‘ಮನಸ್ಸಿದ್ದರೆ ಮಾರ್ಗ’ ಎಂಬುವುದು ಅದೆಷ್ಟೋ ಯುವ ಪ್ರತಿಭೆಗಳಿಗೆ ಪ್ರೇರಣಾದಾಯಕವಾದ ಮಾತು. ಅದಕ್ಕೆ ಪೂರಕವೆಂಬಂತೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪ್ರತಿಭೆಗಳ ಆಗರ. ಇಲ್ಲಿನ ಪ್ರತಿಭೆಗಳಲ್ಲಿ ಮುಂಡ್ಕೂರಿನ ರಾಜೇಶ್ ಓರ್ವರು.
ಮುಂಡ್ಕೂರು ಗ್ರಾಮದ ದಡ್ಡು ಲಕ್ಷ್ಮೀ ನಿವಾಸ ಮನೆತನದ ಪೂವ ಮೂಲ್ಯ ಮತ್ತು ಲಲಿತ ಮೂಲ್ಯ ದಂಪತಿಗಳ ಸುಪುತ್ರರಾಗಿ ಹುಟ್ಟಿ ಬೆಳೆದ ಇವರು ಗ್ರಾಮೀಣ ಯುವ ಪ್ರತಿಭೆಯಾಗಿದ್ದು ಶಾಲಾ ದಿನಗಳಿಂದಲೇ ಚುರುಕುತನ ಹೊಂದಿದ್ದು ಈಗಾಗಲೇ ದೈಹಿಕ ವ್ಯಾಯಾಮ ತರಬೇತಿಯನ್ನು ಪಡೆದದ್ದು ಮಾತ್ರವಲ್ಲದೆ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಯ ಹಾದಿಯಲ್ಲಿ ಹಲವು ಬಾರಿ ಚಿನ್ನದ ಪದಕದೊಂದಿಗೆ ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುವುದು ಜೀವನದ ಅಳಿಸಲಾಗದ ಹೆಜ್ಜೆಗುರುತು.
ಆತ್ಮವಿಶ್ವಾಸ, ಸತತ ಪರಿಶ್ರಮದ ಫಲವಾಗಿ ಚಿತ್ರರಂಗದತ್ತ ದಾಪುಗಾಲಿಟ್ಟು ಹಲವಾರು ಚಿತ್ರಗಳಲ್ಲಿ ತೊಡಗಿಸಿ ಕೊಂಡು ಇದೀಗ ಚಿತ್ರರಂಗದಲ್ಲೂ ಸೈ ಎನಿಸಿಕೊಂಡವರು ರಾಜೇಶ್ ಮುಂಡ್ಕೂರು. ಡ್ಯಾನ್ಸ್ ಕ್ಲಾಸ್, ಕಿಕ್ ಬಾಕ್ಸ್ ತರಬೇತಿಯ ಜೊತೆ ಬ್ಲ್ಯಾಕ್ ಸ್ಪೇಡ್ ನಲ್ಲಿ ಅಭ್ಯಾಸ ಪಡೆದಿರುವರು.
ಮುಂಬೈಯಲ್ಲಿ ಅನುಪಮ್ ಖೇರ್ ರವರ ನಟನಾ ಕಲಿಕಾ ಕೇಂದ್ರದಲ್ಲಿ ಡಿಪ್ಲೋಮಾ ಮಾಡಿ ಹಿಂದಿ ಚಿತ್ರರಂಗದಲ್ಲಿ ಕಿರುತೆರೆ ನಟನಾಗಿ ಜನಪ್ರಿಯ ಹಿಂದಿ ಧಾರಾವಾಹಿಗಳಾದ ‘ಎಫ್ಐಆರ್’, ‘ಸಿಐಡಿ’, ‘ಕ್ರೈಂ ಪೆಟ್ರೋಲ್’, ‘ಸಾವ್ದಾನ್ ಇಂಡಿಯಾ’ ಗಳಲ್ಲಿ ಕಾಣಿಸಿಕೊಂಡಿರುವುದು ಯಶಸ್ಸಿನ ಮೈಲಿಗಲ್ಲು.
ಬೆಳ್ಳಿ ತೆರೆಯ ಮೇಲೆ ಹಿಂದಿ ಚಿತ್ರಗಳಾದ ‘ಹ್ಯಾಪಿ ನ್ಯೂ ಇಯರ್’, ‘ಗುಲ್ ಮಕಾಯಿ(ಮಲಾಲ) ಚಿತ್ರಗಳಲ್ಲಿ ವಿಭಿನ್ನ ನಟನೆಯ ಮೂಲಕ ತುಳುನಾಡಿನ ಹೆಮ್ಮೆಯ ಕುವರನಾಗಿ ಯಶಸ್ಸು ಸಾಧಿಸಿದವರು.
‘ಶ್ರೀ ಚಕ್ರಂ’ ಚಿತ್ರದ ಮೂಲಕ ಪ್ರಧಾನ ಪಾತ್ರದಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವುದಲ್ಲದೆ ‘ನಿಶ್ಯಬ್ಧ – 2’ ಚಿತ್ರದಲ್ಲಿ ಖಳನಾಯಕನಾಗಿ ವಿಭಿನ್ನ ನಟನೆಯಿಂದ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ತನಗೆ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾ ಮುನ್ನಡೆಯುತ್ತಿರುವುದು ಶ್ಲಾಘನೀಯ.
ಖಳ ನಟರಾಗಿ ರಾಜೇಶ್ ಮುಂಡ್ಕೂರು ನಟಿಸುತ್ತಿರುವ ಟೆನ್ ಟ್ರೀಸ್ ಪ್ರೊಡಕ್ಷನ್ ಹೌಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಅಂಜು’ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ ಗೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಶ್ರೀ ಪ್ರಸನ್ನ ಆಂಜನೇಯ ದೇವಾಲಯದಲ್ಲಿ ಖೇಲ್ ಚಲನಚಿತ್ರದ ನಿರ್ಮಾಪಕರಾದ ಮಾರ್ಕೆಟ್ ಸತೀಶ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿರುವುದು ಮತ್ತೊಂದು ಹೆಮ್ಮೆ.
ಲೆಕ್ಕಾಚಾರ ಚಲನಚಿತ್ರದ ನಿರ್ಮಾಪಕ ಆರ್.ಚಂದ್ರು ಕ್ಯಾಮರಾ ಸ್ವಿಚ್ ಆನ್ ಮಾಡಿದ್ದು, ಸತತ ಐದು ದಿನಗಳ ಕಾಲ ಎಡಬಿಡದೆ ಚಿಕ್ಕಬಳ್ಳಾಪುರ, ಚಿಂತಾಮಣಿ, ನಂದಿಗಿರಿಧಾಮ, ಮೊದಲಾದ ರಮ್ಯ ಮನೋಹರ ತಾಣಗಳಲ್ಲಿ ಚಿತ್ರೀಕರಣ ನಡೆಸಿದ ತಂಡ ಹೈದರಾಬಾದ್ ಗೆ ಪ್ರಯಾಣ ಬೆಳೆಸುವ ಹಾಗೂ ಖಳನಟರಿಂದ ತಪ್ಪಿಸಿಕೊಳ್ಳುವ ಸಾಹಸ ದೃಶ್ಯಗಳ ಜೊತೆಗೆ ಹಲವಾರು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಮೊದಲ ಹಂತದ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದೆ.
ಬೆಂಗಳೂರಿನಿಂದ ಹೈದರಾಬಾದ್ ಗೆ ಚಲನಚಿತ್ರವೊಂದರ ಆಡಿಷನ್ ಗಾಗಿ ತೆರಳುವ ಮೂರು ಜನ ಹುಡುಗಿಯರು ಹಾಗೂ ಮೂರು ಜನ ಹುಡುಗರಿಗೆ ಮಾರ್ಗ ಮಧ್ಯದಲ್ಲಿ ಐದು ಮಂದಿ ಸೈಕೋಗಳು ಪ್ರವೇಶವಾಗಿ ಅವರಿಂದ ಎದುರಾಗುವ ಸಮಸ್ಯೆಗಳು ಏನು ಹಾಗೂ ಆ ಸಮಸ್ಯೆಗಳಿಂದ ಆರು ಜನರೂ ಹೇಗೆ ಪಾರಾಗುತ್ತಾರೆ ಎಂಬ ಕುತೂಹಲ ಭರಿತ ಕಥಾ ಹಂದರ ಚಿತ್ರದಲ್ಲಿದೆ.
ಹಿರಿಯ ಚಲನಚಿತ್ರ ನಟರಾದ ಅಭಿಜಿತ್ ಹಾಗೂ ಜ್ಯೂನಿಯರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ನಾಯಕಿಯಾಗಿ ಯರ್ರಾಬಿರ್ರಿ, ಗೂಸೀಗ್ಯಾಂಗ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಕನ್ನಡ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ ಹಾಗೂ ಮೊದಲಾದ ಹೊಸ ಪ್ರತಿಭೆಗಳು ತಾರಾಗಣದಲ್ಲಿದ್ದಾರೆ.
ಒಟ್ಟು ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಎರಡನೆ ಹಂತದ ಚಿತ್ರೀಕರಣ ಉತ್ತರ ಕರ್ನಾಟಕದ ಕೆಲವು ಪ್ರಮುಖ ಕಡೆಗಳಲ್ಲಿ ನಡೆಯಲಿದೆಯಲ್ಲದೆ, ಗದಗ ಜಿಲ್ಲೆಯ ಗಜೇಂದ್ರಗಡ , ಕಾಲಕಾಲೇಶ್ವರ ಸುತ್ತಮುತ್ತ, ಬಾಗಲಕೋಟ ಜಿಲ್ಲೆಯ ಬಾದಾಮಿ , ಐಹೊಳೆ, ಕೆಲೂರ, ಸಿದ್ಧನನಕೊಳ್ಳ , ಮಹಾಕೂಟ, ಶಿವಯೋಗಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯಲಿದೆ ಎಂದು ನಿರ್ದೇಶಕ ರಾಜೀವಕೃಷ್ಣ ತಿಳಿಸಿದ್ದಾರೆ.
ರಮೇಶ್ ಕೊಯಿರಾ ಛಾಯಾಗ್ರಹಣ, ಸುರೇಶ ಕಂಬಳಿ ಸಾಹಿತ್ಯ, ವಿನುಮನಸು ಸಂಗೀತ, ಮಲ್ಲಿ ಸಂಕಲನ, ಶಿವು ಸಾಹಸ, ನಾಗಸುಮಂತ ಸ್ಥಿರ ಚಿತ್ರಣ , ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಪ್ರಚಾರಕಲೆ , ಭಕ್ತರಹಳ್ಳಿ ರವಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದ್ದು, ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಯುವ ಉತ್ಸಾಹಿ ನಿರ್ದೇಶಕ ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಟೆನ್ ಟ್ರೀಸ್ ಪ್ರೊಡಕ್ಷನ್ ಹೌಸ್ದಿಂದ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರರಂಗದಲ್ಲಿ ತಾನೋರ್ವ ಯಶಸ್ವಿ ನಟನಾಗಬೇಕೆಂಬ ಹಂಬಲವನ್ನಿಟ್ಟುಕೊಂಡಿರುವ ರಾಜೇಶ್ ಮುಂಡ್ಕೂರು ರವರ ಸತತ ಪರಿಶ್ರಮಕ್ಕೆ ಯಶಸ್ಸು ಸಿಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.
ವರದಿ: ಅರುಣಾ ಕುಲಾಲ್, ಉಳೆಪಾಡಿ