ಕರಾವಳಿ

ಕುಡುಪು ಶ್ರೀ ಕ್ಷೇತ್ರದಲ್ಲಿ ಪಂಚಮಿ ಹಾಗೂ ಷಷ್ಠಿ ಮಹೋತ್ಸವ ಸಂಭ್ರಮ / ತೆಪ್ಪೋತ್ಸವ – ಕೆರೆಬಲಿ ಸೇವೆ ವಿಶೇಷ

Pinterest LinkedIn Tumblr

ಕುಡುಪು, ನವೆಂಬರ್ 24: ಇತಿಹಾಸ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪಂಚಮಿ ಉತ್ಸವ ಗುರುವಾರ ಸಂಭ್ರಮದಿಂದ ಜರಗಿತು. ನವೀಕರಣಗೊಂಡ ಗರ್ಭಗೃಹದಲ್ಲಿ ದೇವರಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನೇರವೇರಿಸಲಾಯಿತು.

ದೇವತಾ ಪೂಜಾ ಕಾರ್ಯವು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿದ್ದು, ಬಳಿಕ ಭಕ್ತಾಧಿಗಳಿಂದ ಅಂಗ ಪ್ರದಕ್ಷಿಣೆ (ಉರುಳು ಸೇವೆ ), ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ವಿವಿಧ ಅರ್ಚನೆಗಳು, ವಿಶೇಷ ಹರಿವಾಣ, ನಾಗಬನದಲ್ಲಿ ವಿಶೇಷ ನಾಗತಂಬಿಲ ಸೇವೆ, ನೈವೇದ್ಯ, ಮಧ್ಯಾಹ್ನ ಸರ್ವಾಭರಣ ಭೂಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಮಿಯ ಮಹಾಪೂಜೆ ನಡೆಯಿತು.

ಮುಂಜಾನೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ದೇಗುಲದ ಒಳಾಂಗಣದಲ್ಲಿ ಭಕ್ತರಿಂದ ಅಂಗಪ್ರದಕ್ಷಿಣಿ, ತೈಲಾಭ್ಯಂಜನ, ಅಪರಾಹ್ನ ಸರ್ವಾಭರಣ ಭೂಷೀತ ಶ್ರಿ ಅನಂತ ಪದ್ಮನಾಭ ದೇವರಿಗೆ ಪಂಚಮಿಯ ವಿಶೇಷ ಮಹಾಪೂಜೆ ಬಳಿಕ ನಡೆದ ಮಹಾಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ರಾತ್ರಿ ಸವಾರಿ ಬಲಿ, ಕಟ್ಟೆಪೂಜೆ, ಅಶ್ವವಾಹನೋತ್ಸವ, ಮೂರು ವರ್ಷಗಳ ಹಿಂದೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡ ಅತೀ ವಿಶಿಷ್ಟವೆನಿಸಿದ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ವಿಶೇಷವಾದ ತೆಪ್ಪೋತ್ಸವ, ದೇವರಿಗೆ ಅತ್ಯಂತ ಪ್ರೀತಿಯೆನಿಸಿದ ವಿಶೇಷ ಅಷ್ಟಾವಧಾನ ಸೇವೆ, ತಂಬಿಲ ಪಂಚಾಮೃತ ಸೇವೆ, ಎರಡನೇ ಬಲಿ ಚಂದ್ರ ಮಂಡಲೋತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ, ಹಾಗೂ ಭಕ್ತರಿಂದ ಬಟ್ಟಲು ಕಾಣಿಕೆಯೊಂದಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.

ಸಹಸ್ರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವರಿಗೆ ಬೆಳ್ಳಿಯ ಮೂರ್ತಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ದೇವಾಲಯದ ಹೊರಾಂಗಣದಲ್ಲಿ ಉರುಳು ಸೇವೆಯೊಂದಿಗೆ ಪಂಚಮಿ ಮಹೋತ್ಸವ ಜರುಗಿತು. ಆಡಳಿತ ಮಂಡಳಿಯ ಮೊಕ್ತೇಸರರು, ಕಾರ್ಯ ನಿರ್ವಹಣಾಧಿಕಾರಿ ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಇಂದು ಷಷ್ಠಿ ಬ್ರಹ್ಮರಥೋತ್ಸವ:

ಶುಕ್ರವಾರ ಕುಡುಪು ಶ್ರೀ ಆನಂತಪದ್ಮನಾಭ ದೇಗುಲದಲ್ಲಿ ವೈಭವದ ಷಷ್ಠಿ ಬ್ರಹ್ಮರಥೋತ್ಸವದೊಂದಿಗೆ ಷಷ್ಠಿ ಮಹೋತ್ಸವ ಸಮಾಪನಗೊಂಡಿತು. ಶ್ರೀ ದೇವರಿಗೆ ಉಷ:ಕಾಲ ಪೂಜೆ, ವಿಶೇಷ ನವಕ ಕಲಾಶಾಭಿಷೇಕ, ಪಂಚಾಮೃತ ಅಭಿಷೇಕ ವಿವಿಧ ಆರ್ಚನೆಗಳೊಂದಿಗೆ ನೆರವೇರಿತು. ಮಧ್ಯಾಹ್ನ ಒಂದು ಗಂಟೆಗೆ ಬಲಿ ಹೊರಟು ರಥಾರೋಹಣ, ಬ್ರಹ್ಮರಥೋತ್ಸವ ಜರಗಿತು. ನಾಳೆ ಜೋಡು ದೇವರ ಬಲಿ ಉತ್ಸವ ಸಂಪನ್ನಗೊಳ್ಳಲಿದೆ.

Comments are closed.