ಕರ್ನಾಟಕ

ಮನಸ್ಸಿನ ಖಿನ್ನತೆ ಹೊಗಲಾಡಿಸಲು ನಮಗೆ ನಾವೇ ಸಾಟಿ… ನಿಜನೇ …ಸುಳ್ಳೇ…..?

Pinterest LinkedIn Tumblr

depression_loanly

ಮಂಗಳೂರು: ಗೃಹಿಣಿಯಾಗುವುದು ಜಗತ್ತಿನ ಅತ್ಯಂತ ಕಷ್ಟದ ಕೆಲಸ. ಅವರು ಮನೆಯ ಎಲ್ಲಾ ಆಗು-ಹೋಗುಗಳನ್ನು ಮತ್ತು ಕುಟುಂಬದ ಸದಸ್ಯರ ಯೋಗ ಕ್ಷೇಮವನ್ನು ನೋಡಿಕೊಳ್ಳುವ ಕೆಲಸವನ್ನು ಮಾಡಬೇಕಾಗುತ್ತದೆ. ಇಡೀ ಮನೆಯ ಜವಾಬ್ದಾರಿ ಅವರ ಮೇಲೆ ಇರುತ್ತದೆ. ಬೆಳಗ್ಗೆ ಸೂರ್ಯ ಹುಟ್ಟುವುದಕ್ಕೆ ಮೊದಲು ಆರಂಭವಾಗುವ ಇವರ ಕೆಲಸವು ಒಮ್ಮೊಮ್ಮೆ ಮಧ್ಯರಾತ್ರಿಯವರೆಗೆ ನಡೆಯುವುದುಂಟು. ಇಡೀ ದಿನ ಕೆಲಸ ಮಾಡಿ ಸುಸ್ತಾಗುವುದು ಗೃಹಿಣಿಯರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಪ್ರತಿಯೊಬ್ಬ ಗೃಹಿಣಿಯರು ಕುಟುಂಬದ ಬೆನ್ನೆಲುಬಾಗಿರುತ್ತಾರೆ. ಕೆಲವು ಗೃಹಿಣಿಯರು ತಮ್ಮ ಮನೆಯ ಕೆಲಸವನ್ನು ಯಾವುದೇ ಒತ್ತಡವಿಲ್ಲದೆ ನಿಭಾಯಿಸುತ್ತಾರೆ, ಆದರೆ ಕೆಲವರು ಹತಾಶೆ ಮತ್ತು ಕೆಲಸದ ಆಯಾಸ ಹಾಗು ಒತ್ತಡದಿಂದ ಬಳಲಿ ಬೆಂಡಾಗುತ್ತಾರೆ.

ಗೃಹಿಣಿಯರ ಒತ್ತಡಕ್ಕೆ ಮತ್ತು ಖಿನ್ನತೆಗೆ ಪದೇ ಪದೇ ಕಾರಣವಾಗುವ ಕೆಲವೊಂದು ಅಂಶಗಳನ್ನು ಇಲ್ಲಿ ನೀಡಲಾಗಿದೆ:

* ಮೆಚ್ಚುಗೆಯ ಕೊರತೆ: ಗೃಹಿಣಿಯರು ಖಿನ್ನತೆಗೆ ಕಾರಣವಾಗುವ ಅತಿದೊಡ್ಡ ಕಾರಣಗಳಲ್ಲಿ ಮೆಚ್ಚುಗೆಯ ಕಾರಣವೇ ಮುಖ್ಯವಾಗಿರುತ್ತದೆ. ಅವರು ತಾವು ಮಾಡುವ ಕೆಲಸಕ್ಕೆ ಕುಟುಂಬದ ಸದಸ್ಯರಿಂದ ಮೆಚ್ಚುಗೆಯನ್ನು ಬಯಸುತ್ತಾರೆ ಅಥವಾ ತಾವು ಮಾಡುವ ಕೆಲಸವನ್ನು ಇತರರು ಗುರುತಿಸಬೇಕು ಎಂದು ಭಾವಿಸುತ್ತಾರೆ.

* ಲಘುವಾಗಿ ಪರಿಗಣಿಸುವಿಕೆ: ಗೃಹಿಣಿಯರು ಇಲ್ಲದಿದ್ದರೆ ಮನೆ ನಿಭಾಯಿಸುವುದು ಕಷ್ಟ ಎಂದು ಎಲ್ಲರಿಗೂ ಗೊತ್ತು. ಆದರೆ ಗೃಹಿಣಿಯರನ್ನು ಮನೆಯಲ್ಲಿ ಯಾವಾಗಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಪರಿಗಣಿಸುತ್ತಾರೆ. ಇದು ಗೃಹಿಣಿಯರಿಗೆ ಖಿನ್ನತೆ ಮತ್ತು ಒತ್ತಡ ಉಂಟು ಮಾಡಲು ಇರುವ ಇನ್ನೊಂದು ಕಾರಣವಾಗಿದೆ.

* ಬಿಡುವಿಲ್ಲದ ಕೆಲಸ: ಮನೆಯಲ್ಲಿ ಕೊನೆ ಮೊದಲಿಲ್ಲದ ಕೆಲಸವು ಗೃಹಿಣಿಯರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಸರಿಯಾಗಿ ಹೇಳಬೇಕೆಂದರೆ ಗೃಹಿಣಿಯರು ಎಂದರೆ ಯಾವುದೇ ಅನಾರೋಗ್ಯದ ಇಲ್ಲವೇ ಸಾಂದರ್ಭಿಕ ಹಾಗು ಸಾರ್ವಜನಿಕ ರಜೆಯನ್ನು ನೀಡದೆ ದುಡಿಸಿಕೊಳ್ಳಬಹುದಾದ ಒಬ್ಬ ಮಹಿಳಾ ಕಾರ್ಮಿಕರು ಎಂದರೆ ತಪ್ಪಾಗಲಾಗದು. ಇಂತಹ ಅಮಾನವೀಯ ಕೆಲಸವು ಇವರಿಗೆ ಒತ್ತಡ ಜೊತೆಗೆ ಖಿನ್ನತೆ ಎಂಬ ವೇತನ ಹಾಗು ತುಟ್ಟಿ ಭತ್ಯೆಯನ್ನು ನೀಡುತ್ತದೆ.

* ಹೋಲಿಕೆ ಮಾಡುವುದು: ಜನರು ಸಾಮಾನ್ಯವಾಗಿ ಗೃಹಿಣಿಯರನ್ನು ಇತರೆ ಕೆಲಸಕ್ಕೆ ಹೊರಗಡೆ ಹೋಗುವ ಮಹಿಳೆಯರ ಜೊತೆಗೆ ಹೋಲಿಸುತ್ತಿರುತ್ತಾರೆ. ಇಂತಹ ಜನರು ಗೃಹಿಣಿಯರು ಆರ್ಥಿಕವಾಗಿ ಉತ್ಪಾದಕವಾದಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಎಂದು ಹೀಯಾಳಿಸುತ್ತ ಅವರ ಮನಸ್ಸಿಗೆ ನೋವನ್ನುಂಟು ಮಾಡುತ್ತಾರೆ.

ಖಿನ್ನತೆಯ ಲಕ್ಷಣಗಳು:
* ಗಂಭೀರವಾದ ಒತ್ತಡ ಮತ್ತು ಮೇಲೆ ಸೂಚಿಸಲಾದ ಅಂಶಗಳಿಗೆ ಗುರಿಯಾಗುವಿಕೆಯು ಮಹಿಳೆಯರನ್ನು ಖಿನ್ನತೆಗೆ ತುತ್ತಾಗುವಂತೆ ಮಾಡುತ್ತದೆ. ಈ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯ ಲಕ್ಷಣಗಳು ಈ ಅಂಶಗಳನ್ನು ಒಳಗೊಂಡಿರುತ್ತದೆ:
* ನಿಷ್ಪ್ರಯೋಜಕ ಅಥವಾ ಹತಾಶ ಭಾವನೆ
* ಕಿರಿಕಿರಿ ಮತ್ತು ಸಣ್ಣ ಸಣ್ಣ ವಿಚಾರಗಳಿಗೆ ಕೋಪೋದ್ರಿಕ್ತವಾಗುವುದು
* ಸಾಮಾಜೀಕವಾಗಿ ಬೆರೆಯುವ ಆಸಕ್ತಿಯನ್ನು ಕಳೆದುಕೊಳ್ಳುವಿಕೆ
* ನಿದ್ರಾ ಭಂಗವಾಗುವಿಕೆ
* ಮಂದ ಮತ್ತು ಸುಸ್ತಾಗಿದ್ದೇವೆ
* ಕುಟುಂಬ ಸದಸ್ಯರೊಂದಿಗೆ ವಾದ ವಿವಾದ ಮಾಡುವುದು ಮತ್ತು ಜಗಳ ಮಾಡುವುದು
* ಒಬ್ಬರೇ ಕುಳಿತು ಅಳಬೇಕು ಎನಿಸುವುದು

ಇದಕ್ಕೆ ಪರಿಹಾರ ಕಂಡುಕೊಳ್ಳುವ ವಿಧಗಳು:
* ಒಂದು ವೇಳೆ ನೀವು ಗೃಹಿಣಿಯಾಗಿದ್ದಲ್ಲಿ ಮತ್ತು ಈ ಮೇಲೆ ಸೂಚಿಸಿರುವ ಒಂದು ಅಥವಾ ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿದ್ದರೇ, ಈ ಕೆಳಕಂಡ ಕಾರ್ಯಗಳನ್ನು ಮಾಡುವ ಮೂಲಕ ನಿಮಗೆ ನೀವೇ ಸಹಾಯ ಮಾಡಿಕೊಳ್ಳಬಹುದು.
* ನಿಮ್ಮ ಕುಟುಂಬ ಸದಸ್ಯರ ಜೊತೆಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ: ನಿಮ್ಮ ಅನುಭವಕ್ಕೆ ಬಂದಿರುವ ಸಮಸ್ಯೆಗಳ ಕುರಿತಾಗಿ ನಿಮ್ಮ ಸಂಗಾತಿ ಹಾಗು ಕುಟುಂಬದ ಇತರೆ ಸದಸ್ಯರ ಜೊತೆಗೆ ಮುಖಾಮುಖಿ ಸಂವಾದವನ್ನು ನಡೆಸಿ. ಅವರ ಬೆಂಬಲ ಮತ್ತು ಸಹಾಯವನ್ನು ಕೇಳಿ.
* ಸಮಯ ನಿರ್ವಹಣೆ: ನೀವು ಇಡೀ ದಿನ ಏನು ಮಾಡಬೇಕು ಎಂಬುದನ್ನು ಆಲೋಚಿಸಿ, ಎಲ್ಲಾ ಮನೆಕೆಲಸಗಳ ಪಟ್ಟಿಯನ್ನು ಮಾಡಿ. ಒಂದು ನಿರ್ದಿಷ್ಟಪಡಿಸಲಾದ ಕಾಲಮಿತಿಯೊಳಗೆ ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಆಮೇಲೆ ಸ್ವಲ್ಪ ಸಮಯವನ್ನು ನಿಮ್ಮ ವಿಶ್ರಾಂತಿಗೆ ಹಾಗು ಅಕ್ಕ-ಪಕ್ಕದ ಮನೆಯವರು ಇಲ್ಲವೇ ಸ್ನೇಹಿತರು ಹಾಗು ಪ್ರೀತಿ ಪಾತ್ರರ ಜೊತೆಗೆ ಬೆರೆಯಲು ಪ್ರಯತ್ನಿಸಿ.
* ಹೊರಗೆ ಹೋಗಿ: ಕನಿಷ್ಠ ವಾರಕ್ಕೊಮ್ಮೆ ಶಾಪಿಂಗ್ ಇಲ್ಲವೇ, ಸ್ನೇಹಿತರನ್ನು ಭೇಟಿ ಮಾಡಲು ಹೊರಗೆ ಹೋಗಿ ಬನ್ನಿ. ಪ್ರೀತಿ ಪಾತ್ರರು ಇಲ್ಲವೇ ಮುದ ನೀಡುವ ಕೆಲಸಗಳನ್ನು ಮಾಡಿದರೆ ಮನೆಯಲ್ಲಿನ ಒತ್ತಡವನ್ನು ಮರೆಯಲು ಸಹಾಯವಾಗುತ್ತದೆ.
* ದೈಹಿಕ ಚಟುವಟಿಕೆ: ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಖಿನ್ನತೆಯನ್ನು ದೂರ ಮಾಡಿಕೊಳ್ಳಬಹುದು ಎಂದು ಈಗಾಗಲೇ ಸಾಭೀತಾಗಿದೆ. ವ್ಯಾಯಾಮವು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಸುಸ್ತನ್ನು ತಡೆಯುತ್ತದೆ. ನಿಮಗೆ ಇಷ್ಟವಾಗುವ ಯಾವುದಾದರು ಒಂದು ವ್ಯಾಯಾಮ ತರಗತಿಗೆ ದಾಖಲಾಗಿ ಅಥವಾ ಪ್ರತಿದಿನ 30 ನಿಮಿಷಗಳ ಕಾಲ ಸುಮ್ಮನೆ ನಡೆದಾಡಿ.
* ಸರಿಯಾದ ನಿದ್ರೆ: ಒಳ್ಳೆಯ ಮತ್ತು ಶಾಂತಿಯುತವಾದ ನಿದ್ದೆಯು ಉತ್ತಮ ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ. ನಿದ್ದೆಯು ನಿಮ್ಮ ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ನಿಮ್ಮ ಮುಂದಿನ ದಿನವನ್ನು ಆಹ್ಲಾದಕವಾಗಿ ಇರಿಸುತ್ತದೆ. ಆದ್ದರಿಂದ, ಪ್ರತಿ ದಿನ 8 ಗಂಟೆಗಳಷ್ಟು ಕಾಲ ನಿದ್ದೆ ಮಾಡುವ ಗುರಿಯನ್ನು ಇರಿಸಿಕೊಳ್ಳಿ.
* ವಿಶ್ರಾಂತಿಯ ತಂತ್ರಗಳು: ಧ್ಯಾನ, ಯೋಗ, ಅಥವಾ ಆಳವಾದ ಉಸಿರಾಟದಂತಹ ವಿಶ್ರಾಂತಿಯ ತಂತ್ರಗಳನ್ನು ಪ್ರಯತ್ನಿಸಿ. ಖಿನ್ನತೆ, ಒತ್ತಡ, ಆತಂಕ ನಿವಾರಿಸಲು ಮತ್ತು ಸಂತೋಷ ಭಾವನೆಯನ್ನು ಹೆಚ್ಚಿಸಿಕೊಳ್ಳಲು ಹಾಗು ಖಿನ್ನತೆಯನ್ನು ನಿವಾರಿಸಲು ಈ ತಂತ್ರಗಳು ನಿಮಗೆ ಸಹಾಯ ಮಾಡುತ್ತವೆ.
* ಸಹಾಯ ಪಡೆಯಿರಿ: ಒಂದು ವೇಳೆ ನಿಮ್ಮ ಖಿನ್ನತೆಯ ರೋಗ ಲಕ್ಷಣಗಳು ಹೆಚ್ಚಾದಲ್ಲಿ ಅಥವಾ ಗಂಭೀರ ಸ್ವರೂಪಕ್ಕೆ ತಿರುಗಿದಲ್ಲಿ, ಅದನ್ನು ನಿವಾರಿಸಿಕೊಳ್ಳಲು ತಜ್ಞರ ಸಹಾಯವನ್ನು ಪಡೆಯಿರಿ.

ಒಮ್ಮೆ ಖಿನ್ನತೆಗೆ ತುತ್ತಾದರೇ, ಅದರಿಂದ ಹೊರ ಬರಲು ಮತ್ತೆ ನಾವು ಉತ್ತಮ ಮನಃಸ್ಥಿತಿಯನ್ನು ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಅದು ಅಸಾಧ್ಯವೇನು ಅಲ್ಲ! ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವು ಇದನ್ನು ಸಾಧಿಸಬಹುದು. ಇದಕ್ಕಾಗಿ ನೀವು ನಿಮ್ಮ ಪ್ರೀತಿ ಪಾತ್ರರ ಸಹಾಯವನ್ನು ಸಹ ಪಡೆಯಬಹುದು.

Comments are closed.