ಕರಾವಳಿ

ಅಕಾಲಿಕ ಮಳೆಗೆ ಕಲ್ಲಂಗಡಿ ಬೆಳೆ‌ ಸರ್ವನಾಶ; ಬೈಂದೂರು ಭಾಗದ ಕಲ್ಲಂಗಡಿ ಕೃಷಿಕರಿಗೆ ಲಕ್ಷಾಂತರ ಹಣ ನಷ್ಟ

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರಬೇಕು ಎನ್ನುವಂತ ಸಮಯ. ಬರೋಬ್ಬರಿ‌ಎರಡು ತಿಂಗಳು ಶ್ರಮವಹಿಸಿ ಮಕ್ಕಳಂತೆ ಸಲುಹಿ ಬೆಳೆಸಿದ‌ ಬೆಳೆ ನೀರು‌ಪಾಲಾಗಿದೆ. ರೈತರ ಮುಖದ ಮಂದಹಾಸವೇ ಮಾಯವಾಗಿ ಬಿಟ್ಟಿದೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಬೈಂದೂರು ಭಾಗದ ಕಲ್ಲಂಗಡಿ ಬೆಳೆಯುವ ರೈತರ ಸಂತಸಕ್ಕೆ ಅಡ್ಡಿ ಮಾಡಿದ್ದಲ್ಲದೆ ಲಕ್ಷಾಂತರ ರೂ. ನಷ್ಟಕ್ಕೆ ಕಾರಣವಾಗಿದೆ.

ಕೃಷಿ ಎಂದರೆ ಅಸಡ್ಡೆ ತೋರುವ ಕಾಲಘಟ್ಟದಲ್ಲಿ ಬೈಂದೂರಿನ ವಿವಿಧ ಪ್ರದೇಶಗಳಲ್ಲಿ ಭತ್ತದ ಕೃಷಿ ಬಳಿಕ ಗದ್ದೆಗಳನ್ನು ಖಾಲಿ ಬಿಡುವ ಬದಲಾಗಿ ಮಣ್ಣು ಫಲವತ್ತತೆ ಮಾಡಿ ಎರಡು ಬಾರಿ ಕಲ್ಲಂಗಡಿ ಬೆಳೆಯುವ ಮೂಲಕ ಕೃಷಿ ಆಸಕ್ತಿಯ ಜೊತೆಗೆ ಆರ್ಥಿಕ ಗಟ್ಟಿತನಕ್ಕೆ ಕೃಷಿಕರು‌ ಮುಂದಾಗುತ್ತಾರೆ. ಆದರೆ ಕಳೆದ ಮೂರು ವರ್ಷಗಳಿಂದ ಅವರ ನಸೀಬು ಚೆನ್ನಾಗಿಲ್ಲ. ಎರಡು ವರ್ಷ ಕೊರೋನಾ ಹಿನ್ನೆಲೆ ಮಾರುಕಟ್ಟೆ ಕೊರತೆ, ಲಾಕ್ಡೌನ್ ಸಮಸ್ಯೆ, ಬೆಲೆ ಇಲ್ಲದ ಕಾರಣ ಕಲ್ಲಂಗಡಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಈ ಬಾರಿ ಲಾಕ್ಡೌನ್ ಇಲ್ಲ. ಬೆಳೆಗೆ ಬೆಲೆಯೂ ಉತ್ತಮವಾಗಿರುವ ಬೆನ್ನಲ್ಲೇ ಹವಮಾನ ವೈಪರೀತ್ಯದಿಂದ ಸುರಿದ ಬಾರೀ‌ ಮಳೆಗೆ ಕಟಾವು ಹಂತಕ್ಕೆ ಬಂದ ಉತ್ತಮ ಗಾತ್ರದ ಕಲ್ಲಂಗಡಿ ಹಣ್ಣುಗಳು ಗದ್ದೆಯಲ್ಲಿ ಕೊಳೆಯುವಂತಾಗಿದೆ.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೆರ್ಗಾಲ್ ಗ್ರಾಮಪಂಚಾಯತ್ ವ್ಯಾಪ್ತಿಯ ನಾಯ್ಕನಕಟ್ಟೆ, ನಂದನವನ, ಮೊಗೇರಿ ಗ್ರಾಮದಲ್ಲಿ ಒಂದಿಷ್ಟು ಯುವ ಮನಸ್ಸುಗಳು ವಿದ್ಯಾಬ್ಯಾಸ ಮುಗಿಸಿ ತಮ್ಮ ಜೀವನವನ್ನೇ ಕೃಷಿಗಾಗಿ ಮುಡಿಪಾಗಿಸಿಕೊಂಡು ವರ್ಷದಲ್ಲಿ‌ ಎರಡು ಬಾರಿ ಅಂದರೆ ಭತ್ತ ಕೃಷಿಯ ಬಳಿಕ ನವೆಂಬರ್-ಜನವರಿ ಎರಡನೇ ವಾರದ ತನಕ ಒಂದು ಬೆಳೆ. ಜನವರಿ ಬಳಿಕ ಮತ್ತೊಂದು ಬಾರಿ ಕಲ್ಲಂಗಡಿಯನ್ನು ಬೆಳೆಯುತ್ತಿದ್ದಾರೆ. ಆದರೆ ಇದೀಗ ಬೆಳೆದ ಬೆಳೆಯೆಲ್ಲಾ ಮಳೆ ಆರ್ಭಟಕ್ಕೆ ನೀರು ಪಾಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಕಲ್ಲಂಗಡಿ ಬೇಳೆ‌ಯುವುದು ಹೇಗೆ..?
ಕಲ್ಲಂಗಡಿ‌ ಎರಡು ತಿಂಗಳ ಬೆಳೆ. ಬೆಳೆ ಪೂರ್ವ ಗದ್ದೆಯನ್ನು ಉಳುಮೆ ಮಾಡಿ, ಮಣ್ಣು ಹದಗೊಳಿಸಬೇಕು. ಏರಿ ನಿರ್ಮಿಸಿ ಗೊಬ್ಬರ ಹಾಕಿ‌ ಫಲವತ್ತತೆ ಮಾಡಬೇಕು. ಪೈಪ್ ಲೈನ್‌ ಮಾಡಿ, ಬೀಜ ಬಿತ್ತನೆ ಮಾಡಿ ನಿಯಮಿತ ಕಾಲಕ್ಕೆ ತಕ್ಕಂತೆ ಔಷಧಿ ಸಿಂಪಡಣೆ ಮಾಡಬೇಕು. ಕೂಲಿಯಾಳುಗಳ ವೆಚ್ಚ ಸಹಿತ ಬೇಲಿ ನಿರ್ಮಾಣ ಸೇರಿ ಎಕ್ರೆಗೆ ಲಕ್ಷಕ್ಕೂ ಅಧಿಕ ಖರ್ಚು ಮಾಡಬೇಕಾಗುತ್ತದೆ. ಈ ಬಾರಿ ಉತ್ತಮ‌ ಇಳುವರಿ ಕೂಡ ಬಂದಿದ್ದು ಬೆಲೆ ಕೂಡ ರೈತರಿಗೆ ತೃಪ್ತಿದಾಯಕವಾಗಿಯೇ ಇತ್ತು. ಆದರೆ ಮಳೆ ಇವರ ಬದುಕು‌ ಮೂರಾಬಟ್ಟೆಯಾಗಿಸಿದೆ. ಇದರಿಂದ ಯುವ ಕೃಷಿಕರಿಗೆ ದಿಕ್ಕು ತೋಚದಂತಾಗಿದೆ.

ಕಂಗೆಟ್ಟ ಬೈಂದೂರು ಭಾಗದ ಕಲ್ಲಂಗಡಿ ಕೃಷಿಕರು..!
ಬೈಂದೂರು ತಾಲೂಕಿನ ನಾಗೂರು, ಉಪ್ಪುಂದ, ಕಿರಿಮಂಜೇಶ್ವರ, ಕೆರ್ಗಾಲ್, ನಾಯ್ಕನಕಟ್ಟೆ ಭಾಗದಲ್ಲಿ‌ ನೂರಾರು ಎಕ್ರೆ ಪ್ರದೇಶದಲ್ಲಿ ಪ್ರತಿವರ್ಷ ಕಲ್ಲಂಗಡಿ ಬೆಳೆಯುತ್ತಿದ್ದು ಸಿಹಿಸಿಹಿಯಾದ ಇಲ್ಲಿನ ಹಣ್ಣಿಗೆ ಉತ್ತಮ ಬೇಡಿಕೆಯಿದೆ. ಈ ಬಾರಿ ಕಿಲೋಗೆ 15 ರೂ. ಅಧಿಕ ಬೆಲೆ ಕೂಡ ಇತ್ತು. ಒಂದೊಂದು ಹಣ್ಣು ಕೂಡ 10-15 ಕೆ.ಜಿ ತೂಗುತ್ತಿದ್ದು ಉತ್ತಮ ಗುಣಮಟ್ಟದಲ್ಲಿ ಬೆಳೆದಿತ್ತು. ಈ ಭಾಗದ ಎಕ್ರೆಗಟ್ಟಲೆ ಭೂಮಿಯಲ್ಲಿ ಕಟಾವಿಗೆ ಸಿದ್ಧವಾದ ಟನ್ ಗಟ್ಟಲೆ ಕಲ್ಲಂಗಡಿ ಹಣ್ಣುಗಳು ನೀರಿನಿಂದ ಗದ್ದೆಯಲ್ಲಿ ಕೊಳೆದಿದೆ. ಕಳೆದೆರಡು ವರ್ಷದಿಂದ ಕೊರೋನಾ ಹಿನ್ನೆಲೆ ನಷ್ಟದಿಂದ ಕಂಗೆಟ್ಟ ಬೆಳೆಗಾರ ಈ ಹಿಂದೆ ಬೆಳೆದ (ಜನವರಿ) ಬೆಳೆಯಲ್ಲಿ ಬೆಲೆ ಸಮಸ್ಯೆಯಿಂದ ಅಂತಹ‌ ಲಾಭ ಕಂಡಿರಲಿಲ್ಲ. ಆದರೆ ಈ‌ ಬಾರಿ ಬೆಳೆಯಲ್ಲಿ ಬಂಪರ್ ಲಾಭದ ಆಸೆಯಲ್ಲಿದ್ದ‌ ಬೆಳೆಗಾರನಿಗೆ ನಿರಾಸೆಯ ಜೊತೆಗೆ ಜೇಬಿಗೂ ಕತ್ತರಿ‌ ಬಿದ್ದಂತಾಗಿದೆ.

ಕಳೆದ 2 ವರ್ಷಗಳಿಂದ ಕೊರೋನದಿಂದ ಕಲ್ಲಂಗಡಿ ಬೆಳೆಗಾರರು ನಷ್ಟದಿಂದ ಸಾಲಕ್ಕೆ ಸಿಲುಕಿದ್ದೆವು. ಈ ವರ್ಷವಾದರೂ ಒಳ್ಳೆ ಬೆಲೆ ಸಿಗುವುದೆನ್ನುವ ಭರವಸೆಯೊಂದಿಗೆ ಹಾಕಿದ ಕಲ್ಲಂಗಡಿಗೆ ಒಳ್ಳೆ ಬೆಲೆಯಿದ್ದರೂ ಕೂಡ ಮಳೆಯಿಂದಾಗಿ ಹಣ್ಣುಗಳ‌ ಜೊತೆ ಪರಿಕರಗಳು‌ ಕೂಡ ಸಂಪೂರ್ಣ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
-ಗಣೇಶ್ ನಾಯ್ಕನಕಟ್ಟೆ (ಕಲ್ಲಂಗಡಿ ಬೆಳೆದವರು)

ಮೊದಲು ಗದ್ದೆಯಲ್ಲಿ ಶೇಂಗ ಬೆಳೆಯುತ್ತಿದ್ದು ಆದಾಯ ಕಮ್ಮಿಯಿತ್ತು. ನಾವು 10-15 ಮಂದಿ ಯುವಕರ ತಂಡ ಕಲ್ಲಂಗಡಿ ಬೆಳೆಯಲು ತೀರ್ಮಾನಿಸಿದೆವು. ಮೊದಲು ಇಳುವರಿ ಉತ್ತಮವಾಗಿ ಬಂದರೂ ದಲ್ಲಾಳಿಗಳಿಂದಾಗಿ ನಮಗೇನು ಸಿಕ್ಕಿಲ್ಲ. ಕಳೆದೆರಡು ವರ್ಷದಿಂದ ಕೊರೋನಾ ಹಿನ್ನೆಲೆ‌ ನಷ್ಟ ಅನುಭವಿಸಿದೆವು. ಈ ಸಾಲಿನ ಬೆಳೆಯಲ್ಲಿ ಎಲ್ಲವೂ ಉತ್ತಮವಾಗಿದ್ದರೂ ಕೂಡ ಪಾಕೃತಿಕ ವಿಕೋಪದ ಮಳೆ ನಮ್ಮ ಜೀವನ ಹಾಳು ಮಾಡಿತು. ಮಾಡಿದ ಸಾಲ ತೀರಿಸುವುದು ಹೇಗೆ ತಿಳಿಯೋದಿಲ್ಲ. ನಿರುದ್ಯೋಗಿಗಳಾದ ನಾವು ಬಿಸಿಲು-ಬೆಂಕಿಯಲ್ಲಿ‌ ಬೆಂದು ಕೃಷಿ ಮಾಡಿದ್ದು ತಪ್ಪೇ..?. ಜನಪ್ರತಿನಿಧಿಗಳಾಧಿಯಾಗಿ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲ. ರೈತರ ಆತ್ಮಹತ್ಯೆ ಪ್ರಕರಣಕ್ಕೆ ಇಂತ ಬೇಜಾವಬ್ದಾರಿಗಳೇ ಕಾರಣ.
– ಗಿರೀಶ್ ನಾಗೂರು (ಕಲ್ಲಂಗಡಿ ಕೃಷಿಕ)

Comments are closed.