ಕರಾವಳಿ

ಮರವಂತೆ ಶ್ರೀ ವರಾಹಸ್ವಾಮಿ ದೇವಳದಲ್ಲಿ ಜಾತ್ರೆ; ಸಮುದ್ರ, ನದಿ ಸ್ನಾನ ಕ್ಷೇತ್ರದ ವಿಶೇಷ ನಂಬಿಕೆ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಮರವಂತೆಯ ಕಾರಣಿಕ ದೇವಸ್ಥಾನವೊಂದರಲ್ಲಿ ಪ್ರತಿವರ್ಷ ನಡೆಯುವ ಜಾತ್ರೆ ಐತಿಹಾಸಿಕ ಹಿನ್ನೆಲೆಯುಳ್ಳದ್ದು. ಮರವಂತೆಯ ಶ್ರೀ ವರಾಹ ಸ್ವಾಮಿ ದೇವರ ಜಾತ್ರೆ ಕರ್ಕಾಟಕ ಅಮಾವಾಸ್ಯೆಯ ದಿನ ಸಂಭ್ರಮ ಸಡಗರದಿಂದ ನಡೆಯುತ್ತೆ. ನದಿ ಹಾಗೂ ಸಮುದ್ರದ ನಡುವೆ ಕಂಡುಬರುವ ಪ್ರಕೃತಿ ರಮಣೀಯವಾದ ಧಾರ್ಮಿಕ ಕ್ಷೇತ್ರ ಇದಾಗಿದ್ದು, ಕರ್ಕಾಟಕ ಅಮವಾಸ್ಯೆಯಂದು ಜಾತ್ರೆಗೆ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರು ಸಮುದ್ರ ಹಾಗೂ ದೇವಸ್ಥಾನದ ಎದುರಿನ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುವ ನಂಬಿಕೆ ಬಹಳ ವಿಶಿಷ್ಟವಾದದು.

ಕರ್ಕಾಟಕ ಅಮವಾಸ್ಯೆಯಂದು ಇಲ್ಲಿ ಬಂದು ಸಮುದ್ರ ಸ್ನಾನ ಮಾಡಿದರೆ ರೋಗ ರುಜಿನಾದಿ ರೋಗಗಳನ್ನು ವರಾಹ ಸ್ವಾಮಿ ಪರಿಹರಿಸುತ್ತಾನೆಂಬ ನಂಬಿಕೆ ಇದೆ. ಹಿಂದಿನಿಂದಲೂ ಮೀನುಗಾರರು ಹಾಗೂ ಕೃಷಿಕರು ಕ್ಷೇತ್ರವನ್ನು ಆರಾಧಿಸಿಕೊಂಡು ಬಂದಿದ್ದಾರೆ. ಶ್ರೀ ದೇವರಿಗೆ ಪ್ರಕೃತಿ ವಿಕೋಪವನ್ನು ತಡೆಯುವ ಶಕ್ತಿ ಇದೆ ಎನ್ನುವ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಬೆಳಿಗ್ಗೆನಿಂದಲೂ ಬಿಸಿಲು ವಾತವರಣವಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು. ಉತ್ಸವಕ್ಕೆ ಪೂರ್ವಭಾವಿಯಾಗಿ ಸಿದ್ದತಾ ಕಾರ್ಯ ಒಂದು ವಾರದಿಂದ ನಡೆದಿತ್ತು.

ಮತ್ಸ್ಯ ಸಂಪತ್ತು ಕರುಣಿಸಲು ಮತ್ತು ಮೀನುಗಾರರ ಸಂರಕ್ಷಕನಾಗಿಯೂ ಹಾಗೂ ಅಕಾಲಿಕ ಮಳೆ ಮುಂತಾದವುಗಳನ್ನು ತಡೆದು ಸಮೃದ್ಧ ಕೃಷಿಯನ್ನು ಕರುಣಿಸುವ ಶಕ್ತಿ ವರಾಹ ಸ್ವಾಮೀ ದೇವರಿಗೆ ಇದೆ ಎನ್ನುತ್ತಾರೆ ತಲೆಮಾರುಗಳಿಂದ ಕ್ಷೇತ್ರವನ್ನು ನಂಬಿಕೊಂಡು ಬಂದ ಭಕ್ತ ವೃಂದದವರು.ಗುರುವಾರ ದೇವಳದಲ್ಲಿ ನಡೆದ ಜಾತ್ರೋತ್ಸವ ಪ್ರಯುಕ್ತ ದೇವಳದಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ನಡೆದು ಪ್ರಸಾದ, ನೈವೇದ್ಯಗಳನ್ನು ಭಕ್ತರಿಗೆ ವಿತರಿಸಲಾಯಿತು. ಅಲ್ಲದೆ ಸಾವಿರಾರು ಜೋಡಿ ನವ ದಂಪತಿಗಳು ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ಬಂದು ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ, ದೇವಾಲಯದ ಸಮೀಪದ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಮಹಾರಾಜಸ್ವಾಮಿ ಶ್ರೀ ವರಾಹ ದೇವರಿಗೆ ಪೂಜೆ ಸಲ್ಲಿಸಿದರು. ದೂರದೂರುಗಳಿಂದ ಭಕ್ತಾದಿಗಳು ಆಗಮನವಾಗಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಮನೆಮಾಡಿತ್ತು.

ಕಳೆದ ಕೆಲವು ವರ್ಷಗಳಿಂದ ದೇವಾಲಯಕ್ಕೆ ಸಾವಿರಾರು ರೂಪಾಯಿ ವೆಚ್ಚದಲ್ಲಿ ತುಮಕೂರಿನ ಹೂವಿನ ವ್ಯಾಪಾರಿ ತಂಗರಾಜ್ ಅವರ ತಂಡ ವಿಶೇಷ ಹೂವಿನ ಶೃಂಗಾರ ಸೇವೆ ಸಲ್ಲಿಸುತ್ತಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ಹಾಗೂ ಸಂಗಡಿಗರು, ಉಪಾಧಿವಂತರು ಸಂಪೂರ್ಣ ವ್ಯವಸ್ಥೆ ನಿರ್ವಹಿಸಿದರು. ಕುಂದಾಪುರ ಉಪವಿಭಾಗದ ವಿವಿಧ ಠಾಣೆ ಪೊಲೀಸರು, ಸ್ವಯಂಸೇವಕರು ಜನಪ್ರವಾಹವನ್ನು ಎದುರಿಸಲು, ದೇವರ ದರ್ಶನ, ಹರಕೆ ಸಲ್ಲಿಕೆಗೆ ಸುಸೂತ್ರ ಅವಕಾಶ ಕಲ್ಪಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಏರ್ಪಡಿಸಿದ್ದರು.

ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಬೈಂದೂರು ಸಿಪಿಐ ಪರಮೇಶ್ವರ್ ಗುನಗ, ಗಂಗೊಳ್ಳಿ ಪಿಎಸ್ಐ ವಾಸಪ್ಪ ನಾಯ್ಕ್, ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್., ವಿವಿಧ ಠಾಣೆಯ ಪಿಎಸೈಯವರಾದ ಸುದರ್ಶನ್, ಶಿವಕುಮಾರ್, ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.