ಕುಂದಾಪುರ: ಇದೊಂದು ಪುಟ್ಟ ಊರು. ಸುಮಾರು ಇಪ್ಪತ್ತೈದಕ್ಕೂ ಅಧಿಕ ಮನೆಗಳಿಲ್ಲಿದೆ. ಆದ್ರೇ ಇಲ್ಲೆಲ್ಲೂ ಬಾವಿಗಳಿಲ್ಲ. ಇರೋ ಬಾವಿಗಳಲ್ಲೂ ನೀರಿಲ್ಲ. ಹಾಗಿದ್ರೂ ಕೂಡ ಇಲ್ಲಿನ ಜನರು ನೀರಿಗೆ ತಲೆಕೆಡಿಸಿಕೊಳ್ಳಲ್ಲ. ಕುಡಿಯೋಕೆ ಹಾಗೂ ಕೃಷಿ, ತೋಟಕ್ಕೂ ಇಲ್ಲಿ ಧಾರಾಳ ನೀರು ಸಿಗುತ್ತೆ. ಎಲ್ಲಿ ಕೂಡ ನೀರಿಗೆ ಬರ ಬಂದ್ರೂ ಯಾವ ವರ್ಷವೂ ಇಲ್ಲಿ ಮಾತ್ರ ನೀರಿಗೆ ಸಮಸ್ಯೆ ಬಂದಿಲ್ಲ. ಹಾಗಾದ್ರೇ ಅದು ಯಾವ ಊರು…ಇಲ್ಲಿನ ನೀರಿನ ಮೂಲ ಯಾವುದು ಅಂತೀರಾ.. ಈ ಸ್ಟೋರಿ ನೋಡಿ.
ಇದು ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಂಟನೇರಳು ಎಂಬ ಪುಟ್ಟ ಊರು. ಈ ಊರಿನಲ್ಲಿ ಶಿಲೆಕಲ್ಲು ಪಾರೆಗಳಿರುವ ಕಾರಣ ಬಾವಿ ತೆಗೆಯುವುದು ತುಂಬಾನೇ ಕಷ್ಟ. ಹಾಗೋಹೀಗೋ ಬಾವಿ ಅಥವಾ ಬೋರ್‌ವೆಲ್ ತೋಡಿಸಿದ್ರೂ ಕೂಡ ಅದರಲ್ಲಿ ನೀರು ಬರಲ್ಲ. ಸುಮಾರು ಇಪ್ಪತ್ತೈದಕ್ಕೂ ಜಾಸ್ಥಿಯಿರುವ ಇಲ್ಲಿನ ಮನೆಗಳಿಗೆ ನೀರು ಸಮಸ್ಯೆ ಈವರೆಗೂ ಬಂದಿಲ್ಲ. ಇಲ್ಲಿನ ಗಣಪತಿ ದೇವಸ್ಥಾನದ ಸಮೀಪ ಬೆಟ್ಟದ ಬುಡದಿಂದ ಹರಿದು ಬರುವ ಶುದ್ಧ ಸ್ಪಟಿಕದಂತಿರುವ ನೀರು ಇಲ್ಲಿನ ಹೊಂಡವೊಂದರಲ್ಲಿ ಶೇಖರಣೆಯಾಗುತ್ತೆ. ಇಲ್ಲಿರುವ ಎಲ್ಲಾ ಮನೆಗಳಿಗೆ ಈ ನೀರು ಆಧಾರ. ಕುಡಿಯಲು ಸೇರಿದಂತೆ ಕೃಷಿ, ತೋಟಗಳಿಗೆ ಹಾಗೂ ದೈನಂದಿನ ಉಪಯೋಗಕ್ಕೂ ಈ ನೀರು ಬಳಕೆಯಾಗುತ್ತೆ. ಈ ಮೊದಲು ಇಲ್ಲಿಗೆ ಬಂದು ನೀರು ಸಂಗ್ರಹಿಸಲಾಗುತ್ತಿತ್ತು. ಆದರೇ ಕಳೆದ ಹದಿನೈದು ವರ್ಷಗಳ ಹಿಂದೆ ಸ್ಥಳೀಯ ನಿವಾಸಿಯಾದ ರತ್ನಾಕರ ಆಚಾರ್ಯ ಎನ್ನುವವರು ಅರ್ಧ ಇಂಚಿನ ಪೈಪ್ ಅಳವಡಿಸಿ ಅದರ ಒಂದು ತುದಿಯನ್ನು ಹೊಂಡಕ್ಕೂ ಇನ್ನೊಂದು ತುದಿಯನ್ನು ಮನೆಗೆ ಅಳವಡಿಸುತ್ತಾರೆ. ಪೈಪಿಗೆ ನೀರು ತುಂಬಿದ್ರೇ ನೇರ ಇವರ ಮನೆಗೆ ನೀರು ಸರಬರಾಜುತ್ತೆ. ಇದಕ್ಕೆ ಯಾವ ವಿದ್ಯುತ್ ಸಂಪರ್ಕ ಕೂಡ ಬೇಡ. ಇವರ ತರುವಾಯ ಎಲ್ಲಾ ಮನೆಯವರು ಇದೇ ದಾರಿ ಕಂಡುಕೊಂಡ್ರು.
ಸುಮಾರು ನೂರು ವರ್ಷಕ್ಕಿಂತ ಅಧಿಕ ವರ್ಷಗಳ ಇತಿಹಾಸ ಈ ನೀರಿನ ಮೂಲವಿರುವ ಈ ಸ್ಥಳಕ್ಕಿದೆ. ಇಲ್ಲಿರುವ ಗಣಪತಿ ವಿಗ್ರಹ ಮೊದಲು ನೀರು ಜಿನುಗುವ ಆ ಸ್ಥಳದಲ್ಲಿದ್ದು ಹದಿನೈದು ವರ್ಷಗಳ ಹಿಂದೆ ಗಣಪತಿಯನ್ನು ಪ್ರತಿಷ್ಟಾಪಿಸಿ ಚಿಕ್ಕದೊಂದು ದೇವಸ್ಥಾನವನ್ನು ಮಾಡಲಾಗಿದೆ. ನಮ್ಮೂರಿಗೆ ನೀರು ಕೊಡುವುದು ಇದೇ ಗಣಪತಿ ಎನ್ನುವ ನಂಬಿಕೆ ಕೂಡ ಇಲ್ಲಿನ ಜನರದ್ದು. ಈ ನೀರು ಕುಡಿಯಲು ಬಲು ರುಚಿಯಾಗಿರುವುದಲ್ಲದೇ ಯಾವುದೇ ರೀತಿಯ ರೋಗ-ರುಜಿನಗಳು ಹತ್ತಿರಕ್ಕೂ ಸುಳಿಯಲ್ಲವಂತೆ. ಬೇಸಿಗೆ ಬಂದರೂ ಕೂಡ ಇಲ್ಲಿ ನೀರು ಬತ್ತಲ್ಲ. ಒಂದೊಮ್ಮೆ ನೀರು ಕಮ್ಮಿಯಾದ್ರೂ ಕೂಡ ಕ್ಷಣದಲ್ಲೇ ಮತ್ತೆ ಫುಲ್ ಆಗುತ್ತೆ. ಕಡು ಬೇಸಿಗೆಯಲ್ಲೂ ಇಲ್ಲಿ ಮರಗಿಡಗಳು, ಹೂದೋಟಗಳು ನಳನಳಿಸುತ್ತೆ. ಅಡಿಕೆ, ಬಾಳೆ, ತೆಂಗು ತೋಟಗಳು ಹಸನಾಗಿರುತ್ತೆ. ಕೆಳ ಪ್ರದೇಶದ ಹದಿನೈದು ಮನೆಗಳಿಗೆ ಪೈಪ್ ಮೂಲಕ ನೀರು ಸರಬರಾಜಾಗುತ್ತೆ, ಆ ನೀರನ್ನು ಟ್ಯಾಂಕಿಗೆ ಹಾಯಿಸಿ ಅಲ್ಲಿಂದ ನೀರನ್ನು ನಿತ್ಯೋಪಯೋಗಕ್ಕೆ ಬಳಸಲಾಗುತ್ತೆ. ಮೇಲ್ಪ್ರದೇಶದ ಉಳಿದ ಒಂಬತ್ತು ಮನೆಯವರು ನೀರಿನ ಹೊಂಡವಿರುವ ಸ್ಥಳಕ್ಕೆ ಬಂದು ನೀರು ಸಂಗ್ರಹ ಮಾಡುತ್ತಾರೆ.
ಒಟ್ಟಿನಲ್ಲಿ ಪ್ರಕೃತಿ ವಿಸ್ಮಯವೋ..ಅಥವಾ ಜನರೇ ಹೇಳುವ ಹಾಗೆ ದೇವರ ಕೃಪೆಯೋ …ಈ ಭಾಗದ ಜನರಿಗೆ ಮಾತ್ರ ಶುದ್ಧ ನೀರು ಅನುದಿನವೂ ಸಿಗುತ್ತಿರುವುದು ಮಾತ್ರ ಸುಳ್ಳಲ್ಲ.
——————-
ಚಿತ್ರ, ವರದಿ- ಯೋಗೀಶ್ ಕುಂಭಾಸಿ