ಪುರಾಣಗಳು ಹೇಳುವಂತೆ ಹಥೀರಾಂ ಬಾಬಾಜಿ 500 ವರ್ಷಗಳ ಹಿಂದೆ ತಿರುಮಲದಲ್ಲಿ ವಾಸವಾಗಿದ್ದರು. ಅಲ್ಲಿ ಸಾಕ್ಷಾತ್ ಶ್ರೀ ವೆಂಕಟೇಶ್ವರ ಸ್ವಾಮಿಯೇ ಬಾಬಾಜಿಯೊಂದಿಗೆ ಕವಡೆ ಆಟ ಅಡಿರುವ ಬಗ್ಗೆ ಆಧಾರಗಳಿವೆ. ವೆಂಕಟೇಶ್ವರಸ್ವಾಮಿಯ ಪ್ರಸಾದವನ್ನೇ ಆಹಾರವಾಗಿ ತಿನ್ನುತ್ತಿದ್ದ ಅವರಿಗೆ ಪ್ರತಿದಿನ ಸುಮ್ಮನೆ ಪ್ರಸಾದವನ್ನು ನೀಡಲು ಒಪ್ಪಿಕೊಳ್ಳದ ದೇವಸ್ಥಾನದ ಅಧಿಕಾರಿಗಳು ಬಾಬಾಜಿಗೆ ಸೌದೆ ಒಡೆದರೆ ಮಾತ್ರ ಪ್ರಸಾದ ನೀಡುತ್ತೇವೆಂದು ನಿಬಂಧನೆ ವಿಧಿಸಿದರು.
ಆನೆಯಂತೆ ಬಲಿಷ್ಟವಾಗಿದ್ದ ಅವರು ಪ್ರಸಾದಕ್ಕಾಗಿ ಸೌದೆ ಒಡೆಯುತ್ತಿದ್ದರು. ಸ್ವಲ್ಪ ದಿನಗಳಾದ ನಂತರ ಆ ಕೆಲಸ ಮಾಡಲು ಅವರಿಗೆ ಕಷ್ಟವೆನಿಸಿತು. ಸಮಯವೆಲ್ಲಾ ವ್ಯರ್ಥವಾಗುತ್ತಿದೆ ಎನಿಸಿತು. ತಪಸ್ಸು ಮಾಡಬೇಕೆಂದು ನಿರ್ಣಯಿಸಿ ಪಾಪವಿನಾಶನಂ ಕಾಡಿಗೆ ಬಂದು ತಪ್ಪಸ್ಸನ್ನು ಪ್ರಾರಂಭಿಸಿದರು. ಆಗ ಹಸಿವನ್ನು ತಾಳಲಾರದೆ ಹತ್ತಿರದಲ್ಲೇ ಕಾಣಿಸಿದ ಎಲೆಗಳನ್ನು ಸೆವಿಸಿದರು. ತಿನ್ನಲು ರುಚಿಕರವಾಗಿದ್ದರಿಂದ ಆತುರದಿಂದ ಎಲೆಗಳನ್ನೆಲ್ಲಾ ತಿಂದು ಪಕ್ಕದಲ್ಲೇ ಇದ್ದ ಕೊಳದಲ್ಲಿದ್ದ ನೀರು ಕುಡಿದರು. ನಂತರ ಅವರಿಗೆ ಎಲೆಗಳನ್ನು ಸೇವಿಸಿದ್ದರಿಂದ ಏನಾದರೂ ತೊಂದರೆ ಆಗ ಬಹುದೇ ಎಂದು ಯೋಚಿಸತೊಡಗಿದರು. ಹೀಗೆ ಎಲೆಗಳನ್ನು ಸೇವಿಸಿಕೊಂಡೇ 12 ವರ್ಷಗಳ ಕಾಲ ತಪಸ್ಸು ಮಾಡಿ ಪೂರ್ಣಗೊಳಿಸಿದರು. ಹಲವು ಬಗೆಯ ಎಲೆಗಳಿದ್ದರೂ ಈ ಎಲೆಗಳನ್ನೇ ಸೇವಿಸಲು ವೆಂಕಟೇಶ್ವರಸ್ವಾಮಿಯ ಮಹಿಮೆಯೇ ಕಾರಣ ಇರಬಹುದು ಎನ್ನುತ್ತವೆ ಪುರಾಣಗಳು. ಈ ಎಲೆಗಳನ್ನು ರಾಮಭದ್ರ ಅಥವಾ ರಾಮಪತ್ರಿ ಎಂದು ಕರೆಯುತ್ತಾರೆ.
ಬೇರೆಲ್ಲೂ ಕಾಣಸಿಗದ ಈ ಜಾತಿಯ ಮರಗಳು ಶೇಷಾಚಲಂ ಕಾಡಿನಲ್ಲಿ ಮಾತ್ರ ಹೇರಳವಾಗಿ ಬೆಳೆಯುತ್ತವೆ. ಬಾಬಾಜಿ ತಪಸ್ಸು ಮಾಡಿದ ಪಾಪವಿನಾಶನಂ ಹತ್ತಿರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರವೇ ಅವರ ಸಮಾಧಿ ಇದೆ. ಅಲ್ಲಿಗೆ ಹೋಗುವ ಭಕ್ತರಿಗೆ ಈ ಎಲೆಗಳನ್ನು ಕೊಡುತ್ತಾರೆ. ಸಿಹಿ ಹಾಗೂ ಹುಳಿ ಎರಡೂ ರುಚಿಗಳನ್ನು ಹೊಂದಿರುವ ಈ ಎಲೆಗಳನ್ನು ಎಷ್ಟು ತಿಂದರೂ ಹಾನಿಯಾಗುವುದಿಲ್ಲ. ಸಂಪೂರ್ಣ ಆರೋಗ್ಯವಂತರಾಗುತ್ತೇವೆ ಎಂಬುದು ಸತ್ಯ.

Comments are closed.