ತನ್ನ ತ್ವಚೆಯು ಇತರ ಮಹಿಳೆಯರಿಗಿಂತ ಹೊಳೆಯಬೇಕು, ಕಾಂತಿಯುತವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಆದರೆ ತುಂಬಾ ಕಲ್ಮಶ ಹೊಂದಿರುವ ವಾತಾವರಣದಲ್ಲಿ ಸುಂದರವಾಗಿರುವ ತ್ವಚೆಯನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ವಾತಾವರಣದಲ್ಲಿ ಧೂಳು ಮತ್ತು ಇತರ ಕಲ್ಮಶಗಳು ಚರ್ಮದಲ್ಲಿ ಬಂದು ನಿಲ್ಲುವುದು.
ಇದರಿಂದ ಚರ್ಮದಲ್ಲಿನ ರಂಧ್ರವು ಮುಚ್ಚಿಹೋಗಿ ಮೊಡವೆ, ಬೊಕ್ಕೆಯ ಸಮಸ್ಯೆ ಕಾಣಿಸಿಕೊಳ್ಳುವುದು. ಮೊಡವೆ ಹಾಗೂ ಮುಖದಲ್ಲಿ ಕಲೆ ನಿವಾರಣೆ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಿಗಳು ಲಭ್ಯವಿದೆ. ಆದರೆ ಇದಕ್ಕಿಂತ ಪರಿಣಾಮಕಾರಿ ಹಾಗೂ ಯಾವುದೇ ಅಡ್ಡಪರಿಣಾಮವಿಲ್ಲದ ವಿಧಾನವೆಂದರೆ ಅದು ನೈಸರ್ಗಿಕವಾಗಿ ಸಿಗುವ ಮದ್ದುಗಳು.
ನಿಮ್ಮ ತ್ವಚೆಯನ್ನು ಮತ್ತೆ ಕಾಂತಿಯುತವಾಗಿ ಮಾಡುವಂತಹ ಮನೆಮದ್ದುಗಳು ಇವೆ. ಕೇವಲ ಹತ್ತೇ ದಿನದಲ್ಲಿ ನಿಮ್ಮ ತ್ವಚೆಯನ್ನು ಸುಂದರವಾಗಿಸಿ ಹೊಳೆಯುವಂತೆಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ದಿನದಲ್ಲಿ ಮೂರು ನಾಲ್ಕು ಸಲ ಮುಖ ತೊಳೆದುಕೊಂಡರೆ ಚರ್ಮದಲ್ಲಿರುವ ಧೂಳು ಹಾಗೂ ಕಲ್ಮಶಗಳು ಹೊರಹೋಗುವುದು. ಅದೇ ರೀತಿ ಸರಿಯಾಗಿ ನೀರು ಕುಡಿಯಬೇಕು. ಚರ್ಮಕ್ಕೆ ಹಾನಿ ಉಂಟು ಮಾಡುವ ವಿಷಕಾರಿ ಅಂಶಗಳನ್ನು ಹೊರಹಾಕುವಂತಹ ಆಹಾರ ಸೇವನೆ ಮಾಡಬೇಕು
ನೀವು ಏನು ತಿನ್ನುತ್ತಿದ್ದೀರಾ ಎನ್ನುವುದು ಕೇವಲ ನಿಮ್ಮ ಆರೋಗ್ಯ ಮಾತ್ರವಲ್ಲದೆ ತ್ವಚೆಯ ಮೇಲೂ ಪರಿಣಾಮ ಬೀರುವುದು. ಹತ್ತು ದಿನಗಳಲ್ಲಿ ಸುಂದರ ತ್ವಚೆ ಪಡೆಯಬೇಕೆಂದರೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ಅತೀ ಅಗತ್ಯ. ಹತ್ತು ದಿನಗಳಲ್ಲಿ ಸುಂದರ ತ್ವಚೆ ಪಡೆಯಲು ಇರುವ ಹತ್ತು ಮನೆಮದ್ದುಗಳು ಇಲ್ಲಿವೆ….
ಮುಖದ ಸೌಂದರ್ಯ ಹೆಚ್ಚಿಸಲು ಸಲಹೆಗಳು
ಮುಖ ತೊಳೆಯಿರಿ
ಕಾಂತಿಯುತ ಹಾಗೂ ಸುಂದರ ತ್ವಚೆ ಪಡೆಯಲು ಇದು ಸರಳ ಉಪಾಯ. ಚರ್ಮಕ್ಕೆ ಹಾನಿ ಉಂಟುಮಾಡುವ ಧೂಳು, ಕಲ್ಮಶ ಮತ್ತು ಬ್ಯಾಕ್ಟೀರಿಯಾ ನಿವಾರಿಸಲು ಮುಖವನ್ನು ಆಗಾಗ ತೊಳೆಯಿರಿ. ಅದರಲ್ಲೂ ಬೆಳಿಗ್ಗೆ ಎದ್ದು ತಣ್ಣೀರಿನಿಂದ ಮುಖ ತೊಳೆದುಕೊಳ್ಳುವ ಮೂಲಕ ರಾತ್ರಿಯ ವಿಶ್ರಾಂತಿಯ ವೇಳೆ ತೆರೆದಿದ್ದ ಸೂಕ್ಷ್ಮರಂಧ್ರಗಳೆಲ್ಲಾ ಮುಚ್ಚುತ್ತವೆ. ಇದು ಕಣ್ಣುಗಳಿಗೂ ಆರಾಮವನ್ನು ನೀಡುತ್ತದೆ. ಇನ್ನು ಚರ್ಮದಲ್ಲಿ ನೆರಿಗೆ ಮೂಡದೇ ಇರಲು ತಣ್ಣೀರಿಗಿಂತ ಇನ್ನೊಂದು ನೆರಿಗೆ ನಿವಾರಕವಿಲ್ಲ. ಅಷ್ಟೇ ಅಲ್ಲ ಚರ್ಮದ ಸೆಳೆತ ಹೆಚ್ಚಿಸಿ ತಾರುಣ್ಯ ಮತ್ತು ಕಾಂತಿಯನ್ನುಹೆಚ್ಚಿಸುತ್ತದೆ. ನಿತ್ಯವೂ ಬೆಳಿಗ್ಗೆದ್ದ ತಕ್ಷಣ ಪ್ರಥಮ ವಾಗಿ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ವಯಸ್ಸಾಗುವುದನ್ನೂ ನಿಧಾನಗೊಳಿಸಬಹುದು.
ಸಕ್ಕರೆ ಮತ್ತು ಲಿಂಬೆ
ಹತ್ತು ದಿನಗಳಲ್ಲಿ ಕಾಂತಿಯುತ ಹಾಗೂ ಸುಂದರ ತ್ವಚೆ ಪಡೆಯಲು ಇದು ತುಂಬಾ ಒಳ್ಳೆಯ ಮದ್ದು. ಲಿಂಬೆಯು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡಿದರೆ, ಸಕ್ಕರೆಯು ಸತ್ತ ಚರ್ಮವನ್ನು ಕಿತ್ತೊಗೆಯುವುದು. ಪ್ರತಿನಿತ್ಯ ಸ್ನಾನ ಮಾಡುವ ಮೊದಲು ಸ್ಕ್ರಬ್ ಮಾಡಿ.
ಸುಂದರ ಹಾಗೂ ಕಾಂತಿಯುತ ತ್ವಚೆಗೆ…
ಕೇವಲ ಹತ್ತು ದಿನಗಳಲ್ಲಿ ಸುಂದರ ಹಾಗೂ ಕಾಂತಿಯುತ ತ್ವಚೆ ಪಡೆಯಬೇಕಾದರೆ ವಾರದಲ್ಲಿ ಮೂರು ಸಲ ಸತ್ತ ಚರ್ಮವನ್ನು ತೆಗೆದುಹಾಕಬೇಕು. ಇದರಿಂದ ಹೊಸ ಚರ್ಮವು ಮರಳಿ ಬರುವುದು.
ಹಾಲಿನಿಂದ ಶುದ್ಧಗೊಳಿಸುವುದು
ಕಾಂತಿಯುತ ತ್ವಚೆ ಪಡೆಯಲು ಹಾಲನ್ನು ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ಚರ್ಮದ ಆರೈಕೆಯ ವಿಧಾನಗಳಲ್ಲಿ ಬಳಸಲಾಗುತ್ತದೆ. ಹಾಲಿನಿಂದ ಮುಖ ತೊಳೆದರೆ ಮುಖಕ್ಕೆ ಕಾಂತಿ ಬರುವುದು ಮಾತ್ರವಲ್ಲದೆ ಕಪ್ಪು ಕಲೆಗಳು, ಕಪ್ಪು ವೃತ್ತ ಮತ್ತು ಬಿಸಿಲಿನಿಂದ ಆದ ಕಲೆಗಳ ನಿವಾರಣೆ ಆಗುವುದು.
ಹಾಲನ್ನು ಬಳಸುವುದು ಹೇಗೆ?
ಹತ್ತಿಯುಂಡೆಯೊಂದನ್ನು ಹಸಿ ಹಾಲಿನಲ್ಲಿ ಮುಳುಗಿಸಿ ಈ ಉಂಡೆಯನ್ನು ವೃತ್ತಾಕಾರಗಳಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಒರೆಸುತ್ತಿರಿ. ಸುಮಾರು ಐದು ನಿಮಿಷಗಳವರೆಗೆ ಹಸಿ ಹಾಲನ್ನು ಆಗಾಗ ಹಿಂಡಿಕೊಳ್ಳುತ್ತಾ ಮುಖ, ಕುತ್ತಿಗೆ ಕುತ್ತಿಗೆಯ ಭಾಗಗಳನ್ನು ಒರೆಸಿಕೊಳ್ಳಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಈ ವಿಧಾನದ ಉಪಯೋಗಗಳೇನು?
ಒಣಚರ್ಮ ಮತ್ತು ಪಕಳೆ ಏಳುವ ತೊಂದರೆ ಇರುವ ಚರ್ಮದವರಿಗೆ ಹಸಿಹಾಲು ಅಮೃತಸಮಾನವಾಗಿದೆ. ಚರ್ಮದ ಹೊರಪದರ ಒಣಗಿ ಪಕಳೆ ಏಳಲು ಚರ್ಮದ ಅಡಿಯಲ್ಲಿರುವ ನೈಸರ್ಗಿಕ ತೈಲಗಳ ಕೊರತೆಯೇ ಕಾರಣ. ಹಾಲು ಆರ್ದ್ರತೆಯನ್ನು ಒದಗಿಸುವ ಮೂಲಕ ಚರ್ಮ ಕಳೆದುಕೊಂಡಿದ್ದ ಈ ತೈಲಗಳನ್ನು ಉಳಿಸಿಕೊಳ್ಳಲು ಮತ್ತು ಚರ್ಮ ಪುನರ್ಜೀವನ ಪಡೆಯಲು ನೆರವಾಗುತ್ತದೆ.
ಹಬೆ
ಹಬೆಗೆ ಮುಖವನ್ನು ಇಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಂಡು ಸುಂದರ ತ್ವಚೆಯು ನಿಮ್ಮದಾಗುವುದು. ಹಬೆಗೆ ಮುಖವನ್ನು ಇಡಲು ನಿಮ್ಮಲ್ಲಿ ಸಮಯವಿಲ್ಲವೆಂದಾದರೆ ಆಗ ಬಿಸಿ ನೀರಿಗೆ ಟವೆಲ್ ನ್ನು ಮುಳುಗಿಸಿ ಮತ್ತು ಅದರಲ್ಲಿರುವ ಹೆಚ್ಚುವರಿ ನೀರನ್ನು ತೆಗೆದು ಮುಖದ ಮೇಲಿಡಿ. 10-15 ನಿಮಿಷ ಕಾಲ ಇದು ಹಾಗೆ ಇರಲಿ. ಇದು ಚರ್ಮದ ರಂಧ್ರಗಳು ತೆರೆದುಕೊಳ್ಳುವಂತೆ ಮಾಡುವುದು ಮತ್ತು ರಂಧ್ರದಲ್ಲಿರುವ ಧೂಳು ಮತ್ತು ಕಲ್ಮಷವು ಹೊರಹೋಗು ವುದು ಮತ್ತು ಮೊಡವೆಗಳ ನಿವಾರಣೆಯಾಗುವುದು.
ಫೇಸ್ ಪ್ಯಾಕ್
ಚರ್ಮದ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ವಿಶೇಷವಾದ ಫೇಸ್ ಪ್ಯಾಕ್ ನ್ನು ನೀವು ಬಳಸಿಕೊಳ್ಳಬಹುದು. ಉದಾಹಣೆಗೆ ಕೆಲವೊಂದು ಚಿಕ್ಕ ಹಣ್ಣುಗಳು, ಟೊಮೆಟೋ, ಲಿಂಬೆ ಮತ್ತು ದ್ರಾಕ್ಷಿಯನ್ನು ಮೊಡವೆ, ಗಾಢಕಲೆ ಮತ್ತು ಬಿಸಿಲಿನಿಂದ ಆದ ಕಲೆ ನಿವಾರಣೆ ಮಾಡಲು ಬಳಸಿಕೊಳ್ಳಲಾಗು ತ್ತದೆ.
ಮೇಕಪ್ ತೆಗೆಯಿರಿ
ಮನೆಗೆ ಬಂದ ಬಳಿಕ ನೀವು ತುಂಬಾ ಉದಾಸೀನವಾಗಿದ್ದು, ನಿದ್ರೆ ಬರುತ್ತಾ ಇದ್ದರೂ ಮುಖಕ್ಕೆ ಹಾಕಿಕೊಂಡಿರುವ ಮೇಕಪ್ ತೆಗೆಯದೆ ಮಲಗಬೇಡಿ. ತಾಜಾ ಮೇಕಪ್ ಮತ್ತು ಸ್ವಚ್ಛ ಬ್ರಷ್ ಬಳಸಿ.
ಮೊಡವೆ ಹಿಸಕಬೇಡಿ
ಮೊಡವೆ ಅಥವಾ ಬೊಕ್ಕೆಗಳು ಮುಖದಲ್ಲಿ ಕಾಣಿಸಿಕೊಂಡಾಗ ಜನರು ಮಾಡುವಂತಹ ಸಾಮಾನ್ಯ ತಪ್ಪೆಂದರೆ ಅದನ್ನು ಹಿಸುಕಿ ಹಾಕುವುದು. ಹಿಸುಕಿ ಹಾಕಿದರೆ ಮುಖದಲ್ಲಿ ಕಪ್ಪು ಕಲೆ ಉಳಿದುಕೊಳ್ಳುವುದು. ಮೊಡವೆ ಸಮಸ್ಯೆ ಅತೀಯಾಗಿ ಕಾಡುತ್ತಿದ್ದರೆ ಹೀಗೆ ಮಾಡಿ ತುಳಸಿ ಎಲೆಗಳನ್ನು ಒಣಗಿಸಿಕೊಂಡು ಹುಡಿ ಮಾಡಿ. ತುಳಸಿ ಹುಡಿ ಮತ್ತು ಶ್ರೀಗಂಧದ ಹುಡಿಯನ್ನು ನೀರು ಹಾಕಿ ಮಿಶ್ರಣ ಮಾಡಿ. ಚರ್ಮಕ್ಕೆ ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ರೋಸ್ ವಾಟರ್ ಬಳಸಿ. ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಂಡರೆ ಮೊಡವೆ ಇರುವ ಜಾಗವು ಕೆಲವೇ ದಿನಗಳಲ್ಲಿ ಸುಂದರವಾಗಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ.
ಚರ್ಮದ ತಪ್ಪುಗಳನ್ನು ಕಡೆಗಣಿಸಿ
ಮೊಡವೆ ಅಥವಾ ಬೊಕ್ಕೆಗಳನ್ನು ಹಿಸುಕಿ ಹಾಕುವುದು ಅಥವಾ ಅದರ ಗಾತ್ರ ಕಡಿಮೆ ಮಾಡಲು ಹಲ್ಲಿನ ಪೇಸ್ಟ್ ಬಳಸುವುದು ಸಾಮಾನ್ಯವಾಗಿದೆ. ಹೀಗೆ ಮಾಡಿದರೆ ಅದರಿಂದ ಕಲೆಗಳು ಉಳಿಯುವುದು. ಮೊಡವೆ ಅಥವಾ ಬೊಕ್ಕೆಯನ್ನು ಮುಟ್ಟಲು ಹೋಗಬೇಡಿ.
ನೀರು ಕುಡಿಯಿರಿ
ಸುಂದರ ಹಾಗೂ ಕಾಂತಿಯುತ ಚರ್ಮ ಪಡೆಯಲು ಸರಳ ವಿಧಾನವೆಂದರೆ ಸರಿಯಾಗಿ ನೀರು ಸೇವಿಸುವುದು. ನೀರು ಸೇವಿಸುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶ ಮತ್ತು ರಾಸಾಯನಿಕಗಳು ಹೊರಹೋಗಿ ಸುಂದರ ತ್ವಚೆಯು ನಿಮ್ಮದಾಗುವುದು.
ಸರಿಯಾಗಿ ನಿದ್ರೆ ಮಾಡಿ
ನಿದ್ರಾಹೀನತೆಯು ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರಬಹುದು. ಹತ್ತು ದಿನದಲ್ಲಿ ಸುಂದರ ತ್ವಚೆ ಪಡೆಯಲು ನೀವು ಸರಿಯಾಗಿ ನಿದ್ರೆ ಮಾಡಬೇಕು. ವಾರದಲ್ಲಿ ಒಂದು ಸಲ ತಲೆದಿಂಬಿನ ಕವರ್ ಬದಲಾಯಿಸಿ. ಯಾಕೆಂದರೆ ತಲೆಯಲ್ಲಿನ ಎಣ್ಣೆಯು ನಿಮ್ಮ ಚರ್ಮ ಸೇರಿಕೊಳ್ಳಬಹುದು.
ಸನ್ ಸ್ಕ್ರೀನ್ ಬಳಸಿ
ಯುವಿ ಕಿರಣಗಳು ಚರ್ಮಕ್ಕೆ ಹಾನಿಯುಂಟು ಮಾಡಿ ಕಪ್ಪು ಕಲೆಗಳನ್ನು ನಿರ್ಮಾಣ ಮಾಡುವುದು. ಇದರಿಂದ ನೇರವಾಗಿ ಬಿಸಿಲಿಗೆ ಚರ್ಮವನ್ನು ಒಡ್ಡಬೇಡಿ. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಸನ್ ಸ್ಕ್ರೀನ್ ಬಳಸಿಕೊಳ್ಳಿ.
ಟೋನಿಂಗ್
ಮುಖ ತೊಳೆಯುವುದರೊಂದಿಗೆ ನೀವು ಟೋನರ್ ಬಳಸಿಕೊಳ್ಳಬೇಕು. ಇದರಿಂದ ಬ್ಯಾಕ್ಟೀರಿಯಾ ಮತ್ತು ಚರ್ಮದಲ್ಲಿರುವ ಧೂಳು ಹೋಗುವುದು. ಕಪ್ಪು ಕಲೆಗಳನ್ನು ಇದು ನಿವಾರಣೆ ಮಾಡುವುದು.
ಫಾಸ್ಟ್ ಫುಡ್ ತ್ಯಜಿಸಿ
ತೈಲಯುಕ್ತ ಮತ್ತು ಫಾಸ್ಟ್ ಫುಡ್ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಎಣ್ಣೆಯಂಶ ಹೆಚ್ಚಾಗಿರುವ ಆಹಾರವು ಚರ್ಮದಲ್ಲಿ ಮೊಡವೆಗಳನ್ನು ಉಂಟು ಮಾಡಬಹುದು.

Comments are closed.