ಕರ್ನಾಟಕ

ಕಸ್ಟಡಿ ಅವಧಿ ಮುಕ್ತಾಯ :ಮಾದಕ ನಟಿಯರಾದ ರಾಗಿಣಿ ಹಾಗೂ ಸಂಜನಾಗೆ ಜೈಲಾ.. ಬೇಲಾ..? ವ್ಯಾಪಕ ಚರ್ಚೆ

Pinterest LinkedIn Tumblr

ಬೆಂಗಳೂರು,ಸೆಪ್ಟಂಬರ್.14 : ಸ್ಯಾಂಡಲ್ ವುಡ್ ಡ್ರಗ್‌ ದಂಧೆ ಆರೋಪದಲ್ಲಿ ಸಿಲುಕಿ ಸಿಸಿಬಿ ವಶದಲ್ಲಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರಿಗೆ ಮಾದಕ ವಸ್ತು ಪ್ರಕರಣವಾಗಿರುವುದರಿಂದ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಇಬ್ಬರು ನಟಿಯರಿಗೂ ಪರಪ್ಪನ ಅಗ್ರಹಾರ ಜೈಲು ಖಚಿತ ಎಂಬ ಮಾತು ಕೇಳಿ ಬರುತ್ತಿದೆ.

ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಲುಕಿ ಸಿಸಿಬಿ ವಶದಲ್ಲಿರುವ ರಾಗಿಣಿ ಅವರ 12 ದಿನದ ಹಾಗೂ ಸಂಜನಾ ಅವರ ಒಂದು ವಾರದ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದು, ಈ ಇಬ್ಬರನ್ನು ಕೆಸಿಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.

ಡ್ರಗ್ಸ್​ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಯ ಪೊಲೀಸ್ ಕಸ್ಟಡಿ ಇಂದು ಅಂತ್ಯವಾದ ಬೆನ್ನಲ್ಲೇ ಇದೀಗ ನಟಿಯರಾದ ರಾಗಿಣಿ, ಸಂಜನಾ ಸೇರಿ ಆರು ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ರಾಗಿಣಿ, ಸಂಜನಾ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಮಧ್ಯಾಹ್ನದ ಬಳಿಕ ಎಲ್ಲಾ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಿಸಿಎಚ್ 33 ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗುವುದು. ಬಹುತೇಕ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಕೇಳೋದು ಅನುಮಾನ ಎನ್ನಲಾಗಿದೆ.

ಇದೇ ವೇಳೆ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಲುಕಿರುವ ಸ್ಯಾಂಡಲ್‍ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಅವರಿಗೆ ಜೈಲಾ.. ಬೇಲಾ..? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭಗೊಂಡಿದೆ.

ಒಂದು ವೇಳೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯವರನ್ನು ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳದಿದ್ದರೆ ಅಥವಾ ಕೇಳಿದರೂ ನ್ಯಾಯಾಲಯ ಕಸ್ಟಡಿಗೆ ನೀಡದೆ ಇದ್ದರೆ ಸಂಜನಾ ಗಲ್ರಾನಿ ಮತ್ತು ರಾಗಿಣಿ ಜಾಮೀನು ಕೋರಿ ಅರ್ಜಿ ಸಲ್ಲಿಸ ಬಹುದು.

ಆದರೆ, ಅರ್ಜಿಗೆ ಸಿಸಿಬಿ ಪೊಲೀಸರು ಆಕ್ಷೇಪಣೆ ಸಲ್ಲಿಸಬೇಕು ಮತ್ತು ಈ ಕುರಿತು ವಾದ-ಪ್ರತಿವಾದ ನಡೆಯ ಬೇಕು. ಈ ಹಿನ್ನೆಲೆಯಲ್ಲಿ ನಟಿಯರಿಗೆ ಸೋಮವಾರವೇ ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ.

ಇಬ್ಬರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಎಂದು ವರದಿ ಬಂದಿದೆ. ನಂತರ ಅವರನ್ನು ಅಲ್ಲಿಂದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆತರಲಾಯಿತು. ಇಂದು ಮಧ್ಯಾಹ್ನ ಅಥವಾ ಸಂಜೆ ಇವರ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಬರಲಿದ್ದು, ಹೆಚ್ಚುವರಿ ವಿಚಾರಣೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ಕೇಳುತ್ತಾರ? ಅಥವಾ ನ್ಯಾಯಾಲಯದಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಾರಾ ಎಂಬ ಕುತೂಹಲ ಮೂಡಿಸಿದೆ.

ಬಂಧಿತರಾಗಿರುವ ಆರೋಪಿಗಳು ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಟಿ ಸಂಜನಾ ಬಿಟ್ಟು ಉಳಿದೆಲ್ಲಾ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಮತ್ತೊಂದು ಮೂಲದಿಂದ ಲಭ್ಯವಾಗಿದೆ.

ಆರೋಪಿಗಳ ಜಾಮೀನು ಅರ್ಜಿ ಮುಂದೂಡೋದು, ತಿರಸ್ಕಾರ ಮಾಡೋದು ಕೋರ್ಟ್ ಗೆ ಬಿಟ್ಟ ವಿಚಾರ. ಆದರೆ ಇವರಿಬ್ಬರು ನಟಿಯರು ಜೈಲು ಸೇರುವುದು ಖಚಿತ ಎನ್ನಲಾಗಿದ್ದು, ಹಾಗೇನಾದರೂ ಆದರೆ, ಡ್ರಗ್ಸ್ ಕೇಸ್​ನಲ್ಲಿ ಜೈಲು ಸೇರೋ ಮೊದಲ ಸ್ಯಾಂಡಲ್​ವುಡ್ ಸೆಲಬ್ರಿಟಿಗಳು ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಆಗಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿರುವ ತಾರೆಯರ ಪೈಕಿ ಯಾರೂ ಜೈಲು ಸೇರಿರಲಿಲ್ಲ. ಆದರೆ, ರಾಗಿಣಿ ಮತ್ತು ಸಂಜನಾ ಈ ದಾಖಲೆ ಅಳಿಸಿ ಹಾಕುವ ಸಾಧ್ಯತೆ ಕಂಡು ಬರುತ್ತಿದೆ ಎಂಬ ಚರ್ಚೆ ಕೂಡ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

Comments are closed.