ಕರಾವಳಿ

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ನೂತನ ಕಚೇರಿ ಉದ್ಘಾಟನೆ‌ | ಸಾಮಾನ್ಯ ಜನರ ಕಾರ್ಯಾಲಯವಾಗಲಿ: ಕೋಟ

Pinterest LinkedIn Tumblr

ಕುಂದಾಪುರ: ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಬೇಧವಿಲ್ಲದೆ ಕೆಲಸ ಮಾಡುವ ಸಾಮರ್ಥ್ಯ ನೂತನ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರದ್ದಾಗಿದೆ ಎಂದು ಮಾಜಿ ಶಾಸಕ, ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಕುಂದಾಪುರ ತಾಲೂಕು ಪಂಚಾಯತ್ ನಲ್ಲಿ ಶುಕ್ರವಾರದಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ನೂತನ ಶಾಸಕರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಭಾಜಪಾ ಪಕ್ಷ ಗೆಲ್ಲಿಸುವ ಮೂಲಕ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವಾಗಬೇಕು. ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಅಭಿವೃದ್ಧಿ ಕಾರ್ಯ ತಲುಪಬೇಕು. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಸಾಮಾನ್ಯ ಜನರ ಕಾರ್ಯಾಲಯವಾಗಲಿ: ಕೋಟ
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂದಾಪುರ ಹೃದಯ ಭಾಗ ಶಾಸ್ತ್ರೀ ವೃತ್ತದಲ್ಲಿ ಶಾಸಕರ ಕಚೇರಿ ಉದ್ಘಾಟನೆಗೊಂಡಿದ್ದು ಕ್ಷೇತ್ರದ ಜನರಿಗೆ ಇಲ್ಲಿ ಭೇಟಿ ನೀಡಿ ಅಹವಾಲು ನೀಡಲು ಸುಲಭವಾಗುತ್ತದೆ. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭಿವೃದ್ಧಿ ಹಾದಿಯಲ್ಲಿ ಹಾಲಿ ಶಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಸಕರ ಕಚೇರಿಯ ಮೂಲಕ ಜನರ ಕಡತಗಳ ಸುಲಭ ವಿಲೇವಾರಿಯಾಗಿ ಸರಕಾರಿ ಕೆಲಸಗಳು ಶೀಘ್ರವಾಗಿ ನಡೆಯಬೇಕು. ಇದೊಂದು ಅಭಿವೃದ್ಧಿ ಕೇಂದ್ರವಾಗಿ ಸಾಮಾನ್ಯ ಜನರ ಕಾರ್ಯಾಲಯವಾಗಲಿ ಎಂದು ಆಶಿಸಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇದು ಸರಕಾರಿ ಕಚೇರಿಯಾಗಿದ್ದು ಜನ ಸಾಮಾನ್ಯರಿಗೆ ಆಗಬೇಕಾದ ಕೆಲಸ ಕಾರ್ಯಗಳು ಶೀಘ್ರವಾಗಿ ಪೂರೈಸಲು ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಶನಿವಾರ ನಾನು ಜನರಿಗೆ ಲಭ್ಯವಿರುತ್ತೇನೆ. ಉಳಿದ ದಿನಗಳಲ್ಲಿ ಇಬ್ಬರು ಆಪ್ತ ಸಹಾಯಕರು ಕಚೇರಿಯಲ್ಲಿದ್ದು ಜನರಿಗೆ ಸ್ಪಂದನೆ ನೀಡಲಿದ್ದಾರೆ ಎಂದರು.

ಪ್ರಮುಖರಾದ ರಾಜೇಶ್ ಕಾವೇರಿ, ಕಾಡೂರು ಸುರೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಭಾಸ್ಕರ ಬಿಲ್ಲವ ಹೇರಿಕುದ್ರು, ಸಂಪತ್ ಕುಮಾರ್ ಶೆಟ್ಟಿ, ಸಬ್ಲಾಡಿ ಜಯರಾಮ ಶೆಟ್ಟಿ, ರಮೇಶ ಶೆಟ್ಟಿ, ಅಲ್ತಾರು ಗೌತಮ್ ಹೆಗ್ಡೆ, ಮಡಾಮಕ್ಕಿ ಶಶಿಧರ್ ಶೆಟ್ಟಿ, ರೂಪಾ ಪೈ, ಶ್ರೀಲತಾ ಸುರೇಶ್ ಶೆಟ್ಟಿ, ತಾ.ಪಂ ಇಒ ಭಾರತಿ, ಪುರಸಭೆ ಸದಸ್ಯರು, ಗ್ರಾ‌ಪಂ ಪ್ರತಿನಿಧಿಗಳು ಇದ್ದರು.

ಆಪ್ತ ಕಾರ್ಯದರ್ಶಿ ಮಹಿಮ್ ಶೆಟ್ಟಿ ನಿರೂಪಿಸಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಸ್ವಾಗತಿಸಿದರು.

Comments are closed.