ಕರಾವಳಿ

ಮಹಿಳೆಯ ಹೆಸರಿನಲ್ಲಿ ಯುವಕರಿಂದ ಅಶ್ಲೀಲ ಚಿತ್ರ ಸಂಗ್ರಹಿಸಿ ಪೊಲೀಸರ ಹೆಸರಿನಲ್ಲಿ ಹಣಕ್ಕೆ ಬೆದರಿಕೆ ಹಾಕುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

ಮಂಗಳೂರು : ಮಹಿಳೆಯ ಹೆಸರಿನಲ್ಲಿ ಯುವಕರ ಅಶ್ಲೀಲ ಚಿತ್ರ ಸಂಗ್ರಹಿಸಿ ಬಳಿಕ ತಾವು ಪೊಲೀಸ್ ಅಧಿಕಾರಿ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರು ನಿವಾಸಿಗಳಾದ ಪವನ್ ಎಲ್. (20) ಹಾಗೂ ಗೋಕುಲ್ ರಾಜ್ (20) ಎಂದು ಹೆಸರಿಸಲಾಗಿದೆ.

ಬಂಧಿತ ಯುವಕರು ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಬಳಸಿ ಹೊಸ ಹೊಸ ಯುವಕರೊಂದಿಗೆ ವ್ಯವಹರಿಸಿ ಅವರ ಬಳಿಯಿಂದ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿ, ನಂತರ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಸಾಕ್ಷೀರಾಜ್ ಎಂಬ ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಸೃಷ್ಟಿಸಿ ಮಂಗಳೂರಿನ ರಾಜೇಶ್ ಎಂಬವರೊಂದಿಗೆ ಸಂಪರ್ಕ ಸಾಧಿಸಿದ್ದರು. ಆರೋಪಿಗಳು ಮೊದಲು ಅಶ್ಲೀಲ ಫೋಟೊಗಳನ್ನು ಕಳುಹಿಸಿ ನಂತರ ರಾಜೇಶ್ ಅವರಿಂದ ಫೋಟೊಗಳನ್ನು ಪಡೆದಿದ್ದರು. ನಂತರ ಆ ಫೋಟೊಗಳನ್ನು ಬಳಸಿ ಬೆದರಿಸಿ ಹಣ ಪಡೆದಿದ್ದರು.

ಅ ಬಳಿಕ ರಾಜೇಶ್ ಬಳಿ ಇನ್ನಷ್ಟು ಫೋಟೊಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ರಾಜೇಶ್ ಫೋಟೋ ಕೊಡಲು ನಿರಾಕರಿಸಿದ್ದು, ಆಗ ಆರೋಪಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ವಂಚಿಸಿದ್ದಾರೆ.

ಈ ಬಗ್ಗೆ ರಾಜೇಶ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಬಿ.ಸಿ.ಗಿರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜಾರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.