ಅಂತರಾಷ್ಟ್ರೀಯ

13 ವರ್ಷಗಳ ಕಾಲ ಘನೀಕೃತ ಅಂಡಾಶಯ ಅಂಗಾಂಶವನ್ನು ಕಸಿ ಮಾಡಿ ತಾಯಿಯಾದ ವಿಶ್ವದ ಮೊದಲ ಏಕೈಕ ಮಹಿಳೆ

Pinterest LinkedIn Tumblr

baby_mother_forzen-2

ಲಂಡನ್ : ದುಬೈನ 24ರ ಹರೆಯದ ಮೊವಾಝಾ ಅಲ್ ಮತ್ರೂಷಿ ಮಂಗಳವಾರ ಲಂಡನ್ನಿನ ಪೋರ್ಟ್ಲ್ಯಾಂಡ್ ಆಸ್ಪತ್ರೆಯಲ್ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ರಶೀದ್ ಎಂದು ನಾಮಕರಣ ಮಾಡಲಾಗಿದೆ.

ಇದರಲ್ಲೇನು ವಿಶೇಷ ಎನ್ನುವಿರಾ? ಹೌದು…ವಿಶೇಷವಿದೆ. ಮೊವಾಝಾ ತನ್ನ ಋತುಚಕ್ರ ಆರಂಭಗೊಳ್ಳುವ ಮುನ್ನ ತೆಗೆದು ಕಾಯ್ದಿರಿಸಲಾಗಿದ್ದ ಅಂಡಾಶಯ ಅಂಗಾಂಶ ವನ್ನು ಬಳಸಿಕೊಂಡು ಯಶಸ್ವಿಯಾಗಿ ಗರ್ಭ ಧರಿಸಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಅಲ್ಲದೆ 13 ವರ್ಷಗಳ ಕಾಲ ಘನೀಕೃತ ಸ್ಥಿತಿಯಲ್ಲಿದ್ದ ಅಂಡಾಶಯ ಅಂಗಾಂಶವನ್ನು ಕಸಿ ಮಾಡಲಾದ ವಿಶ್ವದ ಏಕೈಕ ಮಹಿಳೆಯಾಗಿದ್ದಾಳೆ.
”ನನ್ನ ಮಗು ನನ್ನ ಮಡಿಲಲ್ಲಿದೆ. ಇದಕ್ಕಾಗಿ ನಾವು ಬಹಳ ವರ್ಷಗಳಿಂದ ಕಾಯುತ್ತಿದ್ದೆವು ” ಎಂದು ಮಾತೃತ್ವದ ಸಂತಸದಿಂದ ಬೀಗುತ್ತಿದ್ದ ಮೊವಾಝಾ ಹೇಳಿದಳು

9ರ ಹರೆಯದಲ್ಲಿ ಸೋದರನಿಂದ ದಾನ ಪಡೆದ ಅಸ್ಥಿಮಜ್ಜೆಯನ್ನು ಕಸಿ ಮಾಡಲು ಮೊವಾಝಾಳನ್ನು ಹೆತ್ತವರು ಲಂಡನ್ನಿನ ಗ್ರೇಟ್ ಆರ್ಮಂಡ್ ಸ್ಟ್ರೀಟ್ ಆಸ್ಪತ್ರೆಗೆ ಕರೆ ತಂದಿದ್ದರು.

ಮೊವಾಝಾ ಬೀಟಾ ಥಲಸ್ಸೇಮಿಯಾ ಕಾಯಿಲೆಗೆ ತುತ್ತಾಗಿದ್ದು ವೈದ್ಯರ ತಪಾಸಣೆ ವೇಳೆ ಬೆಳಕಿಗೆ ಬಂದಿತ್ತು. ಇದು ರೋಗಿಯ ರಕ್ತದಲ್ಲಿ ಪ್ರಾಣವಾಯುವನ್ನು ಸಾಗಿಸುವ ಸಾಮರ್ಥ್ಯವನ್ನು ಕುಂದಿಸುತ್ತದೆ.

baby_mother_forzen1

ಮೊವಾಝಾಗೆ ಕಿಮೊಥೆರಪಿಯ ಅಗತ್ಯವಿತ್ತು. ಆದರೆ ಇದರಿಂದ ಆಕೆ ಪ್ರೌಢಾವಸ್ಥೆಗೆ ಕಾಲಿರಿಸಿದಾಗ ಫಲವತ್ತತೆ ಅಥವಾ ಗರ್ಭ ಧರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಶೇ.99ರಷ್ಟು ಅಪಾಯವಿತ್ತು. ಆದರೆ ಭವಿಷ್ಯದಲ್ಲಿ ಮರುಕಸಿ ಮಾಡಲು ಅಂಡಾಶಯ ಅಂಗಾಂಶವನ್ನು ತೆಗೆದು ಘನೀಕರಿಸಬಹುದಾದ ಪರ್ಯಾಯದ ಬಗ್ಗೆ ಆಕೆಯ ತಾಯಿ ಓದಿದ್ದಳು. ಮಗಳ ಭವಿಷ್ಯಕ್ಕಾಗಿ ಇದಕ್ಕೆ ಸಿದ್ಧರಾದ ಹೆತ್ತವರು ಆಕೆಯನ್ನು ಮುಂದಿನ ಚಿಕಿತ್ಸೆಗಾಗಿ ಲೀಡ್ಸ್ನಲ್ಲಿಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಅವಳ ಬಲ ಅಂಡಾಶಯವನ್ನು ತೆಗೆದು ಘನೀಕರಿಸಿದ ಸ್ಥಿತಿಯಲ್ಲಿ ಕಾಯ್ದಿರಿಸಲಾಗಿತ್ತು.

ಇಷ್ಟಾದ ಬಳಿಕ ಮೊವಾಝಾಗೆ ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಚೇತರಿಸಿಕೊಂಡ ಬಳಿಕ ಆಕೆ ದುಬೈಗೆ ಮರಳಿದ್ದಳು. 20ರ ಹರೆಯದಲ್ಲಿ ಅಹ್ಮದ್ ಜೊತೆ ಅವಳ ಮದುವೆಯೂ ನಡೆದಿತ್ತು. ಮದುವೆಯ ಬಳಿಕ ಆಕೆಗೆ ಋತುಚಕ್ರದ ಸಮಸ್ಯೆಗಳು ತಲೆದೋರಿದ್ದವು. ಸಹಜವಾಗಿ ಮಗುವನ್ನು ಪಡೆಯಲು ದಂಪತಿ ನಡೆಸಿದ್ದ ಪ್ರಯತ್ನಗಳು ವಿಫಲಗೊಂಡಿದ್ದವು.

2014ರಲ್ಲಿ ಮತ್ತೆ ಲಂಡನ್ನಿಗೆ ಬಂದ ಮೊವಾಝಾಳ ಕುಟುಂಬ ಪೋರ್ಟ್ಲ್ಯಾಂಡ್ ಆಸ್ಪತ್ರೆಯ ಸ್ತ್ರೀರೋಗಗಳ ತಜ್ಞೆ ಸಾರಾ ಮ್ಯಾಥ್ಯೂಸ್ರನ್ನು ಭೇಟಿಯಾಗಿದ್ದರು. ಆಕೆಯ ಅಂಡಾಶಯವು ಮತ್ತೆ ಕೆಲಸ ಮಾಡುವಂತಾಗಲು ಮತ್ತು ಮಗುವಿಗೆ ಜನ್ಮ ನೀಡಲು ಸಾಧ್ಯವಾಗುವಂತೆ ಸಾರಾ ನೆರವು ನೀಡಲಿದ್ದರು. ಮೊವಾಝಾ ಸಹಜವಾಗಿಯೇ ಜನ್ಮ ಧರಿಸುವಂತೆ ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡ ಬಳಿಕ ಸಾರಾ ಹಾರ್ಮೋನ್ ಚಿಕಿತ್ಸೆ ಪಡೆಯುವಂತೆ ಸಲಹ ನೀಡಿ ಮೊವಾಝಾಳನ್ನು ದುಬೈಗೆ ವಾಪಸ್ ಕಳುಹಿಸಿದ್ದರು.

”ತುಂಬ ನೋವಿನಿಂದಲೇ ನಾನು ಬರಿಗೈಯಲ್ಲಿ ದುಬೈಗೆ ವಾಪಸಾಗಿದ್ದೆ ” ಎಂದು ಮೊವಾಝಾ ನೆನಪು ಮಾಡಿಕೊಂಡಳು.
2015ರಲ್ಲಿ ಮೊವಾಝಾ ದುಬೈಗೆ ಮರಳಿದ ಬಳಿಕ ಘನೀಕೃತ ಅಂಗಾಂಶವನ್ನು ಮೊವಾಝಾಳ ದೇಹದಲ್ಲಿ ಮರುಕಸಿ ಮಾಡಲು ಸಿದ್ಧವಿದ್ದ ಡೆನ್ಮಾರ್ಕ್ನ ವೈದ್ಯರ ತಂಡವೊಂದನ್ನು ಸಾರಾ ಪತ್ತೆ ಹಚ್ಚಿದ್ದರು. 13 ವರ್ಷಗಳ ಸುದೀರ್ಘಾವಧಿಗೆ ಘನೀಕೃತ ಸ್ಥಿತಿಯಲ್ಲಿರುವ ಅಂಗಾಂಶವನ್ನು ಮರುಕಸಿ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಆ ಕಾರ್ಯಕ್ಕೆ ಸಿದ್ಧವಿರುವ ತಂಡವನ್ನು ಪತ್ತೆ ಹಚ್ಚಿದ್ದು ಸಾರಾ ಪಾಲಿಗೆ ದೊಡ್ಡ ಸಾಧನೆಯಾಗಿತ್ತು.
ಸಾರಾರ ಸೂಚನೆಯ ಮೇರೆಗೆ ಲಂಡನ್ನಿಗೆ ಮರಳಿದ ಮೊವಾಝಾಳಿಗೆ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ವೈದ್ಯರು ಅಂಡಾಶಯದ ಅಂಗಾಂಶದ ಸಣ್ಣ ಸಣ್ಣ ಚೂರುಗಳನ್ನು ಆಕೆಯ ದೇಹದಲ್ಲಿ ಮರುಕಸಿ ಮಾಡುತ್ತ ರಕ್ತನಾಳ ರೂಪುಗೊಳ್ಳುವುದಕ್ಕಾಗಿ ಕಾಯುತ್ತಿದ್ದರು. ಹಾಗೆ ರಕ್ತನಾಳ ರೂಪುಗೊಂಡ ನಂತರ ಅದಕ್ಕೆ ರಕ್ತಪೂರಣ ಮಾಡಿ ಕಾರ್ಯ ನಿರ್ವಹಿಸುವಂತೆ ಮಾಡಬೇಕಾಗಿತ್ತು. ಅಂಗಾಂಶ ಮೊವಾಝಾಳದೇ ಆಗಿದ್ದರಿಂದ ಅದನ್ನು ಆಕೆಯ ದೇಹವು ತಿರಸ್ಕರಿಸುವ ಅಥವಾ ಆಕೆಯ ದೇಹದ ಪ್ರತಿರೋಧ ವ್ಯವಸ್ಥೆ ಅದರ ವಿರುದ್ಧ ದಾಳಿ ನಡೆಸುವ ಕಳವಳವಿರಲಿಲ್ಲ.

ಅಂಡಾಂಶಯ ಅಂಗಾಂಶದ ಸಣ್ಣ ಸಣ್ಣ ಚೂರುಗಳನ್ನು ಮರುಕಸಿ ಮಾಡಿದ ಬಳಿಕ ಪೂರ್ಣ ಪ್ರಮಾಣದ ಕಾರ್ಯಸಮರ್ಥ ಅಂಡಾಶಯ ರೂಪುಗೊಂಡಿತ್ತು. ಮೂರು ತಿಂಗಳ ಬಳಿಕ ಮೊವಾಝಾಳ ಅಂಡಾಶಯವು ಉತ್ಪಾದಿಸಿದ್ದ ಮೂರು ಅಂಡಗಳನ್ನು ಸಾರಾ ತೆಗೆದು ಕಾದಿರಿಸಿದ್ದರು. ಮೊವಾಝಾಳಿಗೆ ಸಹಜ ಗರ್ಭಧಾರಣೆ ಯಾಗುವುದೇ ಎಂದು ಕೆಲವು ತಿಂಗಳು ಕಾದು ನೋಡಿದ ಬಳಿಕ ಫಲವತ್ತತೆಗಾಗಿ ಆಕೆಗೆ ಐವಿಎಫ್ ಚಿಕಿತ್ಸೆಯನ್ನು ಆರಂಭಿಸಿದ್ದರು. 2016 ಎಪ್ರಿಲ್ನಲ್ಲಿ ಮೊವಾಝಾ ಗರ್ಭ ಧರಿಸಿದ್ದಳು. ಕಳೆದ ಮಂಗಳವಾರ ಮಗುವಿನ ತಾಯಿಯೂ ಆಗಿದ್ದಾಳೆ.

‘ಮೊದಲ ಪ್ರಯೋಗ’ವೇ ಆಗಿದ್ದ 13 ವರ್ಷಗಳ ಕಾಲ ಘನೀಕೃತ ಸ್ಥಿತಿಯಲ್ಲಿದ್ದ ಅಂಗಾಂಶದ ಮರುಕಸಿ ಯಶಸ್ವಿಯಾಗಿದ್ದಕ್ಕೆ ಸಾರಾ ತುಂಬ ಖುಷಿಯಾಗಿದ್ದಾರೆ. ಈ ರೀತಿ ಅಂಗಾಂಶವನ್ನು ಕಾಯ್ದಿರಿಸಲು ಇನ್ನಷ್ಟು ಸೌಲಭ್ಯಗಳು ಅಗತ್ಯ ಎಂದಿರು ವ ಅವರು,ಎಳವೆಯಲ್ಲೇ ಕ್ಯಾನ್ಸರ್ ಅಥವಾ ಬೀಟಾ ಥಲಸ್ಸೇಮಿಯಾದಂತಹ ಕಾಯಿಲೆಗಳಿಗೆ ಗುರಿಯಾಗಿರುವ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಈ ತಂತ್ರಜ್ಞಾನದ ಲಾಭ ದೊರಕುವಂತಾಗಕಲು ಆರ್ಥಿಕ ನೆರವು ಲಭ್ಯವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.

ಕೃಪೆ : ವಾಭಾ

Comments are closed.