ಕುಂದಾಪುರ: ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ವಿಜಯ ಕುಮಾರ್ ರೆಡ್ಡಿ ಎನ್ನುವರು ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಚಿನ್ನದ ಲೇಪನವುಳ್ಳ 12 ಲಕ್ಷ ಮೌಲ್ಯದ ನಾಗಾಭರಣವನ್ನು ಹರಕೆ ರೂಪದಲ್ಲಿ ಸಮರ್ಪಿಸಿದರು.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭಾನುವಾರ ಬೆಳಿಗ್ಗೆ ಪತ್ನಿ ಸುಧಾ ವಿಜಯ್ ಕುಮಾರ್, ಪುತ್ರ ಅಕ್ಷಯ್ ಜೊತೆ ಆಗಮಿಸಿ ಹರಕೆ ಸಮರ್ಪಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು, 40-45 ವರ್ಷದಿಂದ ಮೂಕಾಂಬಿಕೆ ದೇವಿಯ ಭಕ್ತನಾಗಿದ್ದು ತಂದೆಯವರ ಕಾಲದಿಂದಲೂ ಸನ್ನಿಧಿಗೆ ಆಗಮಿಸುತ್ತಿದ್ದೇವೆ. ದೇವಿ ಆಶೀರ್ವಾದದಿಂದ ಪುತ್ರ ಪ್ರಾಪ್ತಿ ಸೇರಿದಂತೆ ಹಲವು ಇಷ್ಟಾರ್ಥಗಳು ನೆರವೇರಿತ್ತು. ಅದಕ್ಕಾಗಿ ದೇವಿಗೆ ಹರಕೆ ರೂಪದಲ್ಲಿ ಸೇವೆ ನೀಡಬೇಕೆಂಬ ಇರಾದೆ ಇತ್ತು. ಈ ಬಗ್ಗೆ ಬೈಂದೂರು ಶಾಸಕರು ಹಾಗೂ ಆತ್ನೀಯರಾದ ಬಿ.ಎಂ ಸುಕುಮಾರ್ ಶೆಟ್ಟಿಯವರಲ್ಲಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದೇವರಿಗೆ ನಾಗಾಭರಣವನ್ನು ಸಲ್ಲಿಸಿದ್ದೇನೆ ಎಂದರು.
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಉಪಸ್ಥಿತಿಯಲ್ಲಿ ನಾಗಾಭರಣ ಸಮರ್ಪಣೆ ಮಾಡಿದ್ದು ಮಂಗಳೂರು ಮೂಲದ ಪ್ರಕಾಶ್ ಆಚಾರ್ಯ ಎನ್ನುವವರು ಮೂಕಾಂಬಿಕಾ ದೇವಸ್ಥಾನದ ಪ್ರಾಕಾರದಲ್ಲಿಯೇ ಮೂರು ದಿನದಲ್ಲಿ ಈ ಚಿನ್ನದ ಲೇಪನದ ನಾಗಾಭರಣ ನಿರ್ಮಿಸಿದ್ದಾರೆ.
ನಾಗಾಭರಣ ಸಮರ್ಪಣೆ ಸಂದರ್ಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಮ್ಯಾನೇಜರ್ ರಾಮಕೃಷ್ಣ ಅಡಿಗ, ಪಿ.ಆರ್.ಒ ಜಯಕುಮಾರ್, ಕ್ಷೇತ್ರ ಪುರೋಹಿತರಾದ ಕಾಳಿದಾಸ ಭಟ್, ಸುರೇಶ್ ಭಟ್, ನರಸಿಂಹ ಭಟ್, ಅರ್ಚಕ ಗೋವಿಂದ ಅಡಿಗ ಮೊದಲಾದವರು ಉಪಸ್ಥಿತರಿದ್ದರು.
(ವರದಿ- ಯೋಗೀಶ್ ಕುಂಭಾಸಿ)