Entertainment

ಯಕ್ಷಕಾಶಿ ಕುಂದಾಪುರದ ನೆಹರೂ ಮೈದಾನದಲ್ಲಿ ಮಾ.5 ಶನಿವಾರ ‘ಅಮರಾವತಿಯ ಅಮರ ಚರಿತೆ’..!

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರದ ಯಕ್ಷಕಾಶಿ ನೆಹರೂ ಮೈದಾನ ಇದೀಗ ಯಕ್ಷರಂಗದಲ್ಲೇ ಹೊಸ ಇತಿಹಾಸವನ್ನು ಬರೆಯಲು ಸಜ್ಜಾಗುತ್ತಿದೆ. ಕುಂದಾಪುರ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲೂ ಅಮರಾವತಿಯ ಅಮರ ಚರಿತೆ ಸದ್ದು ಮಾಡುತ್ತಿದ್ದು, ಇಂದು ಕುಂದಾಪುರಕ್ಕೆ ಅಮರಾವತಿಯ ಅಮರ ವೈಭವವನ್ನು ಹೊತ್ತು ಬರಲು ಖುದ್ದು ನಿಜ ಗಜರಾಜನೇ ಹರಿಹರ ಮಠದಿಂದ ಹೊರಟಿದ್ದು ಸಂಜೆ ವೇಳೆ ಕುಂದಾಪುರಕ್ಕೆ ಆಗಮಿಸಲಿದೆ.

ಉದ್ಯಮಿ ಮಂಜುನಾಥ ಪೂಜಾರಿ ಬೆಳ್ಳಾಡಿ ಈ ಅಪರೂಪದ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಅಮರಾವತಿಯ ಅಮರ ಚರಿತೆ ಯಕ್ಷಗಾನ ವಿಶೇಷ ವೈಭವ ಮೇಳೈಸಲಿದೆ. ತೆರೆದ ರಂಗಮಂಟಪದಲ್ಲಿ ಅಮರಾವತಿಯ ಅದ್ದೂರಿ ರಂಗಸಜ್ಜಿಕೆ, ಇಂದ್ರನ ಆಸನ ಪ್ರೇಕ್ಷಕರ ಗಮನ ಸೆಳೆಯಲಿದೆ.

ಎಲ್ಲವೂ ವಿಶೇಷ…
ಗೌರವ ಪ್ರವೇಶ, ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಟಿಕೇಟಿನ ಬದಲು, ಗೌರವ ಪ್ರವೇಶಕ್ಕೆ ಇಂದ್ರ ಸಭೆ, ಗಂಧರ್ವ ಸಭೆ, ಕಿನ್ನರ ಸಭೆ ಎಂದು ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಪ್ರೇಕ್ಷಕರ ಆಸನದಲ್ಲೂ ಅಮರಾವತಿಯ ಚಿತ್ರಣ ಕಟ್ಟಿಕೊಡುವ ಕಾರ್ಯಕ್ಕೆ ಆಯೋಜಕರು ಮುಂದಾಗಿದ್ದಾರೆ. ಪ್ರಮುಖ ಒಂದೇ ದ್ವಾರವಿದ್ದು, ಅದರಲ್ಲಿ ಇಬ್ಬರು ಈಟಿ ಹಿಡಿದು ನಿಲ್ಲುವ ಸೈನಿಕರು. ಅದೇ ದ್ವಾರದಲ್ಲಿ ನಿಜ ಗಜರಾಜನ ಪ್ರವೇಶ ಆಗಲಿದೆ. ಯಕ್ಷಗಾನದಲ್ಲಿ ಕೇವಲ ಕಲ್ಪನೆಯ ಲೋಕವಿರುವುದು ಸಾಮಾನ್ಯ ಸಂಗತಿ. ಆದರೆ ಅಮರಾವತಿ ಅಮರ ಚರಿತೆಯಲ್ಲಿ ಕಲ್ಪನೆಗೆ ಬಣ್ಣ ತುಂಬಲಾಗಿದೆ. ನಿಜವಾದ ಆನೆ, ಬ್ಯಾಕ್ ಡ್ರಾಪ್ ಅಮರಾವತಿ ಸೆಟ್ಟಿಂಗ್, ಮೂಡುವ ಸೂರ್ಯ, ಅಮರಾವತಿಯ ಕಂಬಗಳು, ಮಧ್ಯದಲ್ಲಿ ಇಂದ್ರ ಸಿಂಹಾಸನವನ್ನು ಕಟ್ಟಿಕೊಡಲಾಗಿದೆ. ಸಮುದ್ರ ಮಥನಕ್ಕೆ 30 ಅಡಿ ಉದ್ದವ ಹಾವನ್ನು, ಮಂದಾರ ಪರ್ವತವನ್ನು ತಯಾರಿಸಲಾಗಿದೆ. ಇವೆಲ್ಲವನ್ನೂ ಮೆರವಣಿಗೆಯಲ್ಲಿ ಹೊತ್ತು ತರಲಿದ್ದಾರೆ.

‘ಇರುಳ ವಿರುದ್ದ ಬೆಳಕಿನ ಯುದ್ದದ ಕತೆ’: ಅಮರಾವತಿಯ ಅಮರ ಚರಿತೆ ‘ಇರುಳ ವಿರುದ್ದ ಬೆಳಕಿನ ಯುದ್ದದ ಕತೆ’ ಎಂಬ ಅಡಿಬರಹದಲ್ಲಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಪ್ರೇಕ್ಷಕರ ಮನ ತಣಿಸಲಿದೆ. ಮೂರು ಹಂತಗಳಲ್ಲಿ ಹಿಮ್ಮೇಳ, ಮುಮ್ಮೇಳ ಬದಲಾಗಲಾಗಿದ್ದು, ಮೊದಲಿಗೆ ತೆಂಕು-ಬಡಗಿನ ಕಲಾವಿದರ, ಮಹಿಳಾ ಕಲಾವಿದರ ಕೂಡುವಿಕೆಯಲ್ಲಿ ಸಮಾಗಮದಲ್ಲಿ ನಡೆಯಲಿದೆ. ತೆಂಕಿಗೆ ಹಿಮ್ಮೇಳನದಲ್ಲಿ ಮಹಿಳಾ ಭಾಗವತರು, ಬಡಗಿಗೆ ಜನ್ಸಾಲೆ, ಬಳಿಕ ಬಡಗಿನ ಸಾಲಿಗ್ರಾಮದ ಮೇಳದ ಸೆಟ್ಟಿಂಗ್. ಅದರಲ್ಲಿ ಇಡೀ ಸಾಲಿಗ್ರಾಮ ಮೇಳದ ಕಲಾವಿದರು ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಪ್ರದರ್ಶನ ನೀಡಲಿದ್ದು, ಕೊನೆಯದಾಗಿ ತೆಂಕಿನ ಪಡ್ಲ ಸತೀಶ್ ಅವರ ಸಾರಥ್ಯದಲ್ಲಿ ಪಾವಂಜೆ ಮೇಳದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.

ನಿಜ ಗಜರಾಜ….
ಯಕ್ಷಗಾನದ ಕೊನೆಯ ಭಾಗದಲ್ಲಿ ದೇವೇಂದ್ರ ಗಜರಾಜನ (ಆನೆಯ) ಮೇಲೆ ಕೂತು ಬರುವುದು ಯಕ್ಷಗಾನದ ವಿಶೇಷ ಆಕರ್ಷಣೆ. ಅಲ್ಲದೇ ಮಧ್ಯಭಾಗದಲ್ಲಿ ಗಜರಾಜನ ಪ್ರವೇಶ ಆಗಲಿದ್ದು, ಆ ಸಂದರ್ಭ ಗಜರಾಜನಿಗೆ ಪೂಜೆ ಕೈಂಕರ್ಯಗಳು ನಡೆಯುತ್ತದೆ. ಈತನ್ಮಧ್ಯೆ ಒಂದು ಬಾರಿ ಗಜರಾಜನ ಪ್ರವೇಶ ಆಗಲಿದ್ದು, ಇದನ್ನು ಆಯೋಜಕರು ಯಾವ ಕಾರಣಕ್ಕಾಗಿ ಆನೆ ಪ್ರವೇಶ ಆಗಲಿದೆ ಎನ್ನುವುದನ್ನು ರಹಸ್ಯದಲ್ಲಿಟ್ಟಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಿರಿಯ ಯಕ್ಷಗಾನ ಕಲಾವಿದರಾದ ಯಾಜಿ, ಉಜಿರೆ ನಾರಾಯಣ ಆಗಮಿಸಲಿದ್ದು ಈ ಮೂವರನ್ನೂ ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ.

ಈಗಾಗಲೇ ಅಮರಾವತಿಯ ಅಮರ ಚರಿತೆ ಯಕ್ಷಗಾನದ ಪೋಸ್ಟರ್‍ಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಕುಂದಗನ್ನಡದ ರಾಯಭಾರಿ ಮನು ಹಂದಾಡಿಯವರು ಕೂಡ ಯಕ್ಷಗಾನ ಪ್ರಚಾರಕ್ಕಾಗಿ ರಚಿಸಿದ ವಿಡಿಯೋ ಸಾಕಷ್ಟು ಯಕ್ಷ ರಸಿಕರನ್ನು ಸೆಳೆದಿದೆ. ಕುಂದಾಪುರದ ವಿನಾಯಕ ಗ್ರ್ಯಾಂಡ್ ಹೋಟೇಲ್‍ನಲ್ಲಿ ಮುಂಗಡ ಟೆಕೇಟುಗಳು ಲಭ್ಯವಿದ್ದು, ಸಾವಿರಕ್ಕೂ ಅಧಿಕ ಮುಂಗಡ ಟಿಕೇಟುಗಳು ಬುಕ್ ಆಗಿದೆ. ನಾಲ್ಕು ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಸಿದ್ದತೆಗಳು ನಡೆಯುತ್ತಿವೆ.

ಹೋಟೆಲ್ ಉದ್ಯಮಿಯ ಯಕ್ಷ ಪ್ರೀತಿ: ಮಂಜುನಾಥ ಪೂಜಾರಿ ಬೆಳ್ಳಾಡಿ ಬಾಗಲಕೋಟೆಯಲ್ಲಿ ಹೋಟೆಲ್ ಉದ್ಯಮಿ. ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ಅನೇಕ ಮೇಳದ ಕಲಾವಿದರು, ಯಜಮಾನರು ಇವರ ಆಪ್ತ ಬಳಗದವರು. ಹೀಗಾಗಿಯೇ ಇಂತದ್ದೊಂದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಬಾಲ್ಯದಲ್ಲಿ ಇವರ ಮನೆ ಸಮೀಪ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನದಲ್ಲಿ ಸಮುದ್ರ ಮಥನದ ವೇಳೆ ನಿಜವಾದ ಆನೆಯನ್ನು ಕರೆತಂದು ಯಕ್ಷಗಾನ ನಡೆಸಿರುವುದೇ ಇವರಿಗೆ ಸ್ಪೂರ್ತಿ. ನಿಜ ಆನೆ ತಂದ ಮೇಲೆ ಅದಕ್ಕೆ ತೂಕವಿರುವಂತಹ ಹೊಸತನವನ್ನು ತೋರಿಸಬೇಕು ಎಂಬ ದೃಷ್ಠಿಯಿಂದ ವೇದಿಕೆಯಲ್ಲಿ ಇಂದ್ರ ಸಭೆ, ಅದ್ದೂರಿ ಸ್ಟೇಜ್, ಕಮಾನು, ಪ್ರಚಾರ, ವೀಕ್ಷಕರ ಸಭೆ, ಅದಕ್ಕೆ ತಕ್ಕಂತೆ ಕಲಾವಿದರ ಆಯ್ಕೆ ಇವೆಲ್ಲವೂ ಸೃಷ್ಡಿಸಲಾಗಿದೆ. ಮಂಜುನಾಥ ಬೆಳ್ಳಾಡಿಯವರ ಕನಸನ್ನು ಸಾಕಾರಗೊಳಿಸಿದ್ದು ಶ್ರೀ ಉಡುಪಿ ಫುಡ್ ಹಬ್ ಹಾಗೂ ಮಲ್ವಾನ್ ತಡ್ಕ ಸೀ ಫುಡ್ ಕಿಚನ್ ಮುಂಬೈ-ಪುಣೆ- ಬೆಂಗಳೂರು. ಸರಿಸುಮಾರು ಆರೇಳು ಲಕ್ಷದ ಬಜೆಟ್ ಇಟ್ಟುಕೊಂಡು ಮಾಡುತ್ತಿರುವ ಈ ಯಕ್ಷಗಾನ ಟಿಕೇಟು ಹಣ ಮಾತ್ರವಲ್ಲದೇ ಕೆಲವು ದಾನಿಗಳ ಸಹಕಾರವನ್ನೂ ಪಡೆಯಲಾಗಿದೆ.

ಯಕ್ಷಗಾನವನ್ನು ಇನ್ನೊಂದು ಹಂತಕ್ಕೆ ಕೊಂಡೊಂಯ್ಯಬೇಕೆಂಬ ದಿಸೆಯಲ್ಲಿ ಹೊಸ ಪ್ರಯತ್ನಕ್ಕ್ಕೆ ಕೈ ಹಾಕಿದ್ದೇನೆ. ಸಾಮಾನ್ಯ ಬಯಲಾಟಗಳಲ್ಲಿ ದೇವಲೋಕ, ಭೂ ಲೋಕ ಎಂದು ಕಲ್ಪನೆ ಮಾಡಿ ಪ್ರದರ್ಶನ ನಡೆಸುತ್ತಾರೆ. ಆದರೆ ಅಮರಾವತಿ ಅಮರಚರಿತೆ ಯಕ್ಷಗಾನದಲ್ಲಿ ಕಲ್ಪನೆಗಳಿಗೆ ಬಣ್ಣತುಂಬುವ ಪ್ರಯತ್ನ ಮಾಡಿದ್ದೇನೆ. ನಿಜವಾದ ಆನೆ ತರಿಸುವುದು ಸಮಾನ್ಯದ ಮಾತಲ್ಲ. ಅದಕ್ಕೆ ತಕ್ಕಂತೆ ತಯಾರಿ ನಡೆಸಬೇಕಾಗುತ್ತದೆ. ನಮ್ಮ ಹೊಸ ಪ್ರಯತ್ನ ಯಕ್ಷಕಾಶಿ ಕುಂದಾಪುರದಲ್ಲಿ ಹೊಸ ಇತಿಹಾಸ ಬರೆಯಲಿದೆ ಎನ್ನುತ್ತಾರೆ ಯಕ್ಷ ಸಂಯೋಜಕ ಮಂಜುನಾಥ ಪೂಜಾರಿ ಬೆಳ್ಳಾಡಿ.

 

Comments are closed.