ಕರಾವಳಿ

ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಸನ್ನಿಧಿಯಲ್ಲಿ ಮನ್ಮಹಾರಥೋತ್ಸವ ‘ಕೊಡಿ ಹಬ್ಬ’

Pinterest LinkedIn Tumblr

ಕುಂದಾಪುರ: ಕರಾವಳಿ ಜನತೆಯ ಹಾಗೂ ಮೀನುಗಾರರ ಆರಾಧ್ಯ ದೇವತೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮನ್ಮಹಾರಥೋತ್ಸವವು ಸಂಭ್ರಮ ಸಡಗರದಿಂದ ಡಿ.1 ಮಂಗಳವಾರದಂದು ನಡೆಯಿತು.

ಸಮುದ್ರ ತಟದಲ್ಲಿ ಉದ್ಬವಿಸಿ ಸುಮನಾ ನಂದಿಯ ಎಡದಂಡೆಯಲ್ಲಿ ನಲೆನಿಂತ ಶ್ರೀ ದುರ್ಗಾಮಾತೆಯ ಜಾತ್ರೆಯಲ್ಲಿ ಊರಿನ ಭಕ್ತಾಧಿಗಳು ಭಾಗವಹಿಸಿ ಅಮ್ಮನವರ ದರುಶನ ಪಡೆದಿದ್ದು ಕೊರೊನಾ ಹಿನ್ನಲೆಯಲ್ಲಿ ಜನ ಸಂಖ್ಯೆ ಅತೀ ವಿರಳವಾಗಿತ್ತು.ಪರುಶುರಾಮ ಸೃಷ್ಟಿಯ ಸಮುದ್ರ ತೀರದಲ್ಲಿ ನೆಲೆಸಿರುವ ಆದಿಶಕ್ತಿಯ ಪ್ರತೀಕವಾಗಿರುವ ಶಕ್ತಿ ಸ್ವರೂಪಿಣಿಗೆ ಪೂಜೆ ಸಲ್ಲಿಸಲು ಮುಂಜಾನೆ ಸಮಯದಲ್ಲಿ ನವ ಜೋಡಿಗಳು ಸೇರಿದಂತೆ, ಭಕ್ತಾಧಿಗಳು ಆಗಮಿಸಿ ದೇವಿಯ ದರುಶನ ಪಡೆದು, ಹಣ್ಣು ಕಾಯಿ ಸೇವೆ ಸಲ್ಲಿಸಿ ಕೃತಾರ್ಥರಾದರು.

ಬೆಳಗ್ಗೆ ರಥ ಸಿದ್ಧಿ ಹೋಮ, ಕುಂಡ ಮಂಟಪದಲ್ಲಿ ಪುಣ್ಯಾಹ, ಕಲಶ ಸ್ಥಾಪನೆ, ರತ್ನ ಸಿಹಾಸನ ಪೂಜೆ, ನವಗ್ರಹ ದಾನ, ಹರಿವಾಣ ನೈವೇದ್ಯ, ಮಹಾಪೂಜೆ, ರಥಾರೋಹಣ ವಿಧಾನಗಳು ತಂತ್ರಿ ಮಂಜುನಾಥ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿತು. ಊರಿನ ಭಕ್ತಾಧಿಗಳು ಆಗಮಿಸಿ ಶ್ರೀ ದುರ್ಗಾಮಾತೆಯ ದರುಶನ ಪಡೆದು ಇಷ್ಟಾರ್ಥಗಳನ್ನು ಪೊರೈಸುವಂತೆ ಪ್ರಾರ್ಥನೆ ಸಲ್ಲಿಸಿದರು.ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ ಹಾಗೂ ಜಿ.ಪಂ.ತಾ.ಪಂ.ಜನಪ್ರತಿನಿಧಿಗಳು, ಉದ್ಯಮಿ ಯು.ಬಿ.ಶೆಟ್ಟಿ ಮೊದಲಾದವರು ಉತ್ಸವದಲ್ಲಿ ಭಾಗವಹಿಸಿದ್ದರು.

ಕೊರೊನಾ ಹಿನ್ನಲೆಯಲ್ಲಿ ಅಂಗಡಿಮುಂಗಟ್ಟುಗಳಿಗೆ, ಮನೋರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿತ್ತಾದರೂ ಕೆಲ ಅಂಗಡಿಗಳು ಇದ್ದವು. ಇನ್ನು ದೇವಸ್ಥಾನದ ಒಳಗೆ ಉತ್ಸವದ ಸಂದರ್ಭ ಬಹುತೇಕರು ಮಾಸ್ಕ್ ಧರಿಸದೇ ಇದ್ದ ಬಗ್ಗೆ ಪೊಲೀಸರು ತಿಳುವಳಿಕೆ ಮೂಡಿಸಿದರು. ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಪಿಎಸ್ಐ ಮಹಾದೇವ ಬೋಸ್ಲೆ ಹಾಗೂ ವಿವಿಧ ಠಾಣೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

Comments are closed.