ಕರಾವಳಿ

ಉಡುಪಿಯಲ್ಲಿ ‘ಮಂಡೂಕ ಕಲ್ಯಾಣೋತ್ಸವ’: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ!

Pinterest LinkedIn Tumblr

ಉಡುಪಿ: ಅಲ್ಲೊಂದು ವಿಶೇಷ ವಿವಾಹ ಸಂಭ್ರಮ ಮೇಳೈಸಿತ್ತು. ವರನ ಹೆಸರು ವರುಣ, ವಧುವಿನ ಹೆಸರು ವರ್ಷಾ. ಶಾಸ್ತ್ರೋಕ್ತವಾಗಿ ನಡೆದ ಈ ವಿವಾಹದ ಉದ್ದೇಶ ಅಂದರೆ ಮಳೆ ಬರಬೇಕು ಎಂದು. ಈ ಕುರಿತ ಒಂದು ವರದಿಯಿಲ್ಲಿದೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ ಮತ್ತು ಪಂಚರತ್ನಾ ಸೇವಾ ಟ್ರಸ್ಟ್‌ ಮಳೆಗಾಗಿ ಪ್ರಾರ್ಥಿಸುವ ನಿಟ್ಟಿನಲ್ಲಿ ಕಪ್ಪೆ ಮದುವೆ ಆಯೋಜನೆ ಮಾಡಿತ್ತು. ಶನಿವಾರ ಮಧ್ಯಾಹ್ನ ಉಡುಪಿ ಕಿದಿಯೂರು ಹೊಟೆಲ್ ಪ್ರಾಂಗಣದಲ್ಲಿ ಗಂಡು ಕಪ್ಪೆ ಹಾಗೂ ಹೆಣ್ಣು ಕಪ್ಪೆಗೆ ಸಕಲ ಶಾಸ್ತ್ರಗಳೊಂದಿಗೆ ವಿವಾಹ ನಡೆಸಿ ಮಂಡೂಕ ಕಲ್ಯಾಣೋತ್ಸವದ ಮೂಲಕ ಮಳೆಗಾಗಿ ವಿಶೇಶ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಗಂಡು ಹಾಗೂ ಹೆಣ್ಣು ಕಪ್ಪೆಯನ್ನು ಮೂರು ಚಕ್ರದ ಸೈಕಲ್’ನಲ್ಲಿ ಕೂರಿಸಿ ಮಾರುತಿ ವಿಥಿಕಾ ಸರ್ಕಲ್ ನಾಗರಿಕ ಸಮಿತಿಯ ಕಚೇರಿಯಿಂದ ಕಿದಿಯೂರು ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದವರೆಗೆ ಮೆರವಣಿಗೆ ಮೂಲಕ ಕರೆತರಲಾಗಿತ್ತು. ಗಂಡು ಕಪ್ಪೆಗೆ ವರುಣ ಎಂದು ಹೆಣ್ಣು ಕಪ್ಪೆಗೆ ವರ್ಷಾ ಎಂದು ನಾಮಕರಣ ಮಾಡಿ ವಿವಾಹ ಆಹ್ವಾನ ಪತ್ರಿಕೆ ಸಿದ್ದಗೊಳಿಸಲಾಗಿತ್ತು. ಸ್ವಸ್ತಿಶ್ರೀ ವಿಕಾರಿ ಸಂವತ್ಸರ ಮಿಥುನ ಮಾಸ ದಿನ 24 ಸಲುವ ಜ್ಯೇಷ್ಠ ಶುದ್ಧ 12.05ಕ್ಕೆ ಒದಗುವ ಸಿಂಹ ಲಗ್ನ ಸುಮುಹೂರ್ತದಲ್ಲಿ ಉಡುಪಿ ಕಲ್ಸಂಕದ ಸುಪುತ್ರ ಚಿ. ವರುಣ ಮತ್ತು ಕೊಳಲಗಿರಿ ಕೀಳಿಂಜೆಯ ಸುಪುತ್ರಿ ಚಿ.ಸೌ. ವರ್ಷಾ ವಿವಾಹ ಮಹೋತ್ಸವ ನಡೆಯಿತು.

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಗಂಡು ಕಪ್ಪೆಯನ್ನು , ರಾಜು ಪೂಜಾರಿ ಹೆಣ್ಣುಕಪ್ಪೆಯನ್ನು ಹಿಡಿದು ವಿವಾಹ ನೆರವೇರಿಸಿದರು. ಹೆಣ್ಣು ಕಪ್ಪೆಗೆ ಕರಿಮಣಿ, ಕಾಲು ಉಂಗುರ, ತೊಡಿಸಿ ಆರತಿ ಮಾಡಲಾಯಿತು. ಮದುವೆಗೆ ಆಗಮಸಿದವರಿಗೆ ಲಘುಪಹಾರ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಭಜನಾ ಒಕ್ಕೂಟದ ಮಹಿಳೆಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಸಹಕರಿಸಿದರು. ‘ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ’ ಎಂದು ಹೇಳಲಾಗಿತ್ತು.

ಕಪ್ಪೆ ವಿವಾಹ ಮೂಢನಂಬಿಕೆ ಪದ್ಧತಿ ಎಂಬ ಟೀಕೆ ಕೇಳಿಬರುತ್ತಿದ್ದು ಮಳೆಗಾಗಿ ಕಪ್ಪೆ ಮದುವೆ ಮಾಡಿದ್ದೇವೆ. ಸಂಪ್ರದಾಯ ಮತ್ತು ನಂಬಿಕೆಯ ಆಧಾರದಲ್ಲಿ ಈ ಕಾರ್ಯವನ್ನು ಮಾಡಿದ್ದೇವೆ. ನಾವು ಹೆಚ್ಚಾಗಿ ನಂಬಿಕೆಯ ಮೇಲೆಯೇ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತೇವೆ. ಜಿಲ್ಲಾದ್ಯಂತ ಜಲಕ್ಷಾಮ ಹೆಚ್ಚಾಗಿದ್ದು ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಹೇಳಿದರು.

Comments are closed.