯ ಕಣಜ. ತುಳು ನಾಡಿನ ಸಂಸ್ಕೃತಿಯು ಅತ್ಯಂತ ವೈ಼ಶಿಷ್ಟö್ಯಪೂರ್ಣವಾಗಿದ್ದು, ಇಲ್ಲಿನ ಅನೇಕ ದೇವಾಲಯಗಳಲ್ಲಿರುವ ಪ್ರಾಚೀನ ವಸ್ತುಗಳು ಜೀರ್ಣೋದ್ದಾರದ ಹೆಸರಿನಲ್ಲಿ ನೀರಿನಲ್ಲಿ ವಿಸರ್ಜನೆಯಾಗುತ್ತಿವೆ. ಇವುಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ, ದೇವಾಲಯಗಳ ಪ್ರಾಚೀನ ಪರಿಕರಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಿ , ಆ ವಸ್ತುಗಳನ್ನು ಸಂಗ್ರಹಾಲಯಗಳಿಗೆ ನೀಡುವುದರ ಮೂಲಕ ಅವುಗಳ ಸಂರಕ್ಷಣೆ ಮಾಡಿ, ಮುಂದಿನ ಪೀಳಿಗಗೆ ಪರಿಚಯಿಸುವ ಮೂಲಕ ಅವುಗಳನ್ನು ಚಾರಿತ್ರಿಕ ವೈಶಿಷ್ಠಗಳನ್ನಾಗಿ ಉಳಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಪ್ರಾಂಶುಪಾಲೆ ಡಾ.ನಯನ ಎಂ ಪಕ್ಕಳ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಬಿ.ಶಿವಕುಮಾರ್, ಬ್ಯಾಂಕ್ ಆಫ್ ಬರೋಡಾದ ಶಿರ್ವ ಶಾಖೆಯ ಮೆನೇಜರ್ ಎಡ್ರಿಕ್ ಅಜಯ್ ಡಿಸೋಜಾ ಉಪಸ್ಥಿತರಿದ್ದರು.
ಅಪೂರ್ವವಾದ ಪ್ರಾಚೀನ ದೇವತಾ ಮೂರ್ತಿಗಳು, ಪೂಜೆಗೆ ಬಳಸುವ ದೀಪ ಮತ್ತಿತರ ಪರಿಕರಗಳನ್ನು ಹಸ್ತಾಂತರಿಸಲಾಯಿತು.

ಕಾಲೇಜಿನ ವಿದ್ಯಾರ್ಥಿ ವಿಶಾಲ್ ರೈ ಸ್ವಾಗತಿಸಿದರು, ದಿಶಾಂತ್ ನಿರೂಪಿಸಿದರು.

Comments are closed.