ಅಂತರಾಷ್ಟ್ರೀಯ

ಚಿತ್ರರಂಗದ ಮೇರು ನಟ ಅನಂತ್ ನಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ : ಈ ಬಗ್ಗೆ ವಿಶೇಷ ವರದಿ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.04 : ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟ, ಮೇರು ನಟ ಅನಂತ್ ನಾಗ್ ಅವರಿಗೆ ಇಂದು (ಸೆಪ್ಟಂಬರ್.04) ಜನ್ಮದಿನದ ಸಂಭ್ರಮ.

72ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಪ್ತಭಾಷಾ ನಟ ಶ್ರೀ ಅನಂತ್ ನಾಗ್ ಅವರಿಗೆ ಅನಂತ್ ನಾಗ್ ಅವರ ಆಪ್ತ ಸ್ನೇಹಿತ, ಒಡಹುಟ್ಟಿದ ಸಹೋದರನ ಸ್ಥಾನಲ್ಲಿರುವ ತುಳು, ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ಖ್ಯಾತ ಹಾಡುಗಾರರು ಆಗಿರುವ ದುಬೈಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರು ಹಾರ್ದಿಕ ಶುಭಾಶಯವನ್ನು ಕೋರಿದ್ದಾರೆ.

ಇದೇ ವೇಳೆ ಶ್ರೀ ಹರೀಶ್ ಶೇರಿಗಾರ್ ಅವರ ಮಾಲಕತ್ವದ ದೇಶವಿದೇಶಗಳಲ್ಲಿ ಜನಮನ್ನಣೆ ಗಳಿಸಿರುವ  ಕನ್ನಡಿಗವರ್ಲ್ಡ್ ಡಾಟ್ ಕಾಮ್ (www.kannadigaworld.com) ಸುದ್ಧಿ ಮಾಧ್ಯಮವು ಕೂಡ ಶ್ರೀ ಅನಂತ್ ನಾಗ್ ಅವರಿಗೆ ಹಾರ್ದಿಕ ಶುಭಾಶಯವನ್ನು ಸಲ್ಲಿಸುತ್ತಿದೆ.

ಅನಂತನಾಗ್(ಅನಂತ್ ನಾಗರಕಟ್ಟೆ) ಅವರ ಬಗ್ಗೆ….

ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ತಮ್ಮ ಸ್ಫುರದ್ರೂಪ ಮತ್ತು ಸಹಜ ನಟನೆಯಿಂದ ಭಾರತದಾದ್ಯಂತ ಅಪರೂಪದ ನಟ ಎಂದು ಹೆಸರಾದವರು ಅನಂತನಾಗ್. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅನಂತ್ ನಾಗ್ ಅವರು ಕನ್ನಡ, ಹಿಂದಿ, ಮರಾಠಿ, ತೆಲುಗು, ಒಂದು ಇಂಗ್ಲೀಷ್ ಸೇರಿದಂತೆ 200ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಜನಪ್ರಿಯ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಇತ್ತೀಚಿಗೆ ದುಬಾಯಿಯ ಖ್ಯಾತ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ (ಆಕ್ಮೆ ಮೂವೀಸ್) ನಿರ್ಮಾಣದ “ಇಂಗ್ಲೀಷ್” ಹೆಸರಿನ ತುಳು ಚಿತ್ರದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಕೋಸ್ಟಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ 4, 1948ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ, ಕೊಂಕಣಿ ಮತ್ತು ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು. ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್ ಇವರಿಬ್ಬರೂ ಸಹ ಖ್ಯಾತ ಕಲಾವಿದರು.

ಸಪ್ತಭಾಷಾ ನಟ :

ಚಿತ್ರರಂಗದಲ್ಲಿ ಅವರಿವರನ್ನು “ಪಂಚ ಭಾಷಾ ತಾರೆ” ಎಂದು ಕರೆಯುವುದುಂಟು, ಆದರೆ ಅನಂತನಾಗ್ ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜೃಂಭಿಸಿದ್ದಾರೆ. ಕನ್ನಡದಲ್ಲಿ ಹೇಗೋ ಹಾಗೆಯೇ ಹಿಂದಿಯಲ್ಲಿ ಸಹ ಅನೇಕ ಸ್ಮರಣೀಯ ಚಿತ್ರಗಳನ್ನು ನೀಡಿದ್ದಾರೆ. [೩]

ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಲ್ಲಿ..

ಅನಂತನಾಗ್ ಅವರು ಶ್ಯಾಂ ಬೆನೆಗಲ್ ಅವರ ‘ಅಂಕುರ್’ ಚಿತ್ರದಿಂದ ಚಿತ್ರರಂಗಕ್ಕೆ ಬಂದವರು. ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್, ಕೊಂಡುರಾ ಮತ್ತು ರಾತ್ ಸೇರಿದಂತೆ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ. ಕೆಲವೊಂದು ಪಾತ್ರಗಳಿಗೆ ಅನಂತ್ ಬೇಕೇ ಬೇಕು ಎಂದು ಬಯಸುವ ಚಿತ್ರರಂಗದ ಪ್ರಸಿದ್ಧರು ಎಲ್ಲೆಡೆಯ ಮೂಲೆ ಮೂಲೆಗಳಲ್ಲಿದ್ದಾರೆ.

ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಾಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಇವೆಲ್ಲಾ ಯಾರೋ ಒಬ್ಬ ನಟರು ಬಂದು ಅಭಿನಯಿಸಿ ಹೋದರು ಎಂಬಂತಹ ಪಾತ್ರಗಳಲ್ಲದೆ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾದ ಚಿತ್ರಗಳು ಎಂಬುದನ್ನು ನಾವು ಗಮನಿಸಬೇಕು.

ಅನಂತ್ ಅವರನ್ನು ಎಷ್ಟು ವಿಭಿನ್ನವಾಗಿ ಬೇಕಿದ್ದರೂ ಬಳಸಬೇಕೆಂಬುದಕ್ಕೆ ‘ನಾನಿನ್ನ ಬಿಡಲಾರೆ’ ಚಿತ್ರ ಒಂದು ಅಪೂರ್ವ ನಿದರ್ಶನ. ‘ಬಯಲು ದಾರಿ’ ಚಿತ್ರದ ನಂತರದಲ್ಲಿ ಕನ್ನಡದ ಪ್ರಸಿದ್ಧ ನಿರ್ದೇಶಕ ಜೋಡಿ ದೊರೈ ಭಗವಾನರು ಅನಂತನಾಗ್ ಅವರನ್ನು ಗುತ್ತಿಗೆಗೆ ಹಿಡಿದಷ್ಟು ಒಂದಾದ ಮೇಲೊಂದು ಸುಂದರ ಚಿತ್ರಗಳನ್ನು ನಿರ್ಮಿಸಿದರು. ಅದರಲ್ಲೂ ಅನಂತನಾಗ್ ಲಕ್ಷ್ಮೀ ಜೋಡಿ ಅಂತೂ, ಇವರು ನಿಜ ಜೀವನದಲ್ಲಿ ಸತಿ ಪತಿಗಳು ಎಂಬ ಹೃದ್ಭಾವ ಮೂಡಿಸುವಷ್ಟು ಸುಂದರ ಪಾತ್ರಗಳಲ್ಲಿ ಸುಂದರ ಜೋಡಿಯಾಗಿ ಕಂಗೊಳಿಸಿದರು.

‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ ಚಿತ್ರಗಳಲ್ಲಿ ಈ ಜೋಡಿ ಸಾಮಾನ್ಯ ಜನಜೀವನವನ್ನು ಪ್ರತಿಬಿಂಬಿಸಿದ ಪಾತ್ರಗಳು ಅವಿಸ್ಮರಣೀಯ.

‘ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ಬಾಡದ ಹೂ’, ‘ಜನ್ಮಜನ್ಮದ ಅನುಬಂಧ’, ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಇಂತದ್ದೇ ಮನಮುಟ್ಟುವ ಚಿತ್ರಗಳ ಸಾಲಿಗೆ ಸೇರಿದಂತಹವು.

ಅನಂತ್ ನಾಗ್ ತಾವು ಅಷ್ಟೊಂದು ದೊಡ್ಡ ನಟರಾದರೂ ಇತರ ನಾಯಕರು ಪ್ರಧಾನವಾಗಿದ್ದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲು ಎಂದೂ ಹಿಂಜರಿದವರಲ್ಲ. ರಾಜ್ ಕುಮಾರ್ ಜೊತೆಗೆ ‘ಕಾಮನಬಿಲ್ಲು’,ವಿಷ್ಣುವರ್ಧನರೊಡನೆ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ರವಿಚಂದ್ರನ್ ಜೊತೆ ‘ರಣಧೀರ’, ಶಾಂತಿಕ್ರಾಂತಿ’ ಇವೇ ಮುಂತಾದ ಅನಂತ್ ನಟಿಸಿದ ಅನೇಕ ಚಿತ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.

‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರವಹಿಸಿದ್ದರೂ ಚಿತ್ರದ ಚೌಕಟ್ಟಿನಲ್ಲಿ ಅವರು ಪ್ರಧಾನವಾಗಿ ಎದ್ದು ಕಾಣುತ್ತಾರೆ. ಭಾರತದ ಖ್ಯಾತ ಧಾರಾವಾಹಿಗಳಲ್ಲೊಂದಾದ ತಮ್ಮ ಸಹೋದರ ದಿವಂಗತ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಪ್ರಸಿದ್ಧ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.

ಅನಂತ್ ಯಾವುದೇ ಪಾತ್ರವಾದರೂ, ಎಷ್ಟೇ ಚಿಕ್ಕ ಸ್ಪೇಸ್ ಇದ್ದರೂ ಅದರ ವ್ಯಾಪ್ತಿಯನ್ನು ವಿಸ್ತೃತವಾಗಿ ಪ್ರೇಕ್ಷಕನ ಅನುಭಾವಕ್ಕೆ ತರಬಲ್ಲ ಅಸಮಾನ್ಯ ನಟರೆನಿಸಿದ್ದು , ಎಲ್ಲೇ ಇದ್ದರೋ, ಹೇಗೇ ಇದ್ದರೂ, ಯಾವುದೇ ಸಣ್ಣ ಪಾತ್ರವೇ ಇದ್ದರೂ ಯಾವುದೇ ಸೀಮೆಗಳ ಬಂಧನವಿಲ್ಲದೆ ಅನಂತರಾಗಿರುವವರು.

ಇವರಿಗೆ ಲಭಿಸಿರುವ ಪ್ರಶಸ್ತಿ – ಪುರಸ್ಕಾರ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ಅತ್ಯುತ್ತಮ ನಟ – ಮಿಂಚಿನ ಓಟ (1979-80)
ಅತ್ಯುತ್ತಮ ನಟ – ಹೊಸ ನೀರು (1985-86)
ಅತ್ಯುತ್ತಮ ನಟ – ಅವಸ್ಥೆ (1987-88)
ಅತ್ಯುತ್ತಮ ನಟ – ಗಂಗವ್ವ ಗಂಗಾಮಾಯಿ (1994-95)
ಎರಡನೆಯ ಅತ್ಯುತ್ತಮ ಚಲನಚಿತ್ರ – ಮಿಂಚಿನ ಓಟ (1979-80) [ಶಂಕರ ನಾಗ್ ಜೊತೆ]
ವಿಷ್ಣುವರ್ಧನ ಪ್ರಶಸ್ತಿ (2010)
ಫಿಲಂಫೇರ್ ಅವಾರ್ಡ ಕನ್ನಡ

ಅತ್ಯುತ್ತಮ ನಟ – ನಾ ನಿನ್ನ ಬಿಡಲಾರೆ (1979)
ಅತ್ಯುತ್ತಮ ನಟ – ಬರ (1982)
ಅತ್ಯುತ್ತಮ ನಟ – ಹೆಂಡ್ತಿಹೇಳ್ಬೇಡಿ (1989)
ಅತ್ಯುತ್ತಮ ನಟ – ಉದ್ಭವ (1990)
ಅತ್ಯುತ್ತಮ ನಟ – ಗೌರಿ ಗಣೇಶ (1991)
ಅತ್ಯುತ್ತಮ ನಟ – ಗೋದಿ ಬಣ್ಣ ಸಾಧಾರಣ ಮೈಕಟ್ಟು (2016)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ – “ನನ್ನ ತಮ್ಮ ಶಂಕರ”
ರಾಜ್ಯೋತ್ಸವ ಪ್ರಶಸ್ತಿ (2007).

Comments are closed.