ಕರಾವಳಿ

ಗರ್ಭಧಾರಣೆಯ ಸಮಯದಲ್ಲಿ ಶರೀರದ ಬಣ್ಣ ಬದಲಾಗಲು ಕಾರಣಗಳು…!

Pinterest LinkedIn Tumblr

ಗರ್ಭಧಾರಣೆಯು ನಿಮ್ಮ ಜೀವನದಲ್ಲಿ ಹೊಸ ಅತಿಥಿಯ ಆಗಮನವೆಂಬ ಬದಲಾವಣೆ ಮಾತ್ರವಲ್ಲ ಶರೀರದ ಆಂತರಿಕ ಹಾಗೂ ಬಾಹ್ಯ ರೂಪದಲ್ಲೂ ಹಲವಾರು ಬದಲಾವಣೆಗಳಿಗೆ ಕಾರಣವಾಗುತ್ತದೆ. ಹೊಸ ಜೀವವೊಂದರ ಸಾನಿಧ್ಯದೊಂದಿಗೆ ನಿಮ್ಮ ಶರೀರವು ಹಲವಾರು ಹಾರ್ಮೋನುಗಳ ಸ್ರವಿಕೆ, ಶರೀರದ ಕ್ರಿಯಾತ್ಮಕ ಚಟುವಟಿಕೆಗಳು ಹಾಗೂ ಮತ್ತಿತರ ಬದಲಾಗುವ ಘಟಕಗಳಿಂದ ಶರೀರದಲ್ಲಿ ಹಲವಾರು ಮಾರ್ಪಾಡುಗಳು ಉಂಟಾಗುತ್ತದೆ. ಶರೀರದ ಬದಲಾವಣೆಯಲ್ಲಿ ಅನೇಕ ಗರ್ಭಿಣಿ ಮಹಿಳೆಯರು ಮುಜುಗರ ಪಟ್ಟುಕೊಳ್ಳುವಂತೆ ಮಾಡುವ ಮತ್ತೊಂದು ಪ್ರಮುಖ ಬದಲಾವಣೆಯು ಅವರ ಶರೀರದ ಬಣ್ಣದಲ್ಲಾಗುವ ಮಾರ್ಪಾಡುಗಳು.

ಎಂದರೆ ನೀವು ಊಸರವಳ್ಳಿ ರೀತಿ ಬಣ್ಣ ಬದಲಾಯಿಸುವಂತಹ ಅಮಾನುಷ ಶಕ್ತಿಯನ್ನು ಗಳಿಸಿಕೊಂಡಿದ್ದೀರೆಂದು ನಾವು ಹೇಳುವುದಿಲ್ಲ; ಆದರೆ ಶರೀರದ ಕೆಲವು ಭಾಗಗಳು ಕಪ್ಪಾಗುವುದನ್ನು ನೀವು ಗಮನಿಸಿರಬಹುದು.

ಗಾಬರಿಯಾಗದಿರಿ.ಮೊದಲನೆಯದಾಗಿ ನಿಮ್ಮ ಚರ್ಮದ ಬಣ್ಣದ ಬದಲಾವಣೆಯ ಗರ್ಭಧಾರಣೆಯ ಸಮಯದಲ್ಲಾಗುವ ಪಿಗ್ಮೆಂಟೇಷನ್ ಎಂಬ ಕ್ರಿಯೆಯಿಂದಾಗಿದೆ ಎಂಬ ವಾಸ್ತವವನ್ನು ನೀವು ಅರಿತುಕೊಂಡರೆ ಒಳ್ಳೆಯದು. ಪಿಗ್ಮಂಟೇಷನ್ ಗೆ ಒಳಗೊಂಡ ಶರೀರ ಭಾಗಗಳು ಕಪ್ಪಾಗುವುದು ಹಾಗೂ ಮೊದಲೇ ಕಪ್ಪಾಗಿದ್ದ ಭಾಗಗಳು ಇನ್ನೂ ಗಾಢವರ್ಣಕ್ಕೆ ಒಳಗಾಗುವುದು. ಇದನ್ನು ಸರಿ ಪಡಿಸಬಹುದಾದರೂ ಅದೇನೆಂದು ಅರಿತುಕೊಳ್ಳುವುದು ನಿಮ್ಮ ಆತಂಕವನ್ನು ಕಡಿಮೆ ಮಾಡುವುದು.

ಎಲ್ಲಿ ಕಾಣಿಸಿಕೊಳ್ಳುವುದು ?
ಗರ್ಭಧಾರಣೆಯ ಸಮಯದ ಪಿಗ್ಮಂಟೇಷನ್ ಮೇಲ್ದುಟಿ, ಹಣೆ, ಗಲ್ಲ, ಕುತ್ತಿಗೆ ಮತ್ತು ಮೂಗಿನ ಮೇಲೆ ಕಪ್ಪು ಬಣ್ಣದ ಹೊದಿಕೆಯಂತೆ ಕಾಣಲ್ಪಡುವುದು. ಇದನ್ನು ಮೇಲಸ್ಮಾ ಎಂದು ಕರೆಯಲಾಗುವುದು. ದವಡೆಯ ಭಾಗಗಳು, ಕೈ- ಕಾಲುಗಳು,ಕಂಕುಳು, ಮೊಣಕಾಲುಗಳ ಹಿಂಭಾಗ ಅಥವಾ ಸೂರ್ಯ ರಶ್ಮಿ ತಗಲುವಂತಹ ಶರೀರದ ಎಲ್ಲ ಭಾಗಗಳಲ್ಲೂ ಪಿಗ್ಮೆಂಟೇಷನ್ ಉಂಟಾಗುತ್ತದೆ. ಮೊದಲೇ ಕಪ್ಪು ಬಣ್ಣದಿಂದ ಕೂಡಿದ ಮೊಲೆತೊಟ್ಟು, ಮಚ್ಚೆ ಹಾಗೂ ಗುಹ್ಯ ಭಾಗಗಳು ಇನ್ನೂ ಗಾಢವರ್ಣಕ್ಕೆ ತಿರುಗುತ್ತದೆ.

ಸರಿಪಡಿಸಲು ಸಾಧ್ಯವೇ ?
ಗರ್ಭಿಣಿಯರಿಗೆ ಇದರಿಂದ ಮುಕ್ತಿ ದೊರೆಯುವುದು ಅಸಾಧ್ಯವಾದರೂ, ತಾತ್ಕಾಲಿಕ ಶಮನ ಪಡೆಯಬಹುದು. ಇಂತಹ ಗಾಢವರ್ಣದ ಭಾಗಗಳನ್ನು ಕನ್ಸೀಲರ್ ನಿಂದ ಅಡಗಿಸಬಹುದು. ಪ್ರಸವದ ನಂತರ ಕೆಲವು ತಿಂಗಳುಗಳೊಳಗೆ ಇಂತಹ ಬಣ್ಣಗಳ ತೊಂದರೆಯೂ ತನ್ನಿಂದ ತಾನೇ ಮಾಯವಾಗುವುದು.

ಲಿನಿಯಾನಿಗ್ರ
ಸಾಮಾನ್ಯವಾಗಿ ಗರ್ಭಿಣಿಯರ ಉದರ ಭಾಗಗಳಲ್ಲಿ ಕಾಣಿಸಿಕೊಳ್ಳುವಂತಹ ಗೆರೆಗಳಿಗೆ ಲಿನಿಯಾನಿಗ್ರ ಎಂದು ಹೆಸರು. ಪ್ರಸವದ ನಂತರ ತನ್ನಿಂದ ತಾನೇ ಮಾಸಿ ಹೋಗುವಂತಹ ಈ ಗೆರೆಗಳು,ಗರ್ಭಿಣಿಯರಲ್ಲಿ ಕಂಡು ಬರುವ ಅಸಾಮಾನ್ಯ ಮೆಲಾನಿನ್ ಎಂಬ ವರ್ಣದ್ರವ್ಯದ ಉತ್ಪಾದನೆಯು ಈ ಗೆರೆಗಳ ಗೋಚರಕ್ಕೆ ಕಾರಣೀಭೂತವಾಗಿದೆ.

ಮುಂಜಾಗರೂಕತೆಗಳು
ಸೇವಿಸಿದ ಯಾವುದಾದರೂ ಮಾತ್ರೆಗಳು ಅಥವಾ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುವಂತಹ ಮಾತ್ರೆಗಳ ಬಳಕೆಯು, ಚರ್ಮದಲ್ಲಿ ಮೆಲನಿನ್ ವರ್ಣದ್ರವ್ಯಗಳ ಸ್ರವಿಕೆಗೆ ಕಾರಣವಾಗುತ್ತದೆ. ಮಾತ್ರವಲ್ಲದೆ ವ್ಯಾಕ್ಸಿಂಗ್‍ನಿಂದಾಗಿಯೂ, ಮೆಲಸ್ಮಾ ಎನ್ನುವಂತಹ ಕಂದು ಬಣ್ಣದ ಪ್ಯಾಚ್ಗಳು ಶರೀರದ ಅಥವಾ ಮುಖದ ಮೇಲೆ ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ನೀವು ಚರ್ಮದ ಮೇಲೆ ಬಳಸುವ ಯಾವುದೇ ಕ್ರೀಮುಗಳು ತುರಿಕೆ ಅಥವಾ ನವೆಯನ್ನುಂಟು ಮಾಡುವುದಿಲ್ಲವೆಂದು ಖಾತ್ರಿ ಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಪಿಗ್ಮಂಟೇಷನ್ ಹೆಚ್ಚಳದಿಂದ ಶರೀರವು ಕಪ್ಪಾಗಬಹುದು.

Comments are closed.