ಕರಾವಳಿ

ಏಳುಬೀಳುಗಳ ನಡುವೆ ಬಹುದೊಡ್ಡ ಸಾಧನೆ : ಅಂದಿನ ಖ್ಯಾತ ಬಾಲಕಲಾವಿದೆ ಇಂದು ಐಎಎಸ್ ಅಧಿಕಾರಿ -UPSC ಟಾಪರ್

Pinterest LinkedIn Tumblr

ಕೆಲವು ಮಂದಿ ಕಲಾವಿದರು ಸಾಧನೆಯಿಂದ ಹೆಸರು ಸಂಪಾದಿಸುತ್ತಾರೆ. ಕೆಲ ಕಲಾವಿದರ ಜೀವನದಲ್ಲಿ ನಡೆಯುವ ಘಟನೆಗಳೆ ಅವರ ಬದುಕಿಗೆ ಮಾರಕವಾಗುತ್ತದೆ. ಕಲೆ ಅನ್ನೋದು ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಆದರೆ ಕೆಲವರನ್ನು‌ ಮಾತ್ರ ಆರಿಸಿಕೊಳ್ಳುತ್ತದೆ ಎನ್ನುವ ನಾನ್ನುಡಿ ಮಾತಿನಂತೆ ಕಲಾವಿದರ ಬದುಕಿನಲ್ಲಿ ಸಾಧನೆ ಮಾಡಿದವರು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ.

ಇದು ನಿಜ ಕೂಡ ಆದರೆ ಅದೆಷ್ಟೋ ಜನ ಕಲೆಯ ಬರ ಸೆಳೆತಕ್ಕೆ ಸೂಜಿಗಲ್ಲಿನಂತೆ ಆಕರ್ಷಿತರಾಗಿ ಅದನ್ನು ಮೈಗೂಡಿಸಿಕೊಂಡು ತಲೆಯ ಮೇಲೆ ಹೊತ್ತು ಮೆರೆಸಿ ಉತ್ತುಂಗದ ಮಜಲನ್ನು ಏರಿದವರು ಇದ್ದಾರೆ, ಹಾಗೆಯೇ ಬಣ್ಣದ ಲೋಕದ ಪಾತರಗಿತ್ತಿಯಂತ ಆಸೆಯ ಕಡಲಿಗೆ ಧುಮುಕಿ ಈಜಲಾಗದೇ ಮುಳುಗಿ ಮತ್ತೆ ಮೇಲೇಳದವರು ಇದ್ದಾರೆ!.

ಕಲಾವಿದರು ಒಂದೇ ರಂಗದಲ್ಲಿ ಸಾಧನೆ ಮಾಡುವುದು ಸಾಮಾನ್ಯ. ಆದರೆ ಕಲಾವಿದರು ಬೇರೆ ಬೇರೆ ರಂಗಗಳಲ್ಲಿ ಸಾಧನೆ ಮಾಡಿದಾಗ ಅವರ ಕೀರ್ತಿ ಇನ್ನಷ್ಟು ಹೆಚ್ಚುತ್ತದೆ ಜೊತೆಗೆ ಅವರ ಸಾಧನೆ ಇನ್ನೊಬ್ಬರಿಗೆ ಮಾದರಿಯಾಗುತ್ತದೆ. ಹಾಗೆಯೇ ಬಾಲ ಕಲಾವಿದರು ಸಿನಿಮಾಲೋಕಕ್ಕೆ ಕಾಲಿಟ್ಟು ಅಲ್ಲಿನ ಆಕರ್ಷಣೆಗೆ ಒಳಗಾಗಿ ಓದಿನ ಕಡೆ ಗಮನ‌ಕೊಡದೇ ಅಲ್ಲೂ ಸಲ್ಲದೇ ಇಲ್ಲೂ ಸಲ್ಲದೇ ಕೊನೆಗೆ ತ್ರಿಶಂಕೂ ಸ್ಥಿತಿಗೆ ಸಿಕ್ಕವರು ಅನೇಕರು ಇದ್ದಾರೆ.

ಇಲ್ಲಿ ಈಗ ಮಾತು ಬರೆಯಲು ಕಾರಣ ಓರ್ವ ಪ್ರಸಿದ್ಧ ಬಾಲಕಲಾವಿದೆ ಸಡನ್ ಆಗಿ ಐಎ ಎಸ್ ಅಧಿಕಾರಿಯಾಗಿ ನಿಮ್ಮ ಮುಂದೆ ಬಂದರೆ ನಿಮಗೆ ಎಷ್ಟು ಆಚರಿಯಾಗುತ್ತದೆ.ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಮತ್ತು ನಟಿ ಮಾಲಾಶ್ರೀ ಅಭಿನಯಿಸಿರುವ “ಗಂಗಾ ಯಮುನಾ” ಸಿನಿಮಾವನ್ನು ನೀವೆಲ್ಲರೂ ನೋಡಿರುತ್ತೀರಿ. ಗಂಗಾ ಯಮುನಾ ಸಿನಿಮಾದಲ್ಲಿ ಶಿವಣ್ಣ ಹಾಗೂ ಮಾಲಾಶ್ರೀಯರ ಮುದ್ದು ಮಗಳಾಗಿ ಅಭಿನಯಿಸಿದ್ದ ಬಾಲನಟಿ ನಿಮಗೆ ನೆನಪಿದ್ದಾರಾ ?

ಆ ಹುಡುಗಿಯ ಹೆಸರು ಕೀರ್ತನ.. ಅಂದು ಬಾಲನಟಿಯಾಗಿದ್ದ ಕೀರ್ತನ ಇಂದು ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಗೊತ್ತಾ. ಬಾಲ ನಟಿ “ಬೇಬಿ ಕೀರ್ತನ” ಗಂಗಾ ಯಮುನಾ, ಓ ಮಲ್ಲಿಗೆ, ಎ ಸೇರಿದಂತೆ ಸುಮಾರು 36 ಚಿತ್ರಗಳಲ್ಲಿ ಅಭಿನಯಿಸಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ಪಡೆದು ಕೊನೆಗೆ ತಂದೆಯ ಆಸೆಯಂತೆ ಇಂದು ಐ.ಎ.ಎಸ್. ಓದು ಮುಗಿಸಿ ಈಗ ಕರ್ನಾಟಕ ರಾಜ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸುವ ದಿನದ ಕ್ಷಣಗಣನೆ ಆರಂಭವಾಗಿದೆ ಎನ್ನಬಹುದು.

ಕೀರ್ತನ ಅವರು ನಾಗರಿಕ ಸೇವೆ (UPSC)ಪರೀಕ್ಷೆಯಲ್ಲಿ 167 ನೇ ರ‍್ಯಾಂಕ್ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. ಹಾಗೂ ಬಿಬಿಎಂಪಿಯಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅತಿ ಕಿರಿಯ ವಯಸ್ಸಿಗೆ ಈಕೆಯ ಸಾಧನೆ ಅಗಾಧ. ನಂದಿನಿ ಲೇಔಟ್ ನಲ್ಲಿ ನಡೆಯುವ ಅಣ್ತಮ್ಮ ಉತ್ಸವದಲ್ಲಿ ಭಾಗವಹಿಸಿದ್ದ ಬಾಲಕಿ, ನಂತರ ಚಿತ್ರರಂಗ ಪ್ರವೇಶಿಸಿದರು.

ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅಭಿನಯದ ದೊರೆ ಕೀರ್ತನ ನಟಿಸಿದ ಮೊದಲ ಸಿನಿಮಾ. ಅದಾದ ನಂತರ ಹಲವಾರು ಸಿನಿಮಾಗಳಲ್ಲಿ ಕೀರ್ತನ ನಟಿಸಿದರು. ಓ ಮಲ್ಲಿಗೆ, ಕಾನೂರ ಹೆಗ್ಗಡತಿ, ಕರ್ಪೂರದ ಗೊಂಬೆ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಹಿರಿಯ ನಟರಾದ ಕಲ್ಯಾಣ್ ಕುಮಾರ್ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ. ನಟರಾದ ಶಶಿ ಕುಮಾರ್, ರಮೇಶ್ ಅರವಿಂದ್, ಉಪೇಂದ್ರ ಎಲ್ಲರ ಜೊತೆಯಲ್ಲೂ ನಟಿಸಿದ್ದಾರೆ.

ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶಿಲ್ಪ, ಶಶಿಕುಮಾರ್, ಮಾಲಾಶ್ರೀ, ಶೃತಿ, ಸಿತಾರ, ಜಯಮಾಲ ಹೀಗೆ ಬಹುತೇಕ ಎಲ್ಲಾ ದೊಡ್ಡ ಸ್ಟಾರ್ ನಟರ ಜೊತೆ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ಎಲ್ಲರಿಂದ ಪ್ರಶಂಸೆಯನ್ನು ಪಡೆದಿದ್ದ ಈ ನಟಿ ಈಗ ನಮ್ಮೆಲ್ಲರ “ಹೆಮ್ಮಯ ಕನ್ನಡತಿ” ಎನ್ನಲು ಹೆಮ್ಮೆಯಾಗುತ್ತಿದೆ.ಬಾಲನಟಿಯಾಗಿದ್ದಾಗಲೇ ಹಲವಾರು ಸಂಸ್ಥೆಗಳಿಂದ ಸನ್ಮಾನ ಮಾಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಬಾಲ ಪುರಸ್ಕಾರ ಮತ್ತು ರಾಜ್ಯ ಪ್ರಶಸ್ತಿಗಳು ಸಹ ಕೀರ್ತನಾರಿಗೆ ದೊರಕಿದೆ.

ಸಿನಿಮಾದಲ್ಲಿ ಅಭಿನಯಿಸಿ ದೊಡ್ಡ ದೊಡ್ಡ ಡೈಲಾಗ್ ಹೇಳಿ ಅಭ್ಯಾಸ ಇದ್ದುದರಿಂದಲೇ ಇವರ ಗ್ರಹಿಕೆ ಶಕ್ತಿ ಹೆಚ್ಚಾಯಿತಂತೆ. ವರನಟ ಡಾ.ರಾಜ್ ಕುಮಾರ್ ಅವರಿಂದಲೂ ಸಹ ಸಿಹಿ ತಿನ್ನಿಸಿಕೊಂಡಿದ್ದಾರೆ. ಚಿಗುರು, ಜನನಿ, ಸುನೀಲ್ ಪುರಾಣಿಕ್ ಅವರ ಪುಟಾಣಿ ಏಜೆಂಟ್ ಸೀರಿಯಲ್ ನಲ್ಲಿ ನಟಿಸಿದ್ದಾರೆ.”ಅಂತರ್ಜಲ” ಎಂಬ ಒಂದು ಶಾರ್ಟ್ ಮೂವಿ ಅವರ ಜೀವನದ ಮೇಲೆ ಪರಿಣಾಮ ಬೀರಿತಂತೆ. ಆಗಿನಿಂದಲೇ ಸೇವಾ ಕ್ಷೇತ್ರಕ್ಕೆ ಬರಬೇಕು ಎಂದು ತೀರ್ಮಾನ ಮಾಡಿದರಂತೆ. ಖಾಸಗಿ ವಾಹಿನಿಯಲ್ಲಿ ನಿರೂಪಣೆ ಕೂಡ ಮಾಡಿದ್ದರು ಕೀರ್ತನ ಜೊತೆಗೆ ಇಂಜಿನಿಯರಿಂಗ್ ಓದಿರುವ ಇವರು, ಇಂಜಿನಿಯರ್ ಆಗಿ ಕೂಡ ಎರಡು ವರ್ಷ ಕೆಲಸ ಮಾಡಿದ್ದಾರೆ.

ಈ ಒಂದು ಅಭೂತಪೂರ್ವ ಯಶಸ್ಸಿನ ಉತ್ತುಂಗಕ್ಕೇರಿರುವ ಕೀರ್ತನಾ ರವರನ್ನು ಇತ್ತೀಚೆಗೆ ಮಡಿವಾಳ ಜನಾಂಗದವರು ತಮ್ಮ ಕುಲದ ಮೊದಲ ಹೆಣ್ಣುಮಗಳು ಇಂತಹ ಒಂದು ದೊಡ್ಡ ಸಾಧನೆಯನ್ನು ಮಾಡಿರುವುದು ನಮ್ಮ ಜನಾಂಗಕ್ಕೆ ಕೀರ್ತಿ ಕಳಶ ಇದ್ದಂತೆ ಎಂದು “ದಿವ್ಯ ಪ್ರಜ್ಞಾ ಪ್ರತಿಷ್ಠಾನ”ದ ವತಿಯಿಂದ ಅಭಿನಂದಿಸಿದ್ದಾರೆ

ದಿವ್ಯ ಪ್ರಜ್ಞಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ನಿವೃತ್ತ ಐ.ಪಿ.ಎಸ್. ಅಧಿಕಾರಿಯಾಗಿರವಂತಹ ಶ್ರೀಹೆಚ್.ಎಸ್. ವೆಂಕಟೇಶ್ ರವರು ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿ , ಹಲವಾರು ಸಮಾಜದ ಗಣ್ಯರ ಸಮ್ಮುಖದಲ್ಲಿ ಶ್ರೀಮತಿ ಕೀರ್ತನಾ ರವರನ್ನು ಅಭಿನಂದಿಸಿ, ಗೌರವಿಸಿದ್ದಾರೆ.

ಕೀರ್ತನಾರವರ ಸಾಧನೆಯ ಹಿಂದೆ ಬಹಳ ದೊಡ್ಡ ಕಥೆಯೇ ಇದೆ ಎನ್ನಬಹುದು. ಕೀರ್ತನಾರವರು ತಂದೆಯನ್ನು ಕಳೆದುಕೊಂಡು, ಮನೆಯಲ್ಲಿ ಬಡತನವಿದ್ದರೂ ಛಲ ಬಿಡದೇ ಅನೇಕ ಅಡೆ ತಡೆಗಳನ್ನು ಎದುರಿಸಿ ಇಂದು ಈ ನಾಡಿನ ಒಂದು ದೊಡ್ಡ ಸಾಧನೆಯ ಗುರಿ ಮುಟ್ಟಿ ಯಶಸ್ವಿಯಾಗಿದ್ದಾರೆ. ಅವರ ತಾಯಿ, ತಮ್ಮ ಹಾಗೂ ಅವರ ಪತಿಯ ಪ್ರೋತ್ಸಾಹ ಮತ್ತು ಸಹಕಾರ ದೊಂದಿಗೆ ಇಂದು ಈ ಒಂದು ಸಾಧನೆಗೆ ಭಾಜನರಾಗಿದ್ದಾರೆ.

ನಾನು ಮೊದಲಿನಿಂದ ಸಿನಿಮಾ ರಂಗದಲ್ಲಿ ಇದ್ದುದ್ದರಿಂದ ಕಲೆ ಮತ್ತು ಸಂಸ್ಕೃತಿ ಯ ವಲಯದಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಅಭಿವೃದ್ದಿಗಾಗಿ ದುಡಿಯಲು ಸಿದ್ದವಿದ್ದೇನೆ. ಎಂದು ಕೀರ್ತನಾ ತಿಳಿಸಿದ್ದಾರೆ.

ಈಗ ಬಿಬಿಎಂಪಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಲವಾರು ದಿಗ್ಗಜರಿಂದ ಹಾರೈಕೆ ಪಡೆದಿದ್ದಾರೆ. ಕೀರ್ತನಾರವರ ಸಾಧನೆ ನಿಜಕ್ಕೂ ಶ್ಲಾಘನೀಯವಾದದ್ದು. ಅವರು ಈ ನಾಡಿನ ಕೀರ್ತಿ ಮತ್ತಷ್ಟು ಹೆಚ್ಚಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂಬುದು ಎಲ್ಲರ ಆಶವಾಗಿದೆ. ನಮ್ಮ ಮಾಧ್ಯಮದ ಪರವಾಗಿ ಕೂಡ ಶುಭಾ ಹಾರೈಕೆಗಳು.  ಶ್ರೀ ದೇವರ ಆಶೀರ್ವಾದ ಹಾಗೂ ನಾಡಿನ ಜನತೆಯ ಅಭಿಮಾನ ಸದಾ ನಿಮ್ಮ ಮೇಲಿರಲಿ.. ಗುಡ್‌ಲಕ್ ಕೀರ್ತನಾ ಮೇಡಂ.

Comments are closed.