ಕರಾವಳಿ

ತುಳಸಿ ಹಬ್ಬ ಏಕೆ ಆಚರಿಸ ಬೇಕು? ಹೇಗೆ ಆಚರಿಸ ಬೇಕು? : ಇಲ್ಲಿದೆ ತುಳಸಿ ವಿವಾಹದ ಸಂಪೂರ್ಣ ಮಾಹಿತಿ

Pinterest LinkedIn Tumblr

ನಾಡಿನೆಲ್ಲೆಡೆ ಇಂದು ಮತ್ತು ನಾಳೆ ತುಳಸಿ ಹಬ್ಬದ ಸಂಭ್ರಮ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ಪವಿತ್ರ ದಿನ ಇಂದು (ಗುರುವಾರ) ಮಧ್ಯಾಹ್ನದಿಂದ ಆರಂಭವಾಗುತ್ತದೆ. ಇಂದು ಮಧ್ನಾಹ್ನದಿಂದ ನಾಳೆ ಬೆಳಿಗ್ಗೆ 10 ಗಂಟೆಯವರೆಗೆ ತುಳಸಿ ಹಬ್ಬವನ್ನು ಶೃದ್ಧಾ ಭಕ್ತಿಯಿಂದ ಆಚರಿಸಬಹುದು,

ತುಳಸಿ ವಿವಾಹದ ಸಂಪೂರ್ಣ ಮಾಹಿತಿ :

ದೀಪಾವಳಿ ಹಬ್ಬದ ನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ಪವಿತ್ರ ದಿನವನ್ನು ತುಳಸಿ ಮದುವೆಯನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ.

ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದು ತುಳಸಿ ವಿವಾಹದ ವಿಧಿಯಾಗಿದೆ. ಈ ವಿಧಿಯನ್ನು ಕಾರ್ತಿಕ ಶುಕ್ಲ ದ್ವಾದಶಿಯಿಂದ ಹುಣ್ಣಿಮೆಯ ವರೆಗಿನ ಯಾವುದಾದರೊಂದು ದಿನ ಮಾಡುತ್ತಾರೆ.

ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ. ದಿನವನ್ನು ಉತ್ಥಾನ ದ್ವಾದಶಿ ಎಂದೂ ಕರೆಯುತ್ತಾರೆ.

ತುಳಸಿ ವಿವಾಹದ ಬಳಿಕ ಚಾತುರ್ಮಾಸದಲ್ಲಿ ಕೈಗೊಂಡ ಎಲ್ಲ ವ್ರತಗಳನ್ನು ಸಮಾಪ್ತಗೊಳಿಸುತ್ತಾರೆ. ಚಾತುರ್ಮಾಸದಲ್ಲಿ ಯಾವ ಪದಾರ್ಥಗಳನ್ನು ವರ್ಜ್ಯ ಮಾಡಿರುತ್ತಾರೆಯೋ, ಆ ಪದಾರ್ಥಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ ನಂತರ ತಾವೂ ಸೇವಿಸುತ್ತಾರೆ.

ಉತ್ಥಾನವೆಂದರೆ ಏಳುವುದು ಎಂಬರ್ಥ ಬರುತ್ತದೆ. ಈ ದಿನ . ಶ್ರೀಮನ್ನಾರಾಯಣನು ತನ್ನ ಯೋಗನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ ಆಷಾಢ ಶುಕ್ಲ ಏಕಾದಶಿಯಿಂದ. ಕಾರ್ತೀಕ ಶುಕ್ಲ ಏಕಾದಶಿಯವರಗೆ ಅಥವಾ ಆಶಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರಗಿನ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ.

ಚಾತುರ್ಮಾಸದಲ್ಲಿ ಶ್ರೀ ವಿಷ್ಣುವು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಮಲಗಿರುತ್ತಾನೆ. ಈ ಅವಧಿಯಲ್ಲಿ ಪೃಥ್ವಿಯಮೇಲೆ ಬೇರೆ ಬೇರೆ ಲಹರಿಗಳು ಬರುತ್ತವೆ. ಆ ಲಹರಿಗಳಲ್ಲಿ ತಮೋಗುಣವು ಅಧಿಕವಿರುತ್ತದೆ..ಈ ಲಹರಿಗಳನ್ನು ಎದುರಿಸಲು ಸಾಧ್ಯವಾಗಲು ಈ ನಾಲ್ಕು ತಿಂಗಳಿನಲ್ಲಿ ಹೆಚ್ಚು ಹೆಚ್ಚು ಹಬ್ಬ ವ್ರತಗಳು ಬರುತ್ತದೆ. ಯೋಗನಿದ್ರೆಯಲ್ಲಿ ಮಲಗಿರುವ ಭಗವಂತನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯುವರು.

ಕಾರ್ತಿಕ ಶುಕ್ಲ ಪಕ್ಷ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ಈ ಕೆಳಕಂಡ ವೇದೋಕ್ತ ಮಂತ್ರವನ್ನು ಹೇಳಬೇಕು.

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್।
ಸಮೂಢಮಸ್ಯ ಪಾಗುಂಸುರೇ॥

ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಸಂಕ್ಷಿಪ್ತವಾಗಿ ಹೀಗಿದೆ.

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ।
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು॥

ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ.

ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಲಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಲಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಳಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಳಸಿ ವಿವಾಹವನ್ನು ಮಾಡುವರು.

ತುಳಸಿವಿವಾಹಕ್ಕಾಗಿ ಪುರೋಹಿತರು ಸಿಗದಿದ್ದರೆ ಏನು ಮಾಡಬೇಕು ?

ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಚಾರಸಾರಿಗೆ ನಿರ್ಬಂಧವನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಜನಜೀವನ ಮೊದಲಿನಂತಾಗುತ್ತಿದ್ದರೂ, ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ನಿರ್ಬಂಧಗಳಿಂದ ನಿತ್ಯದಂತೆ ತುಳಸಿ ವಿವಾಹವನ್ನು ಆಚರಿಸಲು ಮಿತಿ ಇದೆ. ಇಂತಹ ಸ್ಥಳಗಳಲ್ಲಿ ಇದನ್ನು ಹೇಗೆ ಆಚರಿಸಬೇಕು ಎಂಬುದರ ಬಗ್ಗೆ ಇಲ್ಲಿ ನೀಡಲಾಗಿದೆ

(ಟಿಪ್ಪಣಿ: ಈ ಅಂಶ ಯಾವ ಸ್ಥಳಗಳಲ್ಲಿ ಹಬ್ಬವನ್ನು ಎಂದಿನಂತೆ ಆಚರಿಸಲು ನಿರ್ಬಂಧ ಅಥವಾ ಕಟ್ಟುಪಾಡುಗಳಿವೆಯೋ ಅಂತಹವರಿಗಾಗಿ ಇವೆ. ಯಾವ ಸ್ಥಳದಲ್ಲಿ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಎಂದಿನಂತೆ ಹಬ್ಬವನ್ನು ಆಚರಿಸಲು ಸಾಧ್ಯವಿದೆಯೋ, ಅಂತಹ ಸ್ಥಳಗಳಲ್ಲಿ ನಿತ್ಯದ ಪದ್ಧತಿಯಂತೆ ಆಚರಿಸಬೇಕು).

ತುಳಸಿವಿವಾಹಕ್ಕಾಗಿ ಪುರೋಹಿತರು ಸಿಗದಿದ್ದರೆ ನಮಗೆ ಎಷ್ಟು ಸಾಧ್ಯವಾಗುತ್ತದೆಯೋ, ಅಷ್ಟು ಭಾವಪೂರ್ಣ ರೀತಿಯಲ್ಲಿ ಪೂಜೆಯನ್ನು ಮಾಡಬೇಕು. ಅದೂ ಸಾಧ್ಯವಾಗದಿದ್ದರೆ, ಶ್ರೀ ತುಳಸೀದೇವ್ಯೈ ನಮಃ’ ಎಂದು ನಾಮಜಪವನ್ನು ಮಾಡುತ್ತ ತುಳಸಿಯ ಪೂಜೆಯನ್ನು ಮಾಡಬೇಕು. ಪೂಜೆಯಾದ ಬಳಿಕ ರಾಮರಕ್ಷಾ ಸ್ತೋತ್ರದಲ್ಲಿರುವ ಈ ಮುಂದಿನ ಸಾಲುಗಳನ್ನು ಪಠಿಸಬೇಕು.

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ |
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ||
ರಾಮಾನ್ನಾಸ್ತಿ ಪರಾಯಣಮ್ ಪರತರಮ್ ರಾಮಸ್ಯ ದಾಸೋಽಸ್ಮ್ಯಹಮ್|
ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ||

ತದಂತರ ಬೃಹತ್ ಸ್ತೋತ್ರ ರತ್ನಾಕರ ಈ ಗ್ರಂಥದಲ್ಲಿರುವ ಸರಸ್ವತಿ ಸ್ತೋತ್ರದ ಪ್ರಾರಂಭದ ಮುಂದಿನ ಸಾಲುಗಳನ್ನು ಪಠಿಸಬೇಕು.

ಯಾ ಕುನ್ದೇನ್ದುತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ|
ಯಾ ವೀಣಾವರದಣ್ಡಮಣ್ಡಿತಕರಾ ಯಾ ಶ್ವೇತಪದ್ಮಾಸನಾ||
ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಃ ಸದಾ ವನ್ದಿತಾ|
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಃಶೇಷಜಾಡ್ಯಾಪಹಾ ||

ಈ ಶ್ಲೋಕವನ್ನು ಹೇಳಿದ ಬಳಿಕ ‘ಸುಮುಹೂರ್ತ ಸಾವಧಾನ’ ಎಂದು ಹೇಳಿ ತುಳಸಿಗೆ ಅಕ್ಷತೆಗಳನ್ನು ಅರ್ಪಿಸಬೇಕು.

ವರದಿ ಕೃಪೆ : ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ ಚೇತನ ರಾಜಹಂಸ

Comments are closed.