
ಬೆಂಗಳೂರು /ಮಂಡ್ಯ: ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿದರೆ ನಮ್ಮ ದುಡ್ಡು ನಮ್ಮಲ್ಲೆ ಉಳಿಯುತ್ತದೆ. ಇತರ ದೇಶಗಳಿಗೆ ನಮ್ಮ ಹಣ ಹಂಚಿ ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದಾರೆ ಎಂದು ವರದಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೇ ಕ್ಯಾಸಿನೋ ಓಪನ್ ಮಾಡಬೇಕು. ನಮ್ಮವರು ಕರ್ನಾಟಕದಲ್ಲಿ ಸಂಪಾದಿಸಿದ ಹಣವನ್ನೆಲ್ಲ ಶ್ರೀಲಂಕಾಗೆ ಹೋಗಿ ಕಳೆಯುತ್ತಿದ್ದಾರೆ. ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿದರೆ ನಮ್ಮ ದುಡ್ಡು ನಮ್ಮಲ್ಲೇ ಉಳಿಯುತ್ತದೆ. ಹಣವೊಂದಿದ್ದರೆ ಕ್ಯಾಸಿನೋದಲ್ಲಿ ಎಲ್ಲ ಸಿಗುತ್ತದೆ ಎಂದು ಹೇಳಿರುವ ಬಗ್ಗೆ ವರದಿಯಾಗಿದೆ.
ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ನಾವು ಜಮೀರ್ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ನಾವು ಕಾಂಗ್ರೆಸ್ ಪರ ಇದ್ದು ಸರ್ಕಾರ ಮಾಡಿದ್ದವರು. ನಾವು ಯಾಕೆ ಅವರನ್ನು ಟಾರ್ಗೆಟ್ ಮಾಡ್ತೀವಿ ಎಂದು ಈ ವೇಳೆ ಸುದ್ಧಿಗಾರರನ್ನು ಪ್ರಶ್ನಿಸಿದ್ದಾರೆ.
ಕ್ಯಾಸಿನೋಗೆ ಜಮೀರ್ ಒಬ್ಬರೇ ಹೋಗಿಲ್ಲ. ಒಂದು ಟೀಂ ಹೋಗಿರುತ್ತೆ. ಎಲ್ಲರ ಪಾಸ್ ಪೋರ್ಟ್ ತೆಗೆದುಕೊಂಡರೆ ಎಲ್ಲರ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತೆ. ಇದೆಲ್ಲದರ ಬಗ್ಗೆ ತನಿಖೆಯಾಗಬೇಕು. ಸರ್ಕಾರ ತನ್ನ ತಪ್ಪು ಮುಚ್ಚಿಡಲು ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣ ಆರಂಭಿಸಿತು.
ಇದೀಗ ಡ್ರಗ್ ಮಾಫಿಯಾ ವಿಚಾರ ಆರಂಭಿಸಿದೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು. ಜನರ ಗಮನ ಬೇರೆಡೆ ಸೆಳೆಯುವ ತಂತ್ರ. ರಾಜ್ಯದಲ್ಲಿ ಕಷ್ಟಕರ ಸಮಸ್ಯೆಗಳಿವೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ಶಾಸಕ ಸುರೇಶ್ ಗೌಡ ಸರಕಾರದ ವಿರುದ್ಧ ಆರೋಪ ಮಾಡಿರುವುದಾಗಿ ವರದಿಯಾಗಿದೆ.
Comments are closed.