ಕರಾವಳಿ

ಬೆಂಗಳೂರು-ಮಂಗಳೂರು ಹಗಲು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಘಾಟಿಯ ಪ್ರಕೃತಿ ಸೌಂದರ್ಯ ಸವಿಯಲು ವಿಸ್ಟಾಡೋಮ್ ಸಿದ್ಧ..!

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಾಜಿನ ಛಾವಣಿ ಹೊಂದಿರುವ ಆಕರ್ಷಕ ವಿಸ್ಟಾಡೋಮ್‌ ಬೋಗಿಯ ರೈಲು ಪ್ರಯಾಣ ಆರಂಭಿಸಲಿದೆ.

ಯಶವಂತಪುರ- ಮಂಗಳೂರು ವಿಶೇಷ ರೈಲಿನಲ್ಲಿ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್‌ ಬೋಗಿಗಳು ಜು. 12ರಿಂದ ಬೆಂಗಳೂರಿನಿಂದ ಹಾಗೂ ಜು.13 ಮಂಗಳೂರಿನಿಂದ ಸೇರ್ಪಡೆಗೊಂಡು ಕಾರ್ಯಾಚರಿಸಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ (ಜು.7) ರಿಂದ ಬುಕಿಂಗ್‌ ಆರಂಭವಾಗಲಿದೆ. ಯಶವಂತಪುರದಿಂದ ಮಂಗಳೂರಿಗೆ 1,470 ರೂ. ದರ ನಿಗದಿಪಡಿಸಲಾಗಿದೆ.

(ಸಾಂದರ್ಭಿಕ ಚಿತ್ರಗಳು)

ಪ್ರಕೃತಿ ಹಾಗೂ ಕಡಲತೀರದ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್‌ ಕೋಚ್‌ಗಳನ್ನು ಜೋಡಿಸಲಾಗುತ್ತಿದೆ. ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಲಿದೆ. ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಮನವಿ ಮಾಡಲಾಗಿತ್ತು.

ಕಣ್ಣಿಗೆ ಮುದ ನೀಡಲಿದೆ ಪ್ರಾಕೃತಿಕ ಸೌಂದರ್ಯ..!
ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಈ ರೈಲ್ವೇ ಮಾರ್ಗಮಧ್ಯದಲ್ಲಿ ಅರಣ್ಯ, ಜಲಪಾತ, ಸುರಂಗ, ಸೇತುವೆಗಳು ಹಾಗೂ ಹಸಿರುಮಯ ರಮಣೀಯ ಸೊಬಗನ್ನು ಪ್ರಯಾಣಿಕರು ಸವಿಯಬಹುದು. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ ಪ್ರಯಾಣ ಇನ್ನಷ್ಟು ಸೊಗಸಾಗಿರಲಿದೆ.

ಕೋಚ್‌ ಹೇಗಿದೆ?
ವಿಸ್ಟಾಡೋಮ್‌ ಕೋಚ್‌ ಗಾಜಿನ ದೊಡ್ಡ ಚಾವಣಿ ಒಳಗೊಂಡಿದೆ. 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು ಇರಲಿವೆ. ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವನ್‌, ಪುಟ್ಟ ರೆಫ್ರಿಜರೇಟರ್‌ಗಳು ಸೇರಿದಂತೆ ಹಲವು ಸೌಲಭ್ಯಗಳಿದೆ.

ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಕಾರವಾರ ವಿಶೇಷ ರೈಲು (ರೈಲ್ವೆ ನಂ. 06211 /06212), ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಮಂಗಳೂರು ಜಂಕ್ಷನ್‌ ವಿಶೇಷ ರೈಲು (ರೈಲ್ವೆ ನಂ. 06575/06576), ಯಶವಂತಪುರ -ಮಂಗಳೂರು (ರೈಲ್ವೆ ನಂ. 06539) ಹಾಗೂ ಮಂಗಳೂರು ಜಂಕ್ಷನ್‌-ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ (ರೈಲ್ವೆ ನಂ. 06540 ) ವಿಸ್ಟಾಡೋಮ್‌ ಬೋಗಿ ಸೇರ್ಪಡೆಯಾಗಲಿವೆ.

(ವರದಿ- ಯೋಗೀಶ್ ಕುಂಭಾಸಿ)

 

Comments are closed.