
ಚೆನ್ನೈ : ಎರಡು ದಿನಗಳ ಹಿಂದೆ ದೇಶ-ವಿದೇಶಗಳ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ ಮಹಾನ್ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿದ್ದಾರೆ ಎಂಬುವು ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಅವರ ನಿಧನಕ್ಕೆ ಕಣ್ಣೀರು ಹಾಕುತ್ತಿದೆ.
ಈ ನಡುವೆ ಎಸ್ಪಿಬಿ ಅವರ ಕೊನೆಯ ಹಾಡು ಯಾವುದು, ಯಾವ ಚಿತ್ರಕ್ಕೆ, ಯಾರ ಚಿತ್ರಕ್ಕೆ ಅವರು ಕೊನೆಯ ಬಾರಿ ಹಾಡಿದ್ದಾರೆ ಎಂಬ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.
ಎಸ್ಪಿಬಿ ಅವರು ತಮ್ಮ ವೃತ್ತಿಜೀವನದಲ್ಲಿ 40ಸಾವಿರ ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಸಾಧನೆಗಳ ಬಗ್ಗೆ ಲೆಕ್ಕ ಹಾಕಲು ಸಾಧ್ಯವಾಗದಷ್ಟು ಅವರು ಸಾಧನೆ ಮಾಡಿದ್ದಾರೆ. ಲಾಕ್ಡೌನ್ ಶುರುವಾಗುವುದಕ್ಕಿಂತ ಮುನ್ನವೂ ಅವರು ಹಾಡಿದ್ದರು. ಹಾಗೆ ಹಾಡಿದ ಕೊನೆಯ ಹಾಡು ಯಾವ ಚಿತ್ರಕ್ಕಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಎಸ್ಪಿಬಿ ಅವರು ಹಾಡಿರುವ ಕೊನೆಯ ಹಾಡು ಯಾವೂದು ಎಂಬುವುದನ್ನು ಖ್ಯಾತ ಸಂಗೀತ ನಿರ್ದೇಶಕ ಡಿ. ಇಮಾನ್ ಅವರು ಬಹಿರಂಗ ಪಡಿಸಿದ್ದಾರೆ. ಎಸ್ಪಿಬಿ ಅವರು ಹಾಡಿರುವ ಕೊನೆಯ ಹಾಡು, ರಜನಿಕಾಂತ್ ಅವರ ‘ಅಣ್ಣಾತ್ತೆ’ ಚಿತ್ರಕ್ಕೆ ಎಂದು ಸ್ವತಹ ಸಂಗೀತ ನಿರ್ದೇಶಕ ಡಿ. ಇಮಾನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಜನಿಕಾಂತ್ ಮತ್ತು ಎಸ್ಪಿಬಿ ಅವರ ಜತೆಯಾಟ ಸುಮಾರು 40 ವರ್ಷಗಳ ಹಿಂದಿನದ್ದು. ಎಸ್ಪಿಬಿ ಅವರು ರಜನಿಕಾಂತ್ ಅವರಿಗೆ ನೂರಾರು ಹಾಡುಗಳನ್ನು ಹಾಡಿದ್ದರು. 1980ರಲ್ಲಿ ಬಿಡುಗಡೆಯಾದ ‘ಬಿಲ್ಲ’ ಚಿತ್ರದ ‘ಮೈ ನೇಮ್ ಈಸ್ ಬಿಲ್ಲ’ ಎಂಬ ರಜನಿಕಾಂತ್ ಇಂಟ್ರೊಡಕ್ಷನ್ ಹಾಡನ್ನು ಹಾಡಿದ್ದು ಎಸ್ಪಿಬಿಯವರೇ. ಅದರಲ್ಲೂ ಪ್ರತೀ ಚಿತ್ರದಲ್ಲೂ ತಮ್ಮ ಇಂಟ್ರೊಡಕ್ಷನ್ ಹಾಡನ್ನು ಎಸ್ಪಿಬಿ ಅವರೇ ಹಾಡಬೇಕು ಎಂದು ರಜನಿಕಾಂತ್ ಪಟ್ಟುಹಿಡಿಯುತ್ತಿದ್ದರಂತೆ.
‘ಭಾಷಾ’, ‘ಮುತ್ತು’, ‘ಪಡೆಯಪ್ಪ’ ಸೇರಿದಂತೆ ರಜನಿಕಾಂತ್ ಅವರ ಹಲವು ಚಿತ್ರಗಳ ಇಂಟ್ರೊಡಕ್ಷನ್ ಹಾಡುಗಳನ್ನು ಎಸ್ಪಿಬಿ ಅವರು ಹಾಡಿದ್ದರು. ರಜನಿಕಾಂತ್ ಅವರ ಹಿಂದಿನ ಚಿತ್ರ ‘ದರ್ಬಾರ್’ನ ನಾಯಕನ ಪರಿಚಯದ ಹಾಡಿಗೂ ಎಸ್ಪಿಬಿ ಧ್ವನಿಯಾಗಿದ್ದರು.


‘ಅಣ್ಣಾತ್ತೆ’ ಚಿತ್ರ ಶುರುವಾದಾಗ, ಎಸ್ಪಿಬಿ ಅವರಿಂದಲೇ ಹಾಡಿಸಬೇಕು ಎಂಬುದು ಚಿತ್ರತಂಡದ ನಿರ್ಧಾರ ವಾಗಿತ್ತು. ಅದರಂತೆ, ಲಾಕ್ಡೌನ್ ಶುರುವಾಗುವುದಕ್ಕಿಂತ ಕೆಲವು ದಿನಗಳ ಮೊದಲು, ಎಸ್ಪಿಬಿ ಅವರಿಂದ ನಾಯಕನ ಪರಿಚಯದ ಗೀತೆಯನ್ನು ಹಾಡಿಸಲಾಗಿದೆ. ಎಸ್ಪಿಬಿ ಅವರಿಗೆ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವ ಸಂಗೀತ ನಿರ್ದೇಶಕ ಡಿ. ಇಮಾನ್ ಇದೇ ವೇಳೆ ಎಸ್ಪಿಬಿ ಅವರ ಕೊನೆಯ ಹಾಡಿನ ಬಗ್ಗೆ ಬರೆದುಕೊಂಡಿದ್ದಾರೆ.
ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅಣ್ಣಾತ್ತೆ’ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಚಿತ್ರದಲ್ಲಿ ರಜನಿಕಾಂತ್ ಜತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ಮುಂತಾದವರು ನಟಿಸುತಿದ್ದಾರೆ.
Comments are closed.