ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಇಂದು ವಿಚಾರಣೆ ನಡೆಸಿದ ಬೆಂಗಳೂರಿನ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ.ಸೆಪ್ಟೆಂಬರ್ 19ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.
ಇದಕ್ಕೂ ಮುನ್ನ, ಸೋಮವಾರ (ಸೆಪ್ಟೆಂಬರ್ 14) ರಾಗಿಣಿಗೆ 1ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಈ ಸಂಬಂಧ, ರಾಗಿಣಿ ಪರ ವಕೀಲರು ಮಧ್ಯಂತರ ಜಾಮೀನು ಅರ್ಜಿ ಹಾಕಿದ್ದರು. ಇಂದು ಅರ್ಜಿ ನ್ಯಾಯಾಲಯದ ಮುಂದೆ ಬಂದಾಗ, ನ್ಯಾಯಲಯವರು ಸೆಪ್ಟೆಂಬರ್ 19ಕ್ಕೆ ಮುಂದೂಡಿ ಆದೇಶಿಸಿದೆ.
ತನಿಖೆ ಪ್ರಗತಿಯಲ್ಲಿರುವುದರಿಂದ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಸಿಸಿಬಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮೂರು ದಿನಗಳ ಕಾಲ ಮುಂದೂಡಿದ್ದು, ಇದರಿಂದ ರಾಗಿಣಿ ಇನ್ನೂ ಮೂರು ದಿನಗಳ ಕಾಲ ಜೈಲಿನಲ್ಲೇ ಮುಂದುವರೆಯುವಂತಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಗಿಣಿ ದ್ವಿವೇದಿ ಹಾಗೂ ಇನ್ನೂ ನಾಲ್ಕು ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಎಲ್ಲರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ರಾಗಿಣಿ ಜೊತೆಗೆ ಇತರೆ ಆರೋಪಿಗಳಾದ ಲೂಮ್ ಪೆಪ್ಪರ್ ಅಲಿಯಾಸ್ ಸೈಮನ್, ಪ್ರಶಾಂತ ರಾಂಕಾ, ರಾಹುಲ್, ನಿಯಜ್ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವಿಚಾರಣೆಯಲ್ಲಿರುವ ಖೈದಿಗಳಿಗೆ ಹೊರಗಿನಿಂದ ಊಟ ತರಿಸಿಕೊಳ್ಳಲು ಇದ್ದ ಅವಕಾಶಕ್ಕೆ ಕಾರಾಗೃಹ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಹಾಗಾಗಿ ನಟಿ ರಾಗಿಣಿ, ಜೈಲಿನಲ್ಲಿ ಮಾಡುವ ಅಡುಗೆಯನ್ನೇ ತಿನ್ನಬೇಕಾಗಿದೆ. ಕೊರೊನಾ ಪರಿಸ್ಥಿತಿ ಕಾರಣ ಹೊರಗಿನ ಊಟಕ್ಕೆ ಅವಕಾಶ ನೀಡಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ 4ರಂದು ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ನಟಿಯನ್ನು ವಶಕ್ಕೆ ಪಡೆದುಕೊಂಡರು. ಮೂರು ದಿನಗಳ ಕಾಲ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ ಬಳಿಕ ಸೆಪ್ಟೆಂಬರ್ 7 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನಂತರ ಐದು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಇನ್ನು ಇದೇ ಪ್ರಕರಣದಲ್ಲಿ ಸಿಸಿಬಿ ಕಸ್ಟಡಿಯಲ್ಲಿರುವ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಅವರ ಕಸ್ಟಡಿ ಇಂದಿಗೆ ಕೊನೆಯಾಗಲಿದ್ದು ಆಕೆಯನ್ನು ಇಂದು ಪೋಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.
Comments are closed.