ಕರಾವಳಿ

ಕಾಳಾವರ: ಸುಬ್ರಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಷಷ್ಟಿ ಮಹೋತ್ಸವ

Pinterest LinkedIn Tumblr

ಕೋಟೇಶ್ವರ: ತಾಲೂಕಿನ ಪುರಾತನ ಸುಬ್ರಮಣ್ಯ ದೇವಸ್ಥಾನವಾದ ಕೋಟೇಶ್ವರ ಸಮೀಪದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನ (ಸುಬ್ರಮಣ್ಯ)ದಲ್ಲಿ ಚಂಪಾ ಷಷ್ಟಿಯ ದಿನವಾದ ನ.೨೪ ಶುಕ್ರವಾರ ಷಷ್ಟಿ ಮಹೋತ್ಸವ ಸಂಭ್ರಮದಿಂದ ಜರುಗಿತು. ದೇವಸ್ಥಾನದಲ್ಲಿ ಬೆಳಿಗ್ಗೆ 3.30ರಿಂದಲೇ ಸಾವಿರಾರು ಜನರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಹರಕೆ ಸಮರ್ಪಿಸಿದರು.

ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಭಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಟಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯನಿಗೆ) ಸಿಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಈ ದಿನ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ಹರಕೆಗಳನ್ನು ನಾಗ ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು.

ಷಷ್ಟಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಡಿಯೂ ಇದೆ. ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದು, ಮುಂಜಾನೆಯಿಂದಲೇ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ದೇವಸ್ಥಾನದಿಂದ ಅನತಿ ದೂರದಲ್ಲೇ ಸರತಿ ಸಾಲಿನಲ್ಲಿ ಕಾದು ನಿಲ್ಲುವ ದೃಶ್ಯವೂ ಕಂಡುಬಂತು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಘೊಂಡರು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ್ ಎನ್ ಶೆಟ್ಟಿ ಹಾಗೂ ಸದಸ್ಯರು ಮತ್ತು ಅರ್ಚಕರು, ತಂತ್ರಿಗಳು ಉಪಸ್ಥಿತರಿದ್ದರು. ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಇವರಿಂದ ಭಕ್ತಾಧಿಗಳಿಗೆ ಮಜ್ಜಿಗೆ ವಿತರಣೆ ನಡೆಯಿತು.

ನ.25 (ಇಂದು) ರಂದು ಹಾಲಿಟ್ಟು ಸೇವೆ, ಮಂಡಲ ಸೇವೆ ಹಾಗೂ ತುಲಾಭಾರ ಸೇವೆ ಜರುಗಲಿದೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

 

Comments are closed.