ಕರಾವಳಿ

ಕಾಲುಗಳ ಸ್ವಾಧೀನ ಕಳೆದುಕೊಂಡ‌ ಶ್ವಾನಕ್ಕೆ ‘ಗಾಲಿಗಾಡಿ’; ಕುಂದಾಪುರದ ಎಂಬಿಎ ವಿದ್ಯಾರ್ಥಿನಿಯ ಮಾನವೀಯ ಕಾರ್ಯ

Pinterest LinkedIn Tumblr

ಕುಂದಾಪುರ (ವರದಿ- ಯೋಗೀಶ್ ಕುಂಭಾಸಿ): ಎಷ್ಟೋ ಜನ ಅದೇ ರಸ್ತೆಯಲ್ಲಿ ಓಡಾಡಿದ್ದಾರೆ. ಗಂಭೀರ ಗಾಯಗೊಂಡ ನಾಯಿಮರಿ ಕಂಡಿದ್ದಾರೆ. ನಾಯಿ ಅಂತ ಮುಂದಕ್ಕೆ ಹೋಗಿದ್ದಾರೆ. ಆದರೆ ಅದೇ ದಾರಿಯಲ್ಲಿ ದಿನಾ ಸಂಚರಿಸುವ ಎಂ.ಬಿ.ಎ ವಿದ್ಯಾರ್ಥಿನಿ ಈ ನಾಯಿಯ ಶೋಚನೀಯ ಸ್ಥಿತಿ ಕಂಡಿದ್ದು ಮರುಗಿದ್ದಾರೆ. ಅನ್ನ ನೀರು ಕೊಟ್ಟು ಗಾಯಕ್ಕೆ ಮದ್ದು ಮಾಡಿದರು. ನಾಯಿ ಚೇತರಿಸಿಕೊಂಡರೂ ಕಾಲು ಹಾಗೂ ಸೊಂಟದ ಸ್ವಾಧೀನ ತಪ್ಪಿದ್ದರಿಂದ ನಾಯಿ ತೆವಳಿಕೊಂಡೇ ಸಾಗುತ್ತಿತ್ತು. ಆದರೆ ಈಗ ನಾಯಿ ಸ್ಥಿತಿ‌ ಬದಲಾಗಿದೆ.

ಕುಂದಾಪುರ ತಾಲೂಕು ಮೂಡಲಕಟ್ಟೆ ಇಂಜನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ ಪ್ರಿಯಾ ನಾಯಿ ಮರಿಗೆ ಮರುಜನ್ಮ ಕೊಟ್ಟು ಪ್ರಾಣಿ ಪ್ರಿಯರ ಹಾಗೂ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅದ್ಯೇಗೋ ನಡೆದ ಅಪಘಾತದಿಂದ ಚೇತರಿಸಿಕೊಂಡರೂ ನಾಯಿ ಮರಿ ನಡೆಯಲಾಗದೆ ಇರುವುದನ್ನು ಕಂಡ ಪ್ರಿಯಾ ತನ್ನದೇ ಆದ ಸರಳ ತಂತ್ರಜ್ಞಾನದಲ್ಲಿ ಗಾಲಿಗಾಡಿ ಮಾಡಿ, ನಾಯಿ ಸೊಂಟಕ್ಕೆ ಪಟ್ಟಿಕಟ್ಟಿ ಸ್ವತಂತ್ರವಾಗಿ ಓಡಾಡಲು ಬಿಟ್ಟಿದ್ದಾರೆ. ಪ್ರಿಯಾ ಮನೆಯಲ್ಲಿ ನಾಯಿ ಗಾಲಿಗಾಡಿಯಲ್ಲಿ ಓಡಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.

ಪ್ರಿಯಾ ಹೊಸಂಗಡಿ ನಿವಾಸಿಯಾಗಿದ್ದು ಕಳೆದ ತಿಂಗಳು ಹೊಸಂಗಡಿ ರಸ್ತೆಯಲ್ಲಿ ಹೋಗುವಾಗ ಮೂರ್‍ನಾಲ್ಕು ತಿಂಗಳ ನಾಯಿ ಮರಿ ಬಿದ್ದು ಕೊಂಡಿರುವುದನ್ನು ಕಂಡರು. ನಾಯಿ ಮರಿಗೆ ಅಪಘಾತವಾಗಿತ್ತು. ಹಿಂದಿನ ಎರಡೂ ಕಾಲಿಗೆ ಗಂಭೀರ ಗಾಯದ ಜೊತೆ ಸೊಂಟ ನಿಶ್ಚೇತನಗೊಂಡಿತ್ತು. ನಾಯಿ ನೋಡಿ ಮರುಗಿದ ಪ್ರಿಯಾ ಹೊಟ್ಟೆಗಿಷ್ಟು ಆಹಾರ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ನೋಡಿದರೆ ನಾಯಿಮರಿ ತೆವಳಿಕೊಂಡು ಮನೆ ಬಾಗಿಲಲ್ಲಿ ಪ್ರತ್ಯಕ್ಷವಾಗಿದ್ದು ಮನೆಗೆ ಬಂದ ನಾಯಿಗೆ ಪ್ರಥಮ ಚಿಕಿತ್ಸೆ ನೀಡಿದ ಪ್ರಿಯಾ ಮನೆಯಲ್ಲೆ ಉಳಿಸಿಕೊಂಡು ಆರೈಕೆ ಮಾಡಿದರು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಚೇತರಿಕೆ ಕಂಡರೂ ಓಡಾಡಲು ಆಗುತ್ತಿರಲಿಲ್ಲ.

ಪ್ರಿಯಾ ಅವರು ಗಾಯಗೊಂಡ ನಾಯಿ ಮಾಮೂಲಿಯಂತೆ ಓಡಾಡಲು ಏನಾದರೂ ಮಾಡಬೇಕು ಎಂದು ನಿಶ್ಚಯಿಸಿದರು. ಎರಡು ಉದ್ದದ ಯುಪಿವಿಸಿ ಪೈಪ್ ಬಳಸಿ ಹೊಟ್ಟೆ ಕೆಳಭಾಗಕ್ಕೆ ವೀ ಬೆಂಡ್ ಮತ್ತು ಹಿಂಭಾಗದಲ್ಲಿ ಬೆಂಡ್ ಪೈಪ್ ಜೋಡಿಸಿ ಪಶು ಆಸ್ಪತ್ರೆಯಲ್ಲಿ ಕೃತಕ ಗರ್ಭಧಾರಣೆ ಮಾಡಲು ಅಳವಡಿಸಿ ಮಾದರಿಯಂತೆ ಮಾಡಿ, ಸೊಂಟದ ಬಳಿ ಎರಡೆರಡು ಕಡೆ ಪಟ್ಟಿಗೆ ಮತ್ತೆರಡು ಪೈಪ್ ಜೋಡಿಸಿದರು. ಸೊಂಟದ ಬಳಿ ನೆಲಕ್ಕೆ ಮುಖಮಾಡಿದ ಪೈಪಿಗೆ ಎರಡೂ ಕಡೆ ತೂತು ಕೊರೆದು ಬೋಲ್ಟ್ ನಟ್ ಅಳವಡಿಸಿ ಗಾಲಿ ಜೋಡಿಸಿ, ಕತ್ತಿನ ಬಳಿ ಬೆಲ್ಟ್ ಹಾಕಿ ಎದೆ ಭಾಗದಲ್ಲಿ ಬಿಗಿದು, ಹಿಂಗಾಲು ಬೆನ್ನಿನ ಹಿಂದಿನ ಪೈಪಿಗೆ ಆತುಕೊಳ್ಳುವಂತೆ ಮಾಡಿದರು. ಗಾಲಿಗಾಡಿ ನಾಯಿಗೆ ಕಟ್ಟಿ ಓಡಾಟ ಅಭ್ಯಾಸ ಕೂಡಾ ಮಾಡಿಸಿದರು. ನಾಯಿ ಈಗ ಗಾಲಿ ಗಾಡಿಯಲ್ಲಿ ಎಲ್ಲೆಂದರಲ್ಲಿ ಖುಷಿಖುಷಿಯಾಗಿ ಸಂಚರಿಸುತ್ತದೆ.

ಒಟ್ಟಾರೆ ಅಪಘಾತವಾಗಿ ರಸ್ತೆಬದಿಯಲ್ಲಿ ಬಿದ್ದು ಸತ್ತು ಹೋಗುತ್ತಿದ್ದ ನಾಯಿ ಮರಿಗೆ ಪ್ರಿಯಾ ಮರುಜನ್ಮ ನೀಡಿದ್ದು, ಇದೀಗಾ ಮನೆಯವರ ಅಚ್ಚುಮೆಚ್ಚಿಗೆ ಪಾತ್ರವಾಗಿದೆ.

ಮೇ 14, 2021 ರಂದು ಹೊಸಂಗಡಿಯಲ್ಲಿ, ನಾನು 3-4 ತಿಂಗಳ ವಯಸ್ಸಿನ ನಾಯಿಮರಿಯನ್ನು ಕಂಡೆ. ಅಪಘಾತದಲ್ಲಿ ಬೆನ್ನಿನ ಭಾಗ ಹಾಗೂ ಎರಡೂ ಕಾಲು ನಿಷ್ಕ್ರೀಯವಾಗಿತ್ತು. ಶ್ವಾನಕ್ಕೆ ಆಹಾರವನ್ನು ಕೊಟ್ಟು ಮನೆಗೆ ಹೋದೆ. ಅದರ ಕಾಲುಗಳು ಸೋಂಕಿಗೆ ಒಳಗಾಗಿದ್ದಲ್ಲದೇ ಗಾಯಗಳಾಗಿತ್ತು. ಮರುದಿನ ಬೆಳಿಗ್ಗೆ 5 ಗಂಟೆಗೆ, ತನ್ನ ತೀಕ್ಷ್ಣ ಶಕ್ತಿ ಮೂಲಕ ನನ್ನ ಮನೆಯನ್ನು ಗುರುತಿಸಿ ನನ್ನ ಮನೆ ಬಾಗಿಲಿನ ಬಳಿ ಬಂದಿತ್ತು. ಬಳಿಕ ಪಶುವೈದ್ಯರ ಬಳಿಗೆ ಕರೆದೊಯ್ದು ಉಪಚರಿಸಿದೆವೆ. ಅವರು ಕೂಡ ಹಿಂಭಾಗದ ಸ್ವಾದೀನ ಮರಳುವುದು ಕಷ್ಟ ಎಂದರು. ನಾಯಿಗೆ ಮತ್ತೆ ಅದರ ಬದುಕು ಕಟ್ಟಿಕೊಡಲು ನಿರ್ಧರಿಸಿ ಈ ಕೆಲಸ ಮಾಡಿದೆ. ಒಂದು ತಿಂಗಳೊಳಗೆ ಚೇತರಿಸಿಕೊಂಡಿದ್ದು ಸಂತೋಷದಿಂದ ನಮ್ಮೊಂದಿಗೆ ಇದೆ.
– ಪ್ರಿಯಾ (ವಿದ್ಯಾರ್ಥಿನಿ)

 

 

Comments are closed.